ಬೆಂಗಳೂರು: 'ಎಲ್ಲರಲ್ಲೂ ಒಂದು ಮನವಿ, ವಿಕ್ರಂ ವೇದ ತಮಿಳು ಚಿತ್ರದ ಗೂಗಲ್ ಪುಟದಲ್ಲಿ ನಮ್ಮ ಡಾ. ರಾಜಕುಮಾರ್ ಅವರ ಫೋಟೋ ಬೇರೆ ಹೆಸರಿನಲ್ಲಿ (half boil) ಅಂತ ನಮೂದಿಸಲಾಗಿದೆ, ದಯಮಾಡಿ ಅದನ್ನು ಗೂಗಲ್ ಗೆ report ಮಾಡಿ, ತಪ್ಪು ಸರಿ ಹೋಗಲಿ ...'
ಇದನ್ನೂ ಓದಿ: ಜಾಹೀರಾತಿನಲ್ಲಿ ನಟಿ ಸಂಯುಕ್ತಾ ಪ್ರಾಣಿಪ್ರೀತಿ
ಹಾಗಂತ ಮನವಿ ಮಾಡಿದ್ದಾರೆ ರಿಷಭ್ ಶೆಟ್ಟಿ. ಆಗಿದ್ದೇನೆಂದರೆ, ತಮಿಳಿನ ಸೂಪರ್ ಹಿಟ್ ಚಿತ್ರವಾದ 'ವಿಕ್ರಮ್ ವೇದ' ಚಿತ್ರವನ್ನು ಗೂಗಲ್ನಲ್ಲಿ ಹುಡುಕಿದರೆ, ಚಿತ್ರದ ತಾರಾಗಣ ಕಾಣುತ್ತದೆ. ಇದರಲ್ಲಿ ಡಾ. ರಾಜಕುಮಾರ್ ಅವರ ಫೋಟೋ ಕಾಣುತ್ತದೆ. ಈ ತಾರಾಗಣದ ಪಟ್ಟಿಯಲ್ಲಿ ಡಾ. ರಾಜಕುಮಾರ್ ಅವರು ಹಾಫ್ ಬಾಯಿಲ್ ಎಂಬ ಪಾತ್ರವನ್ನು ಮಾಡಿದ್ದಾರೆ ಎಂದು ನಮೂದಿಸಲಾಗಿದೆ.
ಚಿತ್ರದಲ್ಲಿ ಹಾಫ್ ಬಾಯಿಲ್ ಎಂಬ ಪಾತ್ರವಿದ್ದು, ಆ ಪಾತ್ರವನ್ನು ರಾಜಕುಮಾರ್ ಎಂಬ ಬೇರ್ಯಾರೋ ನಟ ಮಾಡಿರುವ ಸಾಧ್ಯತೆ ಇದೆ. ಆದರೆ, ಗೂಗಲ್ ಮಾತ್ರ ಡಾ. ರಾಜಕುಮಾರ್ ಅವರ ಫೋಟೋ ತೋರಿಸುತ್ತಿದೆ. ಡಾ. ರಾಜಕುಮಾರ್ ಅವರು ಕನ್ನಡವಲ್ಲದೆ, ಬೇರೆ ಯಾವ ಭಾಷೆಯಲ್ಲೂ ನಟಿಸಿಲ್ಲ. ಮೇಲಾಗಿ, ಅವರು ನಿಧನರಾಗಿ 15 ವರ್ಷಗಳ ನಂತರ ಅವರು ನಟಿಸಿದ್ದಾರೆ ಎಂದು ಗೂಗಲ್ನಲ್ಲಿ ತೋರಿಸುತ್ತಿರುವುದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ನಿಟ್ಟಿನಲ್ಲಿ ರಿಷಭ್ ಶೆಟ್ಟಿ, ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಹಾಕಿದ್ದು, ಗೂಗಲ್ಗೆ ರಿಪೋರ್ಟ್ ಮಾಡಿ, ತಪ್ಪು ಸರಿ ಹೋಗಲಿ ಎಂದು ಮನವಿ ಮಾಡಿದ್ದಾರೆ. ರಿಷಭ್ ಶೆಟ್ಟಿ ಈ ಪೋಸ್ಟ್ ಹಾಕಿ ಒಂದು ದಿನವಾದರೂ, ಹಲವರು ರಿಪೋರ್ಟ್ ಮಾಡಿದರೂ, ಈ ಪ್ರಮಾದ ಇನ್ನೂ ಸರಿ ಹೋಗಿಲ್ಲ.