ಸಿನಿವಾಣಿ

ಕೋಟಿ ಕೊಟ್ರು ಆ ನಟನ ಜತೆ ನಟಿಸಲ್ಲ... ಆ ಒಂದು ಕಾರಣಕ್ಕೆ 16 ಸಿನಿಮಾ ರಿಜೆಕ್ಟ್ ಮಾಡಿದ್ರಂತೆ ನಟಿ ಸೋನಾ! Sona Hayden

Sona Hayden : ನಟಿ ಸೋನಾ ಹೇಡನ್ 2000ದ ದಶಕದ ಆರಂಭದಿಂದ 2015ರವರೆಗೆ ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ಸಕ್ರಿಯರಾಗಿದ್ದರು. ಸೋನಾ ಅವರು ತಲಾ ಅಜಿತ್ ನಟಿಸಿದ ಪೂವೆಲ್ಲಾಮನ್ ಉನ್ ವಾಸಂ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ, ಅವರು ಮಲಯಾಳಂ ಸೇರಿದಂತೆ ಹಲವು ದಕ್ಷಿಣ ಭಾರತೀಯ ಭಾಷೆಗಳಲ್ಲಿ ಸಕ್ರಿಯರಾಗಿದ್ದರು. ಅನೇಕ ಹಿಟ್ ಚಿತ್ರಗಳಲ್ಲಿ ನಟಿ ಸೋನಾ ಅವರು ಬೋಲ್ಡ್​ ಪಾತ್ರಗಳಲ್ಲಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆದರು.

ಸಿನಿಮಾ ಹೊರತಾಗಿ, ಸೋನಾ ಅವರು ದೂರದರ್ಶನ ಉದ್ಯಮದಲ್ಲೂ ಸಕ್ರಿಯರಾಗಿದ್ದರು. ಅವರು ಪ್ರಸ್ತುತ ಸ್ಮೋಕ್ ಎಂಬ ವೆಬ್ ಸರಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಅವರ ಜೀವನದ ಕಥೆಯನ್ನು ಹೇಳುತ್ತದೆ. ಸೋನಾ ಅವರೇ ಸ್ವತಃ ಚಿತ್ರಕಥೆಯನ್ನು ಬರೆದು ನಿರ್ದೇಶಿಸಿದ್ದಾರೆ. ಪ್ರಸ್ತುತ OTT ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿವೆ.

ಒಂದು ಹಂತದಲ್ಲಿ ನಟನೆಯ ಮೇಲಿನ ಆಸಕ್ತಿಯನ್ನು ಕಳೆದುಕೊಂಡ ಕಾರಣ ಸೋನಾ ಅವರು ವಿರಾಮವನ್ನು ತೆಗೆದುಕೊಂಡರು. ನಾನು ಬಹಳಷ್ಟು ನೋವುಗಳನ್ನು ಅನುಭವಿಸಿರುವುದರಿಂದ ಈಗ ಯಾರನ್ನೂ ನಾನು ನಂಬುವುದಿಲ್ಲ ಎಂದು ಇತ್ತೀಚಿನ ಸಂದರ್ಶನದಲ್ಲಿ ಸೋನಾ ಹೇಳಿದ್ದಾರೆ.

ತಮಿಳು ನಟ ವಡಿವೇಲು ಬಗ್ಗೆ ಸೋನಾ ಹೇಳಿದ ಮಾತುಗಳು ಕೂಡ ಇದೇ ಸಂದರ್ಭದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಒಂದು ಕೋಟಿ ಕೊಟ್ಟರೂ ವಡಿವೇಲು ಜೊತೆ ನಟಿಸುವುದಿಲ್ಲ ಎಂದು ಈ ಹಿಂದಿನ ಸಂದರ್ಶನವೊಂದರಲ್ಲಿ ಸೋನಾ ಹೇಳಿದ ಮಾತುಗಳು ಇದೀಗ ಚರ್ಚೆಯ ವಿಷಯವಾಗುತ್ತಿವೆ. ಆದರೆ, ಸೋನಾ ಅವರ ಈ ಮಾತಿನ ಹಿಂದಿರುವ ಕಾರಣ ಏನು ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.

ರಜನಿಕಾಂತ್ ಅಭಿನಯದ ಕುಸೇಲನ್ ಚಿತ್ರದಲ್ಲಿ ಸೋನಾ ಅವರು ವಡಿವೇಲು ಜೊತೆ ನಟಿಸಿದ್ದರು. ಅವರಿಬ್ಬರ ಹಾಸ್ಯ ದೃಶ್ಯಗಳು ದೊಡ್ಡ ಹಿಟ್ ಆಗಿದ್ದವು. ಸೋನಾ ತಮ್ಮ ಗ್ಲಾಮರಸ್ ಪಾತ್ರಗಳಿಗೆ ಮೆಚ್ಚುಗೆಯನ್ನೂ ಗಳಿಸಿದರು. ಆದರೆ, ಸೋನಾ ಮತ್ತೆಂದೂ ವಡಿವೇಲು ಜೊತೆ ನಟಿಸುವುದಿಲ್ಲ ಎಂದು ಹೇಳಿದ್ದಾರೆ.

ಕುಸೇಲನ್​ ಸಿನಿಮಾ ನಂತರ, ಸುಮಾರು ಹದಿನಾರು ಚಿತ್ರಗಳಲ್ಲಿ ವಡಿವೇಲು ಜೊತೆ ನಟಿಸಲು ಅವರಿಗೆ ಆಫರ್‌ಗಳು ಬಂದವು. ಆದರೆ ಸೋನಾ ಅವರು ಅವುಗಳನ್ನು ತಿರಸ್ಕರಿಸಿದ್ದಾಗಿ ಹೇಳಿದ್ದಾರೆ. ಸದ್ಯ ಇಬ್ಬರ ನಡುವೆ ಏನಾಗಿರಬಹುದು ಎಂಬ ಚರ್ಚೆ ಕಾಲಿವುಡ್​ ಗಲ್ಲಿಯಲ್ಲಿ ನಡೆಯುತ್ತಿದೆ. (ಏಜೆನ್ಸೀಸ್​)