- ಕೆಲವೊಮ್ಮೆ ನಮ್ಮ ಕಲಾವಿದರು ಆಡುವ ಮಾತುಗಳು ಭಾರಿ ಸಂಚಲನವನ್ನೇ ಸೃಷ್ಟಿಸುತ್ತವೆ
- ಕಲಾವಿದರ ಮಾತುಗಳು ವಿವಾದದ ಸ್ವರೂಪ ಪಡೆದು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತವೆ
- ಇದೀಗ ಬಾಲಿವುಡ್ ನಟಿ ಕಾಜೋಲ್ ಕೂಡ ಅದೇ ರೀತಿ ವಿವಾದಕ್ಕೆ ಗುರಿಯಾಗಿದ್ದಾರೆ
- ಮದುವೆ ಬಗ್ಗೆ ಬಾಲಿವುಡ್ ಬ್ಯೂಟಿ ಮಾಡಿರುವ ಕಾಮೆಂಟ್‌ಗಳು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿವೆ
Actress Kajol : ಕೆಲವೊಮ್ಮೆ ನಮ್ಮ ಕಲಾವಿದರು ಆಡುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸುತ್ತವೆ. ನಾವು ನಮ್ಮ ಅಭಿಪ್ರಾಯಗಳನ್ನು ಮಾತ್ರ ವ್ಯಕ್ತಪಡಿಸುತ್ತಿದ್ದೇವೆ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಆ ಅಭಿಪ್ರಾಯಗಳಲ್ಲಿ ಕೆಲವು ಮಂದಿಯ ನಂಬಿಕೆಗಳು ಮತ್ತು ಭಾವನೆಗಳು ಇರುತ್ತವೆ ಅನ್ನೋದನ್ನೇ ಮರೆತುಬಿಡುತ್ತಾರೆ. ಆದ್ದರಿಂದ ಅವರ ಮಾತುಗಳು ವಿವಾದದ ಸ್ವರೂಪ ಪಡೆದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗಳಿಗೆ ಗುರಿಯಾಗುತ್ತವೆ.
ತಾಜಾ ಸಂಗತಿ ಏನೆಂದರೆ, ಅಂತಹ ಮಾತಗಳನ್ನು ಆಡಿದ್ದಕ್ಕೆ ಬಾಲಿವುಡ್ ನಟಿ ಕಾಜೋಲ್ ಕೂಡ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ. ಮದುವೆಯ ಬಗ್ಗೆ ಬಾಲಿವುಡ್ ಬ್ಯೂಟಿ ಮಾಡಿರುವ ಕಾಮೆಂಟ್‌ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಂತೆ, ಅವರನ್ನು ಜಾಲತಾಣದಲ್ಲಿ ಕೆಟ್ಟದಾಗಿ ಟ್ರೋಲ್ ಮಾಡಲಾಗುತ್ತಿದೆ.
ಅಷ್ಟಕ್ಕೂ ಏನಾಯಿತು ಅಂದರೆ, ಬಾಲಿವುಡ್ ನಾಯಕಿಯರಾದ ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ ಒಟ್ಟಿಗೆ 'ಟೂ ಮಚ್ ವಿತ್ ಕಾಜೋಲ್ ಮತ್ತು ಟ್ವಿಂಕಲ್' ಎಂಬ ಟಾಕ್ ಶೋ ಅನ್ನು ನಡೆಸಿಕೊಡುತ್ತಿದ್ದಾರೆ. ನಟ ವಿಕ್ಕಿ ಕೌಶಲ್ ಮತ್ತು ಕೃತಿ ಸನೋನ್ ಇತ್ತೀಚೆಗೆ ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ, ಟ್ವಿಂಕಲ್ ಖನ್ನಾ ಅವರು ವಿವಾಹ ವ್ಯವಸ್ಥೆಯ ಬಗ್ಗೆ ಮಾತನಾಡಿದರು.
ಮದುವೆಗೂ ಒಂದು ಎಕ್ಸ್ಪೈರಿ ಡೇಟ್ ಇರಬೇಕೇ? ಮತ್ತು ರಿನೇವಲ್ ಆಯ್ಕೆಯೂ ಇರಬೇಕಿತ್ತಾ? ಎಂದು ಟ್ವಿಂಕಲ್ ಖನ್ನಾ ಅವರು ಅತಿಥಿಗಳನ್ನು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅತಿಥಿಗಳು ಮದುವೆ ಅನ್ನೋದು ಒಂದು ಯಂತ್ರವಲ್ಲ. ವಸ್ತುಗಳಿಗೆ ಎಕ್ಸ್ಪೈರಿ ಡೇಟ್ ಅನ್ನೋದು ಇದೆ ಹೊರತು ಮದುವೆಗೆ ಅಲ್ಲ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಮತ್ತೊಬ್ಬ ನಿರೂಪಕಿ ಕಾಜೋಲ್, ಮದುವೆಗೂ ಒಂದು ಎಕ್ಸ್ಪೈರಿ ಡೇಟ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ನಿಮಗೆ ಇಷ್ಟವಿಲ್ಲದ ವ್ಯಕ್ತಿಯೊಂದಿಗೆ ಜೀವನದುದ್ದಕ್ಕೂ ಸಹಿಸಿಕೊಳ್ಳುವುದು ಸರಿಯಲ್ಲ. ಹಾಗಾಗಿ, ಮದುವೆಗೂ ಒಂದು ಎಕ್ಸ್ಪೈರಿ ಡೇಟ್ ಮತ್ತು ರಿನೇವಲ್ ಆಯ್ಕೆ ಇದ್ದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಜೋಲ್ ನೀಡಿದ ಉತ್ತರ ಅತಿಥಿಗಳಿಬ್ಬರನ್ನೂ ಅಚ್ಚರಿಗೆ ದೂಡಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಮದುವೆಯ ಬಗ್ಗೆ ಕಾಜೋಲ್ ಮಾಡಿರುವ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಮದುವೆ ಅನ್ನೋದು ಒಂದು ಪವಿತ್ರ ಬಂಧ. ಅದಕ್ಕೆ ಎಕ್ಸ್ಪೈರಿ ಡೇಟ್ ಮತ್ತು ರಿನೇವಲ್ ಡೇಟ್ ಇರಬೇಕು ಎಂದರೆ ಏನು ಅರ್ಥ? ನಮ್ಮ ಸಂಸ್ಕೃತಿಗೆ ನೀವು ನೀಡುವ ಕೊಡುಗೆ ಇದೇನಾ? ಎಂದೆಲ್ಲ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.
ಭಾರಿ ಟೀಕೆಗಳು ಬರುತ್ತಿದ್ದು, ಕಾಜೋಲ್ ಇದನೆಲ್ಲ ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್)