ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ಸ್ಟೈಲ್ ಐಕಾನ್, ಅಭಿನಯ ಚಕ್ರವರ್ತಿ ಹಾಗೂ ಎಲ್ಲರ ನೆಚ್ಚಿನ ಬಾದ್ಷಾ ಕಿಚ್ಚ ಸುದೀಪ್ ಇಂದು (ಸೆ.02) 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಾಮೂಲಿಯಂತೆಯೇ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸಿನಿಮಾಗಳ ಅಪ್ಡೇಟ್ನೊಂದಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
ಪ್ರತಿಬಾರಿ ಮನೆಯ ಮುಂದೆ ಸುದೀಪ್ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದರು. ಹಾರ-ತುರಾಯಿ, ಕೇಕ್ ಮತ್ತು ಗಿಫ್ಟ್ ಸೇರಿದಂತೆ ಯಾವುದನ್ನು ತೆಗೆದುಕೊಂಡು ಬರಬೇಡಿ, ಅದೇ ಹಣದಲ್ಲಿ ನಿರಾಶ್ರಿತರಿಗೆ ಏನಾದರೂ ಸಹಾಯ ಮಾಡಿ ಎಂದು ಕೋರಿದ್ದರು. ಮೊನ್ನೆಯಷ್ಟೇ ಪತ್ರಿಕಾಗೋಷ್ಠಿ ಕರೆದಿದ್ದ ಕಿಚ್ಚ ಈ ಬಾರಿಯು ಇದೇ ಮನವಿಯನ್ನು ಮಾಡಿದ್ದರು. ಆದರೂ ಅಭಿಮಾನಿಗಳು ಜೆಪಿ ನಗರದಲ್ಲಿರುವ ಕಿಚ್ಚನ ಮನೆಯ ಮುಂದೆ ರಾತ್ರಿಯೇ ಜಮಾಯಿಸಿದ್ದರು. ಅಭಿಮಾನಿಗಳಿಗೆ ನಿರಾಸೆ ಮಾಡಬಾರದು ಅಂತ ಮನೆಯಿಂದ ಹೊರಬಂದು ಅಭಿಮಾನಿಗಳನ್ನು ಸಂತೈಸಿದರು.
ಪತ್ನಿ, ಪುತ್ರಿ ಜತೆ ಕೇಕ್ ಕತ್ತರಿಸಿದ ಕಿಚ್ಚ 51ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಮಧ್ಯರಾತ್ರಿ ತಮ್ಮ ಪತ್ನಿ ಪ್ರಿಯಾ ಸುದೀಪ್, ಪುತ್ರಿ ಸಾನ್ವಿ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಚಿತ್ರರಂಗದ ಕೆಲ ಕಲಾವಿದರು ಕೂಡ ಈ ಸಂಭ್ರಮಕ್ಕೆ ಸಾಕ್ಷಿಯಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕಿಚ್ಚನಿಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಅಭಿಮಾನಿಗಳ ಭೇಟಿ ಇಂದು ಬೆಳಗ್ಗೆ 10 ಗಂಟೆಯಿಂದ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಕಿಚ್ಚ ಸುದೀಪ್ ಅವರು ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ಜಯನಗರದ ಟೆಲಿಫೋನ್ ಎಕ್ಸ್ಚೇಂಜ್ ಆಫೀಸ್ ಬಳಿ ಇರುವ ಎಂಇಎಸ್ ಮೈದಾನದಲ್ಲಿ ಸುದೀಪ್ ಅವರು ಅಭಿಮಾನಿಗಳನ್ನು ಭೇಟಿಯಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಲಿದ್ದಾರೆ. ಈ ವೇಳೆಯೂ ಯಾರೂ ಹಾರ-ತುರಾಯಿ ಹಾಗೂ ಕೇಕ್ಗಳನ್ನು ತರದಂತೆ ಮನವಿ ಮಾಡಿಕೊಂಡಿದ್ದಾರೆ. ಸುದೀಪ್ ಮತ್ತು ಅಭಿಮಾನಿಗಳ ಭೇಟಿಗೆ ಪೊಲೀಸರು ಕೆಲವೇ ಗಂಟೆಗಳ ಕಾಲ ಅವಕಾಶ ನೀಡಿರುವುದರಿಂದ ಸಹಕರಿಸುವಂತೆ ಸುದೀಪ್, ಅಭಿಮಾನಿಗಳ ಬಳಿ ಕೇಳಿಕೊಂಡಿದ್ದಾರೆ.
ಗಣೇಶ ಹಬ್ಬಕ್ಕೆ ಮ್ಯಾಕ್ಸ್ ರಿಲೀಸ್ ಡೇಟ್ ಅನೌನ್ಸ್
ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ತನು ಅವರೊಂದಿಗೆ ಕಿಚ್ಚ ಸುದೀಪ್ ಮ್ಯಾಕ್ಸ್ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ರಿಲೀಸ್ ಆಗಲಿದೆ. ಇದು ನಿರ್ದೇಶಕ ವಿಜಯ್ ಕಾರ್ತಿಕೇಯ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಆಗಿದೆ. ಕಿಚ್ಚನ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಈ ಚಿತ್ರದ ಮೊದಲ ಲಿರಿಕಲ್ ಹಾಡು ಇಂದು ಬೆಳಗ್ಗೆ 6.54ಕ್ಕೆ ಬಿಡುಗಡೆಯಾಯಿತು. ಸುದೀಪ್ ಸಿಕ್ಕಾಪಟ್ಟೆ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಕೊನೆಯಲ್ಲಿ ಮ್ಯಾಕ್ಸ್ ಚಿತ್ರದ ಬಿಡುಗಡೆ ದಿನಾಂಕವನ್ನು ಆಗಸ್ಟ್ 7ರ ಗಣೇಶ ಚತುರ್ಥಿಯಂದು ಘೋಷಣೆ ಮಾಡುವುದಾಗಿ ಚಿತ್ರತಂಡ ಮತ್ತೊಂದು ಅಪ್ಡೇಟ್ ನೀಡಿದ್ದು, ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.
ಬಿಆರ್ಬಿ ಅಪ್ಡೇಟ್
ವಿಕ್ರಾಂತ್ ರೋಣ ಬಳಿಕ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಮತ್ತೊಮ್ಮೆ ಜತೆಯಾಗುತ್ತಿದ್ದಾರೆ. ಬಿಲ್ಲಾ ರಂಗ ಭಾಷಾ ಸಿನಿಮಾ ಮೂಲಕ ಇಬ್ಬರು ಒಟ್ಟುಗೂಡಲಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಈ ಚಿತ್ರದ ಅಪ್ಡೇಟ್ ಸಿಗಲಿದೆ. ಈ ಸಿನಿಮಾ ಎರಡು ಭಾಗಗಳಲ್ಲಿ ಬರಲಿದ್ದು, ತನ್ನ ವೃತ್ತಿ ಜೀವನದಲ್ಲಿ ಈ ಸಿನಿಮಾ ಅತಿದೊಡ್ಡ ಸಿನಿಮಾ ಎಂದು ಸ್ವತಃ ಕಿಚ್ಚ ಸುದೀಪ್ ಅವರೇ ಹೇಳಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ದುಪ್ಪಟಾಗಿಸಿದೆ.