ಸಿನಿವಾಣಿ

ದುನಿಯಾ ವಿಜಯ್ ಹೊಸ ಸಿನಿಮಾ, ಭೀಮ

ಬೆಂಗಳೂರು: ‘ದುನಿಯಾ’ ವಿಜಯ್ ಅಭಿನಯದ ಮತ್ತು ನಿರ್ದೇಶನದ ಹೊಸ ಚಿತ್ರದ ಶೀರ್ಷಿಕೆ ಶಿವರಾತ್ರಿಯಂದು ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ಹೇಳಲಾಗಿತ್ತು. ಅದರಂತೆ, ಚಿತ್ರಕ್ಕೆ ‘ಭೀಮ’ ಎಂಬ ಹೆಸರಿಡಲಾಗಿದೆ. ‘ಕೆಣಕದಿದ್ರೆ ಕ್ಷೇಮ’ ಎಂಬ ಅಡಿಬರಹವಿದೆ. ಮೇಲ್ನೋಟಕ್ಕೆ ಇದೊಂದು ಆಕ್ಷನ್ ಚಿತ್ರದಂತೆ ಕಂಡರೂ, ಬೇರೆ ತರಹ ಕಥೆಯಾಗಿರಲಿದೆ ಎನ್ನುತ್ತಾರೆ ವಿಜಯ್. ‘ಈ ಚಿತ್ರದ ಮೂಲಕ ಸೂಕ್ಷ್ಮವಾದ ವಿಷಯವೊಂದನ್ನು ಹೇಳುವುದಕ್ಕೆ ಹೊರಟಿದ್ದೇನೆ. ಆಕ್ಷನ್ ಚಿತ್ರದಂತೆ ಕಂಡರೂ ಒಂದು ಎಮೋಷನಲ್ ವಿಷಯವನ್ನುಹೇಳುವ ಪ್ರಯತ್ನ ಮಾಡುತ್ತಿದ್ದೇನೆ’ ಎನ್ನುತ್ತಾರೆ.

‘ಬೈರಾಗಿ’ ಚಿತ್ರವನ್ನು ನಿರ್ವಿುಸುತ್ತಿರುವ ಕೃಷ್ಣ ಸಾರ್ಥಕ್ ಮತ್ತು ವಿತರಕ ಜಗದೀಶ್ ಗೌಡ ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ. ಈ ಚಿತ್ರದಲ್ಲೂ ‘ಸಲಗ’ ಚಿತ್ರತಂಡವೇ ಮುಂದುವರಿಯಲಿದ್ದು, ಮಾಸ್ತಿ ಮಂಜು ಸಂಭಾಷಣೆ, ಚರಣ್ ರಾಜ್ ಸಂಗೀತ, ಶಿವಸೇನಾ ಛಾಯಾಗ್ರಹಣ ಮತ್ತು ದೀಪು ಎಸ್. ಕುಮಾರ್ ಸಂಕಲನವಿರಲಿದೆ. ವಿಜಯ್ ಸದ್ಯ ನಂದಮೂರಿ ಬಾಲಕೃಷ್ಣ ಅಭಿನಯದ ‘ಎನ್​ಬಿಕೆ 107’ ಎಂಬ ತೆಲುಗು ಚಿತ್ರದಲ್ಲಿ ತೊಡಗಿಸಿಕೊಂಡಿದ್ದು, ಆ ಚಿತ್ರ ಮುಗಿಸಿ ಆ ನಂತರ ಈ ಚಿತ್ರ ಶುರು ಮಾಡಲಿದ್ದಾರೆ.