ಸಿನಿವಾಣಿ

ರವಿಚಂದ್ರನ್ ಕಣ್ಣಲ್ಲಿ ಈ ದೃಶ್ಯ; ಅಪ್ಪ ಆದವನು ಭಯ ತೋರಿಸಬಾರದು..

ರವಿಚಂದ್ರನ್ ಅಭಿನಯದ ‘ದೃಶ್ಯ 2’ ಇಂದು ಬಿಡುಗಡೆಯಾಗುತ್ತಿದೆ. ಏಳು ವರ್ಷಗಳ ಹಿಂದೆ ಬಿಡುಗಡೆಯಾದ ಅವರದ್ದೇ ಅಭಿನಯದ ಮುಂದುವರಿದ ಭಾಗ ಇದು. ‘ದೃಶ್ಯ’ ಮಾಡುವ ಹೊತ್ತಿಗಾಗಲೀ, ನಂತರವಾಗಲೀ ಆ ಕಥೆಯನ್ನು ಇನ್ನಷ್ಟು ಬೆಳೆಸಬಹುದು ಅಥವಾ ಮುಂದುವರಿದ ಭಾಗ ಮಾಡಬಹುದು ಎಂದು ಯಾವತ್ತಾದರೂ ರವಿಚಂದ್ರನ್ ಯೋಚಿಸಿದ್ದುಂಟಾ? ಖಂಡಿತಾ ಇಲ್ಲ ಎಂಬ ಉತ್ತರ ಅವರಿಂದ ಬರುತ್ತದೆ. ಅಷ್ಟೇ ಅಲ್ಲ, ಮಲಯಾಳಂನವರೂ ಸಹ ಆ ಕಥೆಯನ್ನು ಮುಂದುವರಿಸಬಹುದು ಎಂದು ಯೋಚಿಸಿದ್ದರೋ ಇಲ್ಲವೋ ಗೊತ್ತಿಲ್ಲ ಎನ್ನುತ್ತಾರೆ ಅವರು. ‘ಬಹುಶಃ ಇಂಥದ್ದೊಂದು ಕಥೆ ಲಾಕ್​ಡೌನ್ ಸಂದರ್ಭದಲ್ಲಿ ಹೊಳೆದಿರುವ ಸಾಧ್ಯತೆ ಇದೆ. ಆಗ ದೊಡ್ಡ ಚಿತ್ರಗಳನ್ನು ಮಾಡುವುದಕ್ಕೆ ಸಾಧ್ಯವಿರಲಿಲ್ಲ. ಹೆಚ್ಚು ಜನರನ್ನು ಸೇರಿಸುವುದಕ್ಕೆ ಆಗುತ್ತಿರಲಿಲ್ಲ. ಹಾಡು, ಫೈಟು, ಚೇಸು ... ಎಲ್ಲವೂ ಕಷ್ಟ. ದೊಡ್ಡದಾಗಿ ಯೋಚಿಸುವುದೇ ಕಷ್ಟವಾಗಿದ್ದಂಥ ಸಂದರ್ಭದಲ್ಲಿ ‘ದೃಶ್ಯಂ 2’ ಒಂದು ದಾರಿ ಮಾಡಿಕೊಟ್ಟಿರಬಹುದು. ಇಂಥದ್ದೊಂದು ಕಥೆ ಹುಟ್ಟಿರಬಹುದು. ಹೇಗೂ ಈ ಚಿತ್ರದಲ್ಲಿ ಪಾತ್ರಗಳು ಕಡಿಮೆ, ದೃಶ್ಯಗಳು ಜಾಸ್ತಿ. ಅದನ್ನು ಬರೆಯುವುದಕ್ಕೆ ಹೋಗಿ ಯಶಸ್ವಿಯಾಗಿದ್ದಾರೆ’ ಎನ್ನುತ್ತಾರೆ ರವಿಚಂದ್ರನ್.

ನಿರ್ದೇಶಕರಿಗೆ ಹ್ಯಾಟ್ಸ್ ಆಫ್: ಎರಡನೇ ಭಾಗ ಶುರುವಾಗುವ ರೀತಿ ನೋಡಿಯೇ, ಈ ರೀತಿಯೂ ಸಿನಿಮಾ ಶುರು ಮಾಡಬಹುದಾ? ಎಂಬ ಪ್ರಶ್ನೆ ರವಿಚಂದ್ರನ್ ಅವರಿಗೆ ಬಂತಂತೆ. ‘ಆ ತರಹ ಯೋಚನೆ ಮಾಡೋದಕ್ಕೆ ಆಗುವುದಿಲ್ಲ. ಎಲ್ಲ ಕ್ರೆಡಿಟ್ ನಿರ್ದೇಶಕ ಮತ್ತು ಕಥೆ ಬರೆದಿರುವ ಜೀತು ಜೋಸಫ್​ಗೆ ಸಲ್ಲಬೇಕು. ಬಹಳ ಬುದ್ಧಿವಂತಿಕೆಯಿಂದ ಸ್ಕ್ರಿಪ್ಟ್ ಮಾಡಿದ್ದಾರೆ ಅವರು. ಚಿತ್ರದ ದ್ವಿತೀಯಾರ್ಧ ಯೋಚನೆ ಮಾಡೋದೂ ಕಷ್ಟ. ನಾವು ಮಾಡಿದರೂ ಬೇರೆ ರೀತಿಯಲ್ಲಿ ಮಾಡಬಹುದೇನೋ? ಏಕೆಂದರೆ, ನಾವು ಯಾವತ್ತೂ ಆ ಬಗ್ಗೆ ಯೋಚಿಸಿಲ್ಲ. ಬಹುಶಃ ಏನಾದರೂ ಮಾಡಬೇಕು ಎಂದು ಕೂತಿದ್ದರೆ, ನಮಗೂ ಏನಾದರೂ ಹೊಳೆಯುತ್ತಿತ್ತೋ ಏನೋ? ನಾವು ಯೋಚನೆಯೇ ಮಾಡಿಲ್ಲಿದ್ದರಿಂದ, ಅವರ ಯೋಚನೆಗೆ ಹ್ಯಾಟ್ಸ್ ಆಫ್’ ಎಂಬ ಮೆಚ್ಚುಗೆ ಅವರಿಂದ ಬರುತ್ತದೆ.

ಆ ಚಿತ್ರಕ್ಕೊಂದು ಒಳ್ಳೆಯ ಗುಣವಿದೆ: ‘ದೃಶ್ಯಂ 2’ ಹಿಟ್ ಆಗುತ್ತಿದ್ದಂತೆಯೇ, ಅದನ್ನು ಕನ್ನಡದಲ್ಲಿ ರಿಮೇಕ್ ಮಾಡುವ ಪ್ರಯತ್ನ ಶುರುವಾಯಿತಂತೆ. ಒಂದು ಹಂತದಲ್ಲಿ ರವಿಚಂದ್ರನ್ ಅವರೇ ರಿಮೇಕ್ ಹಕ್ಕುಗಳನ್ನು ಪಡೆಯುವುದಕ್ಕೆ ಮುಂದಾಗಿದ್ದಾರೆ. ಕೊನೆಗೆ ಮೂಲ ನಿರ್ವಪಕರೇ ಆಸಕ್ತಿ ತೋರಿಸಿ ಚಿತ್ರದ ಹಕ್ಕುಗಳನ್ನು ಪಡೆದಿದ್ದಾರೆ. ‘ಒಂದು ತಂಡ ಏಳು ವರ್ಷಗಳ ನಂತರ ಮತ್ತೆ ಜತೆಯಾಗಿ ಒಂದು ಕಥೆಯ ಮುಂದುವರಿದ ಭಾಗ ಮಾಡುವುದು ಬಹಳ ಅಪರೂಪ. ಅದರಲ್ಲೂ ‘ದೃಶ್ಯ’ ಚಿತ್ರ ಬಿಡುಗಡೆಯಾಗಿ ಇಷ್ಟು ವರ್ಷಗಳಾದರೂ ಜನ ಮರೆತಿಲ್ಲ. ಜನರ ತಲೆಯಲ್ಲಿ ಇನ್ನೂ ಆ ಕಥೆ ಮತ್ತು ರಾಜೇಂದ್ರ ಪೊನ್ನಪ್ಪ ಪಾತ್ರ ಹಾಗೆಯೇ ಉಳಿದುಕೊಂಡಿದೆ. ‘ದೃಶ್ಯ’ ಸಿನಿಮಾಗೆ ಒಂದೊಳ್ಳೆಯ ಗುಣವಿದೆ. ಅದೊಂದು ಪಕ್ಕಾ ಫ್ಯಾಮಿಲಿ ಚಿತ್ರ. ಎಲ್ಲರೂ ಒಟ್ಟಾಗಿ ಕುಳಿತು ಯಾವುದೇ ಮುಜುಗರ ಇಲ್ಲದೆ ನೋಡುವ ಚಿತ್ರ. ಅದೇ ಕಾರಣಕ್ಕೆ ಎಲ್ಲರಿಗೂ ಇಷ್ಟವಾಗುತ್ತದೆ’ ಎಂದು ರವಿಚಂದ್ರನ್ ಅಭಿಪ್ರಾಯ ಪಡುತ್ತಾರೆ.

ಮದುವೆಯಾದರೂ ತುಂಟತನ ಬಿಡಬಾರದು: ಮೂಲ ಚಿತ್ರಕ್ಕೂ, ಈ ಚಿತ್ರಕ್ಕೂ ಹೆಚ್ಚು ಬದಲಾವಣೆಯಾಗಿಲ್ಲ ಎನ್ನುವ ರವಿಚಂದ್ರನ್, ತಮ್ಮ ಅಭಿನಯದಲ್ಲಿ ಒಂದಿಷ್ಟು ಬದಲಾವಣೆಗಳನ್ನು ಕಾಣಬಹುದು ಎನ್ನುತ್ತಾರೆ. ‘ಅಪ್ಪ ಆದವನು ಭಯ ತೋರಿಸಬಾರದು ಎಂಬುದು ನನ್ನ ನಿಲುವು. ಏಕೆಂದರೆ, ಅಪ್ಪ ಡಿಸ್ಟರ್ಬ್ ಆದರೆ, ಕುಟುಂಬ ಸಹ ವಿಚಲಿತವಾಗುತ್ತದೆ. ಹಾಗಾಗಿ, ಅದನ್ನು ಇಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ. ಇನ್ನು, ನಮಗೆ ಎಷ್ಟೇ ವಯಸ್ಸಾದರೂ ತುಂಟತನ ಇರಬೇಕು ಎಂಬುದು ನನ್ನ ಭಾವನೆ. ಪ್ರೇಮಿಗಳು ಗಂಡ-ಹೆಂಡತಿ ಆದಮೇಲೆ ತುಂಟತನ ಬಿಟ್ಟು ಗಂಭೀರವಾಗಿರುವುದನ್ನು ತೋರಿಸಲಾಗುತ್ತದೆ. ಇದನ್ನು ನಾನು ಒಪು್ಪವುದಿಲ್ಲ. ಗಂಡ-ಹೆಂಡತಿಯಾದರೂ, ಪ್ರೇಮಿಗಳಾಗಿ ಇರುವುದಕ್ಕೆ ಯಾಕೆ ಸಾಧ್ಯವಿಲ್ಲ? ಮಕ್ಕಳು ಎಷ್ಟೇ ದೊಡ್ಡವರಾದರೂ ಗಂಡ-ಹೆಂಡತಿಯ ನಡುವೆ ಪ್ರೀತಿ, ತುಂಟತನ ಹಾಗೆಯೇ ಇರಬೇಕು. ಅಪ್ಪ-ಅಮ್ಮನ ನಗು, ತುಂಟತನ ನೋಡಿದರೆ ಮಕ್ಕಳು ಸಹ ಸಂತೋಷವಾಗಿರುತ್ತಾರೆ. ಅದನ್ನು ಎಲ್ಲ ಚಿತ್ರಗಳಲ್ಲೂ ಹಿಡಿದಿಡುವ ಪ್ರಯತ್ನ ಮಾಡುತ್ತೇನೆ. ಇದರಲ್ಲೂ ಅದೇ ಮುಂದುವರಿದಿದೆ. ಅದು ಬಿಟ್ಟರೆ, ಮನರಂಜನೆ ಇರಲಿ ಎಂಬ ಕಾರಣಕ್ಕೆ ಸಾಧು ಕೋಕಿಲ ಪಾತ್ರವನ್ನು ತರಲಾಗಿದೆ’ ಎನ್ನುತ್ತಾರೆ.

ಕಣ್ಣಲ್ಲೂ ನಟಿಸಬಹುದು: ‘ದೃಶ್ಯ 2’ರಲ್ಲಿ ಕಣ್ಣಲ್ಲಿ ಎಷ್ಟು ಆಟ ಆಡಬಹುದು ಎಂದು ತೋರಿಸುವುದಕ್ಕೆ ಹೊರಟಿದ್ದಾರಂತೆ ರವಿಚಂದ್ರನ್. ‘ಇಲ್ಲಿ ದ್ವಿತೀಯಾರ್ಧದಲ್ಲಿ ಹೆಚ್ಚು ಮಾತಿರುವುದಿಲ್ಲ. ಈ ಸಂದರ್ಭದಲ್ಲಿ ಕಣ್ಣಲ್ಲೇ ಆಟ ಆಡಬೇಕು. ಎಲ್ಲ ಪ್ರಶ್ನೆಗಳಿಗೂ ಕಣ್ಣಲ್ಲೇ ಉತ್ತರ ಕೊಡಬೇಕು. ‘ರವಿ ಬೋಪಣ್ಣ’ದಲ್ಲೂ ಆ ಪ್ರಯತ್ನ ಮಾಡಿದ್ದೇನೆ. ಆಚೆ ಬರುವಾಗ ನನ್ನ ಕಣ್ಣು ಜನರ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ. ಹೀಗೂ ಅಭಿನಯ ಮಾಡಬಹುದು ಎಂದು ಈ ಎರಡೂ ಸಿನಿಮಾಗಳು ತೋರಿಸುತ್ತವೆೆ’ ಎಂಬ ನಂಬಿಕೆ ಅವರಿಗಿದೆ.