ಬೆಂಗಳೂರು: ಶರಣ್ ಅಭಿನಯದ ‘ಗುರು ಶಿಷ್ಯರು’ ಚಿತ್ರವು ಸೆ. 23ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದೆ. ಈ ಚಿತ್ರದ ವಿಶೇಷವೇನೆಂದರೆ, ಕನ್ನಡ ಚಿತ್ರರಂಗದ ಐವರು ಪ್ರಮುಖ ನಟರ ಮಕ್ಕಳು ನಟಿಸಿರುವುದು.
ಶರಣ್ ಮಗ ಹೃದಯ್, ‘ನೆನಪಿರಲಿ’ ಪ್ರೇಮ್ ಮಗ ಏಕಾಂತ್, ರವಿಶಂಕರ್ ಗೌಡ ಮಗ ಸೂರ್ಯ, ನವೀನ್ ಕೃಷ್ಣ ಮಗ ಹರ್ಷಿತ್, ಬುಲೆಟ್ ಪ್ರಕಾಶ್ ಮಗ ರಕ್ಷಕ್ ಅಲ್ಲದೆ ಇನ್ನೊಂದಿಷ್ಟು ಹೊಸ ಪ್ರತಿಭೆಗಳನ್ನು ಪರಿಚಯಿಸಲಾಗುತ್ತಿದೆ. ಖೋಖೋ ಕುರಿತ ಚಿತ್ರ ಇದಾಗಿದ್ದರಿಂದ, ಹೊಸ ಹುಡುಗರಿಗೆಲ್ಲ ಖೋಖೋ ತರಬೇತಿ ನೀಡಿ, ಅವರಿಂದ ಪಾತ್ರ ಮಾಡಿಸಲಾಗಿದೆ. ಈ ಹುಡುಗರನ್ನು ಇಷ್ಟಕ್ಕೇ ಬಿಡಬಾರದು, ಅವರಿಂದ ಇನ್ನಷ್ಟು ಚಿತ್ರಗಳನ್ನು ಮಾಡಿಸಬೇಕು ಎನ್ನುತ್ತಾರೆ ‘ದುನಿಯಾ’ ವಿಜಯ್.
ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ವಿಜಯ್, ‘ಈ ತಂಡವನ್ನು ನಾವು ಉಳಿಸಿಕೊಳ್ಳಬೇಕು, ಇನ್ನೊಂದು ಚಿತ್ರಕ್ಕೆ ಬಳಸಿಕೊಳ್ಳಬೇಕು. ಇಲ್ಲವಾದರೆ, ಈ ಚಿತ್ರ ಮುಗಿದ ಮೇಲೆ ಎಲ್ಲರೂ ಚದುರಿಹೋಗುತ್ತಾರೆ. ಈಗ ಇವರನ್ನು ಬಿಟ್ಟುಬಿಟ್ಟರೆ, ತಮ್ಮ ಜೀವನಕ್ಕೆ, ಓದಿಗೆ ವಾಪಸ್ಸು ಹೊರಟುಹೋಗುತ್ತಾರೆ. ಅವರು ಮತ್ತೆ ಕಾಲೇಜಿಗೆ ಹೋಗಬೇಕು, ಕ್ಲಾಸ್ಗೆ ಹೋಗಬೇಕು, ಬೆಳಿಗ್ಗೆ 4.30ಗೆ ಏಳಬೇಕು, ಜತೆಜತೆಗೆ ಸಿನಿಮಾ ತರಬೇತಿಯನ್ನೂ ಪಡೆಯಬೇಕು. ನಾವೆಲ್ಲರೂ ವಿದ್ಯೆ ಇಲ್ಲದ ಹೀರೋಗಳಾದೆವು. ಇವರೆಲ್ಲ ವಿದ್ಯಾವಂತ ಹೀರೋಗಳಾಗಬೇಕು. ಅವರನ್ನಿಟ್ಟುಕೊಂಡು ಇನ್ನೊಂದು ಸಿನಿಮಾ ಮಾಡಿದರೆ, ಮುಂದೆ ಅವರಿಗೆ ಹೀರೋಗಳಾಗುವುದಕ್ಕೆ ಸುಲಭವಾಗುತ್ತದೆ. ಇದರಿಂದ ಕನ್ನಡ ಚಿತ್ರರಂಗಕ್ಕೆ 10-20 ಹೊಸ ಹೀರೋಗಳು ಸಿಕ್ಕಂತಾಗುತ್ತದೆ’ ಎಂದರು ವಿಜಯ್.
ಇನ್ನು, ಈ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಎಂ.ಎನ್. ಲಕ್ಷ್ಮೀದೇವಿ, ಉಮೇಶ್, ದ್ವಾರಕೀಶ್, ಡಿಂಗ್ರಿ ನಾಗರಾಜ್ ಮುಂತಾದವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರಜ್ವಲ್, ‘ನೆನಪಿರಲಿ’ ಪ್ರೇಮ್, ರವಿಶಂಕರ್ ಗೌಡ, ನಿಶ್ವಿಕಾ ನಾಯ್ಡು, ತರುಣ್ ಸುಧೀರ್, ನಿರ್ದೇಶಕ ಜಡೇಶ್ ಹಂಪಿ ಸೇರಿದಂತೆ ಹಲವರು ಹಾಜರಿದ್ದರು.