ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಸುಳ್ಳುಸುದ್ದಿಗಳು ಹೆಚ್ಚಾಗುತ್ತಿವೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ನಟರ ಹೊಸ ಚಿತ್ರಗಳ ಕುರಿತಾಗಿ ಇಲ್ಲಸಲ್ಲದ ಸುದ್ದಿಗಳು ಪ್ರಕಟವಾಗುತ್ತಲೇ ಇರುತ್ತವೆ. ‘ನಮಸ್ತೆ ಘೋಸ್ಟ್’ ಎಂಬ ಚಿತ್ರದಲ್ಲಿ ಸುದೀಪ್ ನಾಯಕನಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕಳೆದ ಎರಡು ದಿನಗಳಿಂದ ಸಖತ್ ವೈರಲ್ ಆಗಿದೆ.
ಪ್ರಭಾಸ್ ಅಭಿನಯದ ‘ಸಾಹೋ’ ಚಿತ್ರವನ್ನು ನಿರ್ದೇಶಿಸಿದ್ದ ಸುಜೀತ್, ಸುದೀಪ್ ಅಭಿನಯದಲ್ಲಿ ಒಂದು ಚಿತ್ರ ನಿರ್ದೇಶಿಸುತ್ತಾರೆ ಎಂಬ ಮಾತು ಕೆಲವು ತಿಂಗಳುಗಳ ಹಿಂದೆಯೇ ಕೇಳಿ ಬಂದಿತ್ತು. ಚಿತ್ರದ ಕುರಿತು ಮಾತುಕತೆ ನಡೆಯುತ್ತಿದ್ದು, ಯಾವುದೂ ಪಕ್ಕಾ ಆಗಿಲ್ಲ ಎಂದು ಹೇಳಲಾಗಿತ್ತು. ಈ ಮಧ್ಯೆ, ಸುಜೀತ್ ಹೆಸರಿನಲ್ಲಿ ಒಂದು ನಕಲಿ ಖಾತೆ ಸೃಷ್ಟಿಯಾಗಿದ್ದು, ಅದರಲ್ಲಿ ‘ನಮಸ್ತೆ ಘೋಸ್ಟ್’ ಎಂಬ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಹಬ್ಬಿಸಲಾಗಿದೆ. ಈ ಚಿತ್ರದ ಸತ್ಯಾಸತ್ಯತೆ ಕುರಿತಾಗಿ ಸುದೀಪ್ ಅವರ ಆಪ್ತರನ್ನು ಕೇಳಿದರೆ, ಇದೊಂದು ಫೇಕ್ ನ್ಯೂಸ್ ಎನ್ನುತ್ತಾರೆ.
ಇದಕ್ಕೂ ಮುನ್ನ, ನಿರ್ದೇಶಕ ನರ್ತನ್ ಎಂಬ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ, ಯಶ್ ಹೊಸ ಚಿತ್ರದ ಕುರಿತಾಗಿ ಸದ್ಯದಲ್ಲೇ ಹೊಸ ಘೋಷಣೆಯಾಗಲಿದೆ ಎಂದು ಟ್ವೀಟ್ ಮಾಡಲಾಗಿತ್ತು. ಯಶ್ ಅಭಿನಯದಲ್ಲಿ ನರ್ತನ್ ಒಂದು ಚಿತ್ರ ನಿರ್ದೇಶಿಸುತ್ತಿರುವ ಸುದ್ದಿ ಒಂದು ವರ್ಷದಿಂದ ಇರುವುದರಿಂದ, ಈ ಸುದ್ದಿ ನಿಜ ಇರಬಹುದು ಎಂದು ಹಲವರು ನಂಬಿದ್ದರು. ಆದರೆ, ಇದು ಸುಳ್ಳುಸುದ್ದಿ ಎಂದು ಬಹಳ ಬೇಗ ಗೊತ್ತಾಯಿತು.