ಸಿನಿವಾಣಿ

ಮುಹೂರ್ತ ಒಂದು, ಸಿನಿಮಾ ಎರಡು! ಒಟ್ಟಿಗೇ ಸೆಟ್ಟೇರಿದ ‘ಬಾಲಿ’ ಮತ್ತು ‘ಏಕಮ್’..

ಸಾಮಾನ್ಯವಾಗಿ ಆಷಾಢದ ತಿಂಗಳಲ್ಲಿ ಶುಭ ಕಾರ್ಯಗಳೇನೂ ನಡೆಯುವುದಿಲ್ಲ. ಆದರೆ ಇಲ್ಲೊಂದು ಹೊಸಬರ ಚಿತ್ರತಂಡ ಒಂದೇ ದಿನ, ಒಂದೇ ಕಾರ್ಯಕ್ರಮದಲ್ಲಿ ಎರಡು ಚಿತ್ರಗಳ ಮುಹೂರ್ತ ನೆರವೇರಿಸಿದೆ. ಚಿತ್ರಗಳ ಹೆಸರು ‘ಬಾಲಿ’ ಮತ್ತು ‘ಏಕಮ್’. ‘ಬಾಲಿ’ ಕ್ರೀಡೆಯ ಕುರಿತ ಚಿತ್ರ. ಹದಿಹರೆಯದ ಹಳ್ಳಿಯ ಬಡ ಕುಟುಂಬದ ಹುಡುಗಿಯೊಬ್ಬಳು ರನ್ನರ್ ಆಗಿ ಹೇಗೆ ಗುರಿ ಸಾಧಿಸುತ್ತಾಳೆ ಎಂಬುದು ಚಿತ್ರದ ಒನ್ ಲೈನ್. ಅವಳು ತನ್ನ ಕನಸನ್ನು ನನಸಾಗಿಸಿಕೊಳ್ಳಲು ಪಡುವ ಕಷ್ಟ, ಎದುರಿಸುವ ಸಮಸ್ಯೆಗಳ ಜತೆಗೆ ಶಾಲೆಯ ಅಂಶಗಳೂ ಚಿತ್ರದಲ್ಲಿ ಇರಲಿವೆ. ಮೂಲತಃ ಅಥ್ಲೀಟ್ ಆಗಿರುವ ಕುಮಾರಿ ಹರಿಣಿ ಜಯರಾಜ್ ಈ ಚಿತ್ರದ ನಾಯಕಿ. ಅಥ್ಲೀಟ್ ಆಗಿರುವ ಕಾರಣ ಅದೇ ರೀತಿಯ ಪಾತ್ರ ಸಿಕ್ಕಿರುವ ಖುಷಿ ಅವರದು. ಅವರಿಗೆ ಕ್ರೀಡಾ ಮಾರ್ಗದರ್ಶಿಯಾಗಿ, ತರಬೇತುದಾರನ ಪಾತ್ರದಲ್ಲಿ ಮೂಲತಃ ಉತ್ತರ ಭಾರತದವರಾದ ನೀರಜ್ ಕುಮಾರ್ ನಟಿಸಲಿದ್ದಾರೆ. ತಾಯಿಯ ಪಾತ್ರದಲ್ಲಿ ಮೀನಾ ಕಿರಣ್ ನಟಿಸಲಿದ್ದು ಉಳಿದಂತೆ ಸಂದೀಪ್ ಮಲಾನಿ, ಪ್ರಶಾಂತ್ ಪ್ರಮುಖ ತಾರಾಗಣದಲ್ಲಿದ್ದಾರೆ. ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನದ ಜತೆಗೆ ಗನಿದೇವ್ ಕಾರ್ಕಳ ಅವರೇ ಅಕ್ಷರಾ ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಅವರಿಗೆ ಜಯಕುಮಾರ್ ಭಕ್ತವತ್ಸಲಂ ಹಾಗೂ ಯೋಗಿತಾ ಬಾಲಿ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಚಿತ್ರಕ್ಕೆ ಅಮೋಘ್ ಕೊಡಂಗಾಲ ಸಂಗೀತ ನೀಡುತ್ತಿದ್ದಾರೆ. ಕುಂದಾಪುರ, ಮಂಗಳೂರು, ಬೆಂಗಳೂರಿನ ಕೆಲವೆಡೆ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

‘ಬಾಲಿ’ ಜತೆಗೆ ಮುಹೂರ್ತ ಆಚರಿಸಿಕೊಂಡ ಮತ್ತೊಂದು ಚಿತ್ರ ‘ಏಕಮ್’. ಅಕ್ಷರಾ ಪ್ರೊಡಕ್ಷನ್ಸ್‌ನ ಅಡಿಯಲ್ಲಿ ಗನಿದೇವ್ ಕಾರ್ಕಳ ಅವರೇ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಧಾರಾವಾಹಿ ಹಾಗೂ ಕೆಲ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವದೊಂದಿಗೆ ವಿದ್ಯತ್ ಶಿವ ಚೊಚ್ಚಲ ಬಾರಿಗೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಲಿವುಡ್‌ನ ಅಲೆಜಾಂಡ್ರೆ ನಿರ್ದೇಶನದ ‘ಬೆಬಲ್’ ಚಿತ್ರದಿಂದ ಸ್ಫೂರ್ತಿ ಪಡೆದು ‘ಏಕಮ್’ ಚಿತ್ರದ ಕಥೆ ಮಾಡಿಕೊಂಡಿದ್ದಾರೆ ನಿರ್ದೇಶಕ ವಿದ್ಯತ್ ಶಿವ.

ಐದು ಜನರ ಜೀವನದಲ್ಲಿ ಒಬ್ಬ ವ್ಯಕ್ತಿಯಿಂದ ಆಗುವ ಅನಾಹುತಗಳು ಇನ್ನೊಬ್ಬ ವ್ಯಕ್ತಿಗೆ ಬರುವ ಘರ್ಷಣೆಗಳು, ಒಂದಕ್ಕೊಂದು ಪ್ರಾರಂಭದಿಂದಲೇ ಲಿಂಕ್ ಆಗುತ್ತಾ ಹೋಗುತ್ತದೆ. ಜತೆಗೆ ಸುಂದರ ಲವ್‌ಸ್ಟೋರಿಯಲ್ಲಿ ಎದುರಾಗುವ ತೊಂದರೆಗಳು, ಈ ಎಲ್ಲ ಸಂಕಷ್ಟಗಳಿಂದ ಹೇಗೆ ಹೊರಬರುತ್ತಾರೆ? ಎಂಬುದೇ ‘ಏಕಮ್’ ಚಿತ್ರದ ಕಥೆ. ಈ ಚಿತ್ರವನ್ನು ಇಂಥದ್ದೇ ಜಾನರ್ ಎಂದು ಹೇಳಲು ಸಾಧ್ಯವಿಲ್ಲ ಎಂಬುದು ಚಿತ್ರತಂಡದ ಅಭಿಮತ. ಅದಕ್ಕೆ ಕಾರಣ ಇದರಲ್ಲಿ ಪ್ರೀತಿ, ಕ್ರೌರ್ಯ, ಫ್ಯಾಂಟಸಿ ಹೀಗೆ ಭಿನ್ನ, ವಿಭಿನ್ನ ಕಥೆಗಳಿವೆಯಂತೆ. ‘ಬಾಲಿ’ ಜತೆ ‘ಏಕಮ್’ ಚಿತ್ರದ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ಅಮೋಘ್ ಕೊಡಂಗಾಲ ಅವರೇ ಹೊತ್ತಿದ್ದು, ಅದರ ಜತೆಗೆ ಒಂದು ಮಹತ್ವದ ಪಾತ್ರಕ್ಕೆ ಬಣ್ಣ ಕೂಡ ಹಚ್ಚುತ್ತಿದ್ದಾರೆ. ಉಳಿದಂತೆ ಶಹನಾ, ಹರೀಶ್ ರಾಮ್, ಮೀನಾ ಕಿರಣ್, ಐಶ್ವರ್ಯಾ ಪ್ರಮುಖ ತಾರಾಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲನ್ ಭರತ್ ಈ ಚಿತ್ರಕ್ಕೆ ಛಾಯಾಗ್ರಹಣ, ಸ್ಟೀಫನ್ ಸಂಕಲನ ಇರಲಿದೆ. ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.