ಸಿನಿವಾಣಿ

ಸೆಲೆಬ್ರಿಟಿಗಳದ್ದು ನಾರ್ಸಿಸ್ ಧೋರಣೆ! ಬಾಡಿಗೆ ತಾಯ್ತನದ ಬಗ್ಗೆ ಹೆಚ್ಚಾಗುತ್ತಿದೆ ಆಕ್ರೋಶ...

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ದಂಪತಿ ಕೆಲ ದಿನಗಳ ಹಿಂದಷ್ಟೆ ಬಾಡಿಗೆ ತಾಯ್ತನದ ಮೂಲಕ ಹೆಣ್ಣುಮಗುವನ್ನು ಪಡೆದು ಪೋಷಕರಾಗಿದ್ದಾರೆ. ಈ ವಿಷಯವನ್ನು ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ಬಹಳಷ್ಟು ಸೆಲೆಬ್ರಿಟಿಗಳು ಬಾಡಿಗೆ ತಾಯ್ತನ ಮೂಲಕ ಮಕ್ಕಳನ್ನು ಪಡೆದಿದ್ದಾರೆ. ಆದರೆ, ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ದಂಪತಿಯಿಂದ ಈ ಬಾಡಿಗೆ ತಾಯ್ತನದ ವಿಷಯ ಈಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸದ್ಯ ಇದೇ ಹಾಟ್ ಟಾಪಿಕ್ ಎಂದರೂ ತಪ್ಪಾಗುವುದಿಲ್ಲ.
ನಮ್ಮ ದೇಶದಲ್ಲಿಯೇ ಹಲವು ಸೆಲೆಬ್ರಿಟಿಗಳು, ಅದರಲ್ಲಿಯೂ ಬಾಲಿವುಡ್​ನಲ್ಲಿ ಸರೊಗಸಿ ಮಾದರಿಯಲ್ಲಿ ಮಗು ಪಡೆದಿದ್ದಾರೆ. ನಿರ್ಮಾಪಕ ಕರಣ್ ಜೋಹರ್, ನಟ ಶಾರುಖ್ ಖಾನ್, ನಟಿ ಪ್ರೀತಿ ಜಿಂಟಾ, ನಿರ್ಮಾಪಕಿ ಏಕ್ತಾ ಕಪೂರ್, ನಟ ತುಷಾರ್ ಕಪೂರ್, ನಟಿ ಸನ್ನಿ ಲಿಯೋನ್, ನಟ ಶ್ರೇಯಸ್ ತಲಪಡೆ, ನಟಿ ಶಿಲ್ಪಾ ಶೆಟ್ಟಿ ಹೀಗೆ ಹಲವಾರು ಸೆಲೆಬ್ರಿಟಿಗಳು ಈ ಮಾದರಿಯಲ್ಲಿ ಮಗು ಪಡೆದಿದ್ದಾರೆ. ಸರೊಗಸಿ ವಿಧಾನದಲ್ಲಿ ಮಕ್ಕಳನ್ನು ಹೆತ್ತು ಕೊಡಲು ಹಲವು ಮಹಿಳೆಯರು ಸಾಲುಗಟ್ಟಿದ್ದಾರೆ ಎನ್ನಲಾಗುತ್ತದೆ. ಜತೆಗೆ, ಮಗು ಜನಿಸಿದ ನಂತರವೂ ಯಾವ ಮಹಿಳೆಯಿಂದ ಮಕ್ಕಳನ್ನು ಪಡೆದಿರುವ ಮಾಹಿತಿಯನ್ನು ಹೊರಕ್ಕೆ ಬರದಂತೆ ಸೆಲೆಬ್ರಿಟಿಗಳು ಎಚ್ಚರಿಕೆ ವಹಿಸುತ್ತಾರೆ.
ಹೀಗಾಗಿ, ಇತ್ತೀಚೆಗೆ ಜನಪ್ರಿಯ ಲೇಖಕಿ ತಸ್ಲಿಮಾ ನಸ್ರಿನ್ ಅವರು, ''ಬಾಡಿಗೆ ತಾಯ್ತನ ಬಡ ಮಹಿಳೆಯರ ಮೇಲೆ ನಡೆವ ದೌರ್ಜನ್ಯ'' ಎಂದು ತೀವ್ರವಾಗಿ ಖಂಡಿಸಿದ್ದಾರೆ. ಅಂದಹಾಗೆ, ಸರೊಗಸಿ ಮಾದರಿಯಲ್ಲಿ ಹೆಚ್ಚು ತಾರಾ ದಂಪತಿಗಳು, ಆರೋಗ್ಯವಂತ ಮಹಿಳೆಯೊಬ್ಬರನ್ನು ಆಯ್ಕೆ ಮಾಡಿಕೊಂಡು ಆವರಿಗೆ ಹಣ ನೀಡಿ, ಅವರಿಂದ ಮಗುವನ್ನು ಪಡೆದು ತಾವು ಪೋಷಕರಾಗುತ್ತಾರೆ. ಹಣ ಪಡೆವ ಬಾಡಿಗೆ ತಾಯಿ ಒಂಬತ್ತು ತಿಂಗಳು ಹೊತ್ತು, ಹೆತ್ತ ಮಗುವನ್ನು ದಂಪತಿಗಳಿಗೆ ನೀಡಿ, ನಂತರ ಆ ಮಗುವಿನೊಂದಿಗೆ ಎಲ್ಲಾ ಸಂಬಂಧ ಕಳೆದುಕೊಳ್ಳುತ್ತಾರೆ. ಈ ಸರೊಗಸಿ ವಿಧಾನವನ್ನು ಮುಂಚೆ ಇಂದ ಖಂಡಿಸಲಾಗುತ್ತಿದೆ.
ಲೇಖಕಿ ತಸ್ಲಿಮಾ ನಸ್ರಿನ್ ಅವರು, ''ಸಮಾಜದಲ್ಲಿ ಬಡ ಮಹಿಳೆಯರು ಇದ್ದಾರೆ ಎಂಬ ಕಾರಣಕ್ಕೆ ಸರೋಗಸಿ ಚಾಲ್ತಿಯಲ್ಲಿದೆ. ಶ್ರೀಮಂತರಿಗೆ ಅವರು ಸುಕವಾಗಿರಲು ಸಮಾಜದಲ್ಲಿ ಬಡತನ ಎಂಬುದು ಇರಲೆಬೇಕು. ಬಡತನ ತೊಲಗಲು ಅವರು ಬಯಸುವುದಿಲ್ಲ. ಸೆಲೆಬ್ರಿಟಿಗಳಿಗೆ ನಿಜವಾಗಿಯೂ ಮಗುವನ್ನು ಪಡೆದುಕೊಳ್ಳುವುದು ಇಷ್ಟವಾದಲ್ಲಿ ಯಾವುದಾದರು ಅನಾಥ ಮಗುವನ್ನು ದತ್ತು ಪಡೆಯಬಹುದು. ಮಕ್ಕಳು ನಿಮ್ಮ ಗುಣಲಕ್ಷಣಗಳನ್ನು ಅನುವಂಶಿಕವಾಗಿ ಪಡೆಯಬೇಕು. ಹೀಗೆ, ಸರೊಗಸಿ ಮಾದರಿಯಲ್ಲಿ ಮಗು ಪಡೆಯುವುದು ಸ್ವಾರ್ಥ ಮತ್ತು ನಾರ್ಸಿಸ್ ಧೋರಣೆ', ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.