ಸಿನಿವಾಣಿ

ದುಲ್ಕರ್​ ಸಲ್ಮಾನ್​ ಜತೆ ಹೀಗೊಂದು ಮಾತುಕತೆ: ಮೊದಲ ಒಟಿಟಿ, ವೆಬ್​ಸರಣಿ ಅನುಭವ ಹಂಚಿಕೊಂಡ ನಟ

| ಹರ್ಷವರ್ಧನ್​ ಬ್ಯಾಡನೂರು ಬೆಂಗಳೂರು

ಮಲಯಾಳಂ ಸೂಪರ್​ಸ್ಟಾರ್​ ಮಮ್ಮೂಟಿ ಸುಪುತ್ರ ದುಲ್ಕರ್​ ಸಲ್ಮಾನ್​ಮಾಲಿವುಡ್​ನಲ್ಲಿ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿಯಲ್ಲೂ ಮಿಂಚಿದ್ದಾರೆ. ಇದುವರೆಗೂ ಸಿನಿಮಾಗಳಿಗಷ್ಟೇ ಸೀಮಿತವಾಗಿದ್ದ ಅವರು ಇದೀಗ "ಗನ್ಸ್​ ಆ್ಯಂಡ್​ ಗುಲಾಬ್ಸ್​' ಮೂಲಕ ಒಟಿಟಿ ವೇದಿಕೆಗೆ ಎಂಟ್ರಿಯಾಗಿದ್ದು, ಮೊದಲ ವೆಬ್​ಸರಣಿಯಲ್ಲಿ ನಟಿಸಿದ ಸಂಭ್ರಮದಲ್ಲಿದ್ದಾರೆ. ಈ ಸರಣಿ ಇದೇ ತಿಂಗಳ 18ರಂದು ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಲಿದ್ದು, ಆ ಖುಷಿಯಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು. ಬೆಂಗಳೂರಿನ ನಂಟು, ಅಪ್ಪನ ಜತೆಗಿನ ಸ್ಪರ್ಧೆ, ವೆಬ್​ಸರಣಿ ಎಂಟ್ರಿ, ಮುಂದಿನ ಸಿನಿಮಾ ಸೇರಿ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ, ಈ ಚಿಟ್​ಚಾಟ್​ನಲ್ಲಿ.

  • ಬೆಂಗಳೂರಿಗೂ ನಿಮಗೂ ಹಲವು ವರ್ಷಗಳ ನಂಟು ಅಲ್ಲವೇ?
    ಹೌದು, ನನಗೆ ಬೆಂಗಳೂರು ಇಷ್ಟ. ಚೆನ್ನೆ$ನಲ್ಲಿ ಓದುವಾಗ ಶಾಲಾ ದಿನಗಳಲ್ಲಿ ಬೆಂಗಳೂರಿಗೆ ಟ್ರಿಪ್​ ಬರುತ್ತಿದ್ದೆವು. ಇಲ್ಲಿನ ಊಟ, ಹೊರಗಡೆ ಸುತ್ತಾಟ ಎಲ್ಲವೂ ನನಗಿಷ್ಟ. ಹಲವು ಗೆಳೆಯರು ಬೆಂಗಳೂರಿನಲ್ಲಿ ಓದುತ್ತಿದ್ದ ಕಾರಣ ಕಾಲೇಜು ದಿನಗಳಲ್ಲಿ ಅವರನ್ನು ಭೇಟಿಯಾಗಲು ಬರುತ್ತಿದ್ದೆ. ಅಕ್ಕ ಬೆಂಗಳೂರಿನಲ್ಲೇ ವಾಸವಿರುವ ಕಾರಣ ಭಾವನಾತ್ಮಕ ಸಂಬಂಧವೂ ಇದೆ. ಅವರ ಮನೆಗೆ ಹೋಗಬಹುದು ಅಂತ ಶೂಟಿಂಗ್​ಗೆ ಬೆಂಗಳೂರಿಗೆ ಬರುವುದು ಇಷ್ಟ. ಆದರೆ, ಮಧ್ಯರಾತ್ರಿ 2, 3 ಗಂಟೆಗೆ ಚಿತ್ರೀಕರಣ ಮುಗಿಯುವ ಕಾರಣ ಹೆಚ್ಚು ಹೋಗಲಾಗುವುದಿಲ್ಲ. ನನ್ನ ಬೆಸ್ಟ್​ ಫ್ರೆಂಡ್ಸ್​​ ಇಲ್ಲಿದ್ದಾರೆ. ಇಂದಿರಾನಗರದ ಎಲ್ಲ ರೆಸ್ಟೋರೆಂಟ್​ಗಳಿಗೂ ಹೋಗಿದ್ದೇನೆ. "ಬೆಂಗಳೂರು ಡೇಸ್​' ಸೇರಿ ಎರಡು ಸಿನಿಮಾಗಳನ್ನು ಇಲ್ಲೇ ಶೂಟಿಂಗ್​ ಮಾಡಿದ್ದೇವೆ.
  • ಒಟಿಟಿ ವೇದಿಕೆಗಳು ಥಿಯೇಟರ್​ಗಳಿಗೆ ಮಾರಕವೇ? ನಿಮ್ಮ ಅಭಿಪ್ರಾಯವೇನು?
    ಒಟಿಟಿ ವೆಬ್​ಸರಣಿ ಪ್ರಧಾನವಾಗಿದ್ದರೆ, ಥಿಯೇಟರ್​ಗಳು ಸಿನಿಮಾಪ್ರಧಾನ. ಇದು ಒಟಿಟಿ ಸಿನಿಮಾ, ಥಿಯೇಟರ್​ನಲ್ಲಿ ಓಡುವುದಿಲ್ಲ ಎಂಬ ಚರ್ಚೆಗಳೂ ಆಗಾಗ ನಡೆಯುತ್ತಿರುತ್ತವೆ. ಒಬ್ಬ ನಿರ್ಮಾಪಕನಾಗಿ ಜನರನ್ನು ಥಿಯೇಟರ್​ಗೆ ಕರೆತರುವಂತಹ ಸಿನಿಮಾ ಮಾಡಬೇಕು ಎಂಬುದೇ ನನ್ನ ಯೋಚನೆ. ಮನೆಯಲ್ಲಿ ಕುಳಿತು ಸಿನಿಮಾ ನೋಡುವುದಕ್ಕೂ ಥಿಯೇಟರ್​ನಲ್ಲಿ ಸಿನಿಮಾ ನೋಡುವುದಕ್ಕೂ ತುಂಬ ವ್ಯತ್ಯಾಸವಿದೆ. ಬಿಗ್​ ಸ್ಕ್ರೀನ್​ ನೀಡುವ ಅನುಭವ ಮನೆಯಲ್ಲಿ ಟಿವಿ ನೀಡುವುದಿಲ್ಲ.
  • ನಿಮ್ಮ ಒಟಿಟಿ ಪಾದಾರ್ಪಣೆ ಹೇಗಾಯಿತು?
    ಒಬ್ಬ ಕಲಾವಿದನಾಗಿ ಚಿತ್ರರಂಗದ ಬೇರೆ ಬೇರೆ ಪ್ರಕಾರಗಳನ್ನು ಅನ್ವೇಷಿಸುವ ಕುತೂಹಲ ನನಗೆ ಮೊದಲಿನಿಂದಲೂ ಇತ್ತು. ವೆಬ್​ಸರಣಿಗಳನ್ನು ಹೇಗೆ ಮಾಡುತ್ತಾರೆ? ಅಷ್ಟೊಂದು ಸಂಚಿಕೆಗಳನ್ನು ಹೇಗೆ ಚಿತ್ರೀಕರಿಸುತ್ತಾರೆ? ಎಂಬ ಐಡಿಯಾ ಇರಲಿಲ್ಲ. ಏಳು ಎಪಿಸೋಡ್​ಗಳ ಸರಣಿ ಶೂಟಿಂಗ್​ ಮಾಡಲು 200 ದಿನ ತೆಗೆದುಕೊಳ್ಳುತ್ತಾರೆ ಅಂತಂದುಕೊಂಡಿದ್ದೆ. ನಿರ್ದೇಶಕರಾದ ರಾಜ್​ ಮತ್ತು ಡಿಕೆ ಕರೆ ಮಾಡಿ "ಗನ್ಸ್​ ಆ್ಯಂಡ್​ ಗುಲಾಬ್ಸ್​' ಕಥೆ ಹೇಳಿದರು, ಇಷ್ಟವಾಗಿ ಒಪ್ಪಿಕೊಂಡೆ. ಸರಣಿಗಳ ಚಿತ್ರೀಕರಣ ವೇಗವಾಗಿ ನಡೆಯುತ್ತದೆ. ಪ್ರತಿದಿನ 10ರಿಂದ 12 ಪುಟಗಳ ಕಥೆಯ ಶೂಟಿಂಗ್​ ನಡೆಸುತ್ತಾರೆ. ಉದ್ದುದ್ದ ಶಾಟ್​ಗಳು, ಡೈಲಾಗ್​ಗಳು ಇರುತ್ತವೆ. ಆ ಪಾತ್ರದಲ್ಲಿ ಹೆಚ್ಚು ಜೀವಿಸುತ್ತೇವೆ. ಅದೇ ಇಂಟರೆಸ್ಟಿಂಗ್​.
  • ನಿಮ್ಮ ಪಾತ್ರ ಹೇಗಿರಲಿದೆ?
    ಅರ್ಜುನ್​ ಎಂಬ ಪೊಲೀಸ್​ ಅಧಿಕಾರಿ ಪಾತ್ರ. ಗುಲಾಬ್​ಗಂಜ್​ ಎಂಬ ಕಾಲ್ಪನಿಕ ಪಟ್ಟಣಕ್ಕೆ ಹೊರಗಿನಿಂದ ಬಂದಿರುತ್ತೇನೆ. ರಾಜ್​ ಮತ್ತು ಡಿಕೆ ಇಬ್ಬರೂ ಪಾತ್ರವನ್ನು ತುಂಬ ಸೂಕ್ಷ್ಮವಾಗಿ ಬರೆದಿದ್ದಾರೆ. ಇಂತಹ ವ್ಯಕ್ತಿ ಹಿಂದೆ ಬದುಕಿದ್ದನಾ ಅಂತ ಭಾಸವಾಗುವಂತಿದೆ.
  • ಹೊಸ ಬಗೆಯ ಕಂಟೆಂಟ್​ಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದೀರಿ?
    ನಾನು ಹೀರೋ ಆಗುತ್ತೇನೆ ಅಂತ ಯಾವತ್ತೂ ಅಂದುಕೊಂಡಿಲ್ಲ. ಹೀರೋ ಅಂದರೆ ರಜಿನಿಕಾಂತ್​, ಕಮಲ್​ ಹಾಸನ್​, ಮೋಹನ್​ ಲಾಲ್​, ನನ್ನ ತಂದೆ ಅವರಂತಹ ಲೆಜೆಂಡ್​ಗಳನ್ನು ಹೀರೋ ಎನ್ನಬಹುದು. ಅದು ಬಿಟ್ಟರೆ ಸಿನಿಮಾ, ಕಂಟೆಂಟ್​ ಮಾತ್ರ ಹೀರೋ. ಹೀಗಾಗಿಯೇ ಹೊಸ ಬಗೆಯ ಕಂಟೆಂಟ್​ಗಳನ್ನು ಪ್ರಯತ್ನಿಸುತ್ತಿರುತ್ತೇನೆ.
  • ಕಥೆಯ ಬಗ್ಗೆ ಅಪ್ಪನ ಜತೆ ಚರ್ಚಿಸುತ್ತೀರಾ?
    ಹೌದು, ಇಬ್ಬರೂ ಕಥೆಗಳ ಬಗ್ಗೆ ಚರ್ಚಿಸುತ್ತೇವೆ. ಅವರು ನನ್ನನ್ನು ಕೇಳುತ್ತಾರೆ, ನಾನು ಅವರ ಅಭಿಪ್ರಾಯ ಕೇಳುತ್ತೇನೆ. ಹಾಗಂತ ಎಲ್ಲ ಕಥೆಗಳನ್ನೂ ಚರ್ಚಿಸುವುದಿಲ್ಲ. 10 ಕಥೆಗಳನ್ನು ಕೇಳಿದರೆ, ಅವುಗಳಲ್ಲಿ ನಮಗೆ ಇಷ್ಟವಾಗುವ ಎರಡು ಕಥೆಯ ಬಗ್ಗೆ ಅಭಿಪ್ರಾಯ ಕೇಳುತ್ತೇನೆ. ಅವರಿಗೆ ಖುಷಿಯಾಯಿತು ಅಂದರೆ ನಾನು ಓಕೆ ಮಾಡುತ್ತೇನೆ.
  • ಸ್ಟಾರ್​ ಮಕ್ಕಳು ತಂದೆ, ತಾಯಿಯಂತೆ ದೊಡ್ಡ ಹೆಸರು ಮಾಡುವುದು ಕಷ್ಟವಲ್ಲವೇ?
    ನಾನು ತಡವಾಗಿ ಅಂದರೆ 27ರ ವಯಸ್ಸಿನಲ್ಲಿ ಆ್ಯಕ್ಟಿಂಗ್​ ಪ್ರಾರಂಭಿಸಿದೆ. ಅಲ್ಲಿಯವರೆಗೆ ಹೊಸ ನಟರನ್ನು ನೋಡಿ ಕಲಿಯುತ್ತಿದ್ದೆ. ಜತೆಗೆ ನಾನೇ ರಿಮೇಕ್​ನಲ್ಲಿ ನಟಿಸುವುದಿಲ್ಲ, ಅಪ್ಪನ ಸಿನಿಮಾ ಸೀಕ್ವಲ್​ ಮಾಡುವುದಿಲ್ಲ, ದ್ವಿಭಾಷಾ ಸಿನಿಮಾ ಮಾಡುವುದಿಲ್ಲ ಅಂತ ನಿಯಮಗಳನ್ನು ಮಾಡಿಕೊಂಡಿದ್ದೆ. ಆದರೆ, ಈಗ ಬಹುಭಾಷಾ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ತಪು$್ಪಗಳನ್ನು ಮಾಡಿದ್ದೇನೆ, ತಿದ್ದಿಕೊಂಡಿದ್ದೇನೆ. ಹಣಕ್ಕಾಗಿ ನಟಿಸಬೇಕು ಅಂತಿಲ್ಲ. ಹೀಗಾಗಿ ಆಯ್ಕೆಯ ವಿಷಯದಲ್ಲಿ ತುಂಬ ಎಚ್ಚರಿಕೆ ವಹಿಸುತ್ತೇನೆ. ಅಪ್ಪನಿಗೆ ನಾನು ಸ್ಪರ್ಧಿಸುವುದು ಆಗುವುದಿಲ್ಲ. ಅವರು ಲೆಜೆಂಡ್​. ಈಗಲೂ ಒಂದು ಸಿನಿಮಾಗೆ ಚೆನ್ನಾಗಿ ಓಪನಿಂಗ್​ ಸಿಗಲಿಲ್ಲ ಎಂದರೆ ಅಪ್ಪ ಬೇಸರ ಮಾಡಿಕೊಳ್ಳುತ್ತಾರೆ. ಪ್ರತಿ ವರ್ಷವೂ ಸಿನಿಮಾ ಪ್ರಶಸ್ತಿಗಳ ನಾಮಿನೇಷನ್​ ಸಮಯದಲ್ಲಿ ಯುವನಟರ ಜತೆಗೆ ಅವರೂ ಸ್ಪರ್ಧೆಯಲ್ಲಿರುತ್ತಾರೆ.
  • ಪ್ಯಾನ್​ ಇಂಡಿಯಾ ಪರಿಕಲ್ಪನೆಯ ಬಗ್ಗೆ…
    ಪ್ಯಾನ್​ ಇಂಡಿಯಾ ಎನ್ನುವುದಕ್ಕಿಂತ ಭಾರತೀಯ ಸಿನಿಮಾ ಎನ್ನುವುದು ಉತ್ತಮ. "ಕಾಂತಾರ' ಕನ್ನಡದಿಂದ ಮೂಡಿಬಂದ ಭಾರತೀಯ ಸಿನಿಮಾ. ರಿಷಬ್​ ಶೆಟ್ಟಿ ಇಡೀ ವಿಶ್ವಕ್ಕೆ ಒಂದು ಜಾಗದಲ್ಲಿ ನಡೆಯುವ ಆಚರಣೆಗಳ ಬಗ್ಗೆ ತಿಳಿಸಿದರು. ಅಂತಹ ಪ್ರಯತ್ನಗಳು ಆಗಬೇಕು.
  • ಮಮ್ಮೂಟಿ, ದುಲ್ಕರ್​ ಇಬ್ಬರನ್ನೂ ಒಂದೇ ಚಿತ್ರದಲ್ಲಿ ಯಾವಾಗ ನೋಡಬಹುದು?
    ನಾವಿಬ್ಬರೂ ಒಟ್ಟಿಗೆ ನಟಿಸಬೇಕು ಅಂತಾಸೆ ನನಗೂ ಇದೆ. ಅಪ್ಪನ ಬಳಿಯೂ ಮಾತನಾಡಿದ್ದೇನೆ. ಆದರೆ, ಅವರೇ ನೋಡೋಣ ಎಂದಿದ್ದಾರೆ.
  • ಕನ್ನಡದ ಕಲಾವಿದರು ಪರಿಚಯವಿದ್ದಾರಾ?
    ರಿಷಬ್​ ಶೆಟ್ಟಿ ಭೇಟಿಯಾಗಿದ್ದೇನೆ, ಡಾಲಿ ಧನಂಜಯ ಜತೆಗೂ ೋನ್​ನಲ್ಲಿ ಮಾತನಾಡಿದ್ದೇನೆ. ಅವರ ಜತೆ ಮಾತನಾಡಿ ಖುಷಿಯಾಯಿತು.