ಸಿನಿವಾಣಿ

'ದೂರದರ್ಶನ' ಖ್ಯಾತಿಯ ನಟಿ ಅಯಾನಾ ನವರಾತ್ರಿ ಸಂಭ್ರಮ ಹೇಗಿದೆ?

'ದೂರದರ್ಶನ' ಖ್ಯಾತಿಯ ನಟಿ ಅಯಾನಾ ದಸರಾ ಹಬ್ಬದ ಸಂಭ್ರಮದಲ್ಲಿದ್ದಾರೆ. ಮನೆಯಲ್ಲಿ ನವರಾತ್ರಿ ಹಬ್ಬದ ಸಡಗರವಿದ್ದರೆ, ಅವರು ನಟಿಸಿರುವ 'ದೂರದರ್ಶನ' ಚಿತ್ರ ಮೈಸೂರು ದಸರಾ ಫಿಲಂ ಫೆಸ್ಟಿವಲ್​ನಲ್ಲಿ ಪ್ರದರ್ಶನಗೊಂಡಿರುವ ಖುಷಿ ಈ ವರ್ಷದ ಹಬ್ಬವನ್ನು ಇಮ್ಮಡಿಗೊಳಿಸಿದೆ.

ಈ ಬಾರಿಯ ನವರಾತ್ರಿ ಆಚರಣೆಯ ಬಗ್ಗೆ ಅಯಾನಾ, 'ನಮ್ಮ ಮನೆಯಲ್ಲಿ ದಸರಾ ಹಬ್ಬವನ್ನು ತುಂಬ ಗ್ರಾೃಂಡ್ ಆಗಿ ಮಾಡುವುದಿಲ್ಲ. ಆದರೆ, ಪ್ರತಿದಿನ ಮನೆಯಲ್ಲಿ ಸರಳವಾಗಿ ಪೂಜೆ ಮಾಡುತ್ತೇವೆ. ನವರಾತ್ರಿಯ ಕೊನೆಯ ದಿನ ಹಬ್ಬದ ಸಡಗರ ಹೆಚ್ಚಿರುತ್ತದೆ. ಅಪ್ಪ ಮಾತ್ರ ಪ್ರತಿ ವರ್ಷ ನವರಾತ್ರಿಯ ಒಂಬತ್ತು ದಿನಗಳ ಕಾಲ ಉಪವಾಸ ಇರುತ್ತಾರೆ. ಕಳೆದ ವರ್ಷ ನಾನೂ ಉಪವಾಸ ಇದ್ದೆ. ಆದರೆ, ಈ ವರ್ಷ ಇರಲು ಸಾಧ್ಯವಾಗಲಿಲ್ಲ. ಒಂಬತ್ತು ಮಂದಿ ಸಣ್ಣ ಹೆಣ್ಣು ಮಕ್ಕಳನ್ನು ಮನೆಗೆ ಕರೆದು, ಅವರಿಗೆ ಅಮ್ಮ ಪೂಜೆ ಮಾಡುತ್ತಾರೆ. ಪ್ರತಿದಿನ ದೇವಸ್ಥಾನಕ್ಕೆ ಹೋಗುತ್ತೇನೆ. ಇನ್ನು ಈ ವರ್ಷ ನಾನು ನಟಿಸಿದ್ದ ‘ದೂರದರ್ಶನ’ ಚಿತ್ರ ಮೈಸೂರು ದಸರಾ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡಿದೆ. ಹೀಗಾಗಿ ಹಬ್ಬದ ಸಂಭ್ರಮ ಕೊಂಚ ಹೆಚ್ಚು ಎನ್ನಬಹುದು' ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ಅಂದಹಾಗೆ ಮೈಸೂರು ದಸರಾ ಕಣ್ತುಂಬಿಕೊಳ್ಳುವ ಆಸೆ ಅಯಾನಾ ಅವರದು. 'ಮೈಸೂರು ದಸರಾ ನೋಡುವ ಆಸೆಯಿದೆ. ಪ್ರತಿ ವರ್ಷ ಹೋಗಬೇಕು ಅಂತಂದುಕೊಳ್ಳುತ್ತಿರುತ್ತೇನೆ. ಆದರೆ, ಶೂಟಿಂಗ್‌ನಲ್ಲಿ ಬಿಜಿಯಿರುವ ಈ ವರ್ಷ ಸಾಧ್ಯವಾಗಿಲ್ಲ. ಮುಂದಿನ ವರ್ಷ ಹೋಗಲು ಪ್ರಯತ್ನಿಸುತ್ತೇನೆ. ಮನೆಯಲ್ಲಿ ಗೊಂಬೆಗಳನ್ನು ಕೂರಿಸಬೇಕು ಅಂತ ಆಸೆಯಿದೆ. ಅಮ್ಮ ಕೂಡ ಆಗಾಗ ಹೇಳುತ್ತಿರುತ್ತಾರೆ. ಹೀಗಾಗಿ ಮುಂದಿನ ವರ್ಷದಿಂದ ಸಾಧ್ಯವಾದರೆ ಕೂರಿಸೋಣ ಅಂತ ಸದ್ಯ ಗೊಂಬೆಗಳನ್ನು ಕಲೆಕ್ಟ್ ಮಾಡುತ್ತಿದ್ದೇವೆ' ಎನ್ನುತ್ತಾರೆ ಅಯಾನಾ.