ಸಲ್ಮಾನ್ ಖಾನ್ ಅಭಿನಯದ ‘ರಾಧೇ; ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆಯುವುದಕ್ಕೆ ಸಜ್ಜಾಗಿದೆ. ಚಿತ್ರವು ಮೇ 13ರಂದು ದುಬೈ ಮುಂತಾದ ದೇಶಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಜೀ5 ಮತ್ತು ಜೀಪ್ಲೆಕ್ಸ್ ಓಟಿಟಿಗಳಲ್ಲೂ ಮೂಡಿಬರಲಿದೆ. ಡಿಶ್, ಡಿ2ಎಚ್, ಟಾಟಾಸ್ಕೈ, ಏರ್ಟೆಲ್ ಡಿಜಿಟಲ್ ಟಿವಿ ಮುಂತಾದ ಡಿಟಿಎಚ್ಗಳಲ್ಲೂ ಈ ಚಿತ್ರವನ್ನು ನೋಡಬಹುದಾಗಿದೆ. ಫ್ರೀ ಅಲ್ಲ ದುಡ್ಡು ಕೊಟ್ಟು ಎಂಬುದು ಗೊತ್ತಿರಲಿ! ಪ್ರತಿ ವೀಕ್ಷಣೆಗೆ 249 ರೂ.ಗಳನ್ನು ಕೊಟ್ಟು ಓಟಿಟಿ ಅಥವಾ ಡಿಟಿಎಚ್ನಲ್ಲಿ ಚಿತ್ರವನ್ನು ಮನೆಯಲ್ಲಿ ಕುಳಿತೇ ನೋಡಬಹುದು. ಈ ಪ್ರಯೋಗವೇನಾದರೂ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಪ್ರತಿ ವೀಕ್ಷಣೆಗೆ ಇಂತಿಷ್ಟು ಎಂದು ನಿಗದಿಪಡಿಸಿ, ಓಟಿಟಿ ಮತ್ತು ಡಿಟಿಎಚ್ ಮೂಲಕ ಚಿತ್ರ ಬಿಡುಗಡೆ ಮಾಡುವ ಸಂಪ್ರದಾಯ ಹೆಚ್ಚಾಗಬಹುದು.
ಇಂಥದ್ದೊಂದು ಪ್ರಯತ್ನ ಹೊಸದೇನಲ್ಲ. ಎಂಟು ವರ್ಷಗಳ ಹಿಂದೆಯೇ ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದ್ದರು ಹಿರಿಯ ನಟ- ನಿರ್ದೇಶಕ ಕಮಲ್ ಹಾಸನ್. ಆಗಿನ್ನೂ ಓಟಿಟಿಗಳು ಇಷ್ಟು ಸುದ್ದಿಯಲ್ಲಿರಲಿಲ್ಲ. ಅವರು ತಮ್ಮ ‘ವಿಶ್ವರೂಪಂ’ ಚಿತ್ರವನ್ನು ಚಿತ್ರಮಂದಿರಗಳ ಜತೆಗೆ ಡಿಟಿಎಚ್ ಮೂಲಕವೂ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದರು. ಪ್ರತಿ ವೀಕ್ಷಣೆಗೆ ಇಂತಿಷ್ಟು ಎಂದು ದರ ನಿಗದಿ ಮಾಡಿದ್ದರು. ಹೀಗೆ ಡಿಟಿಎಚ್ಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದರೆ, ಚಿತ್ರಮಂದಿರಗಳಿಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಪ್ರದರ್ಶಕರು ತಗಾದೆ ತೆಗೆದ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ಹಿಂಪಡೆದಿದ್ದರು. ಆ ನಂತರ ಒಂದೆರೆಡು ಚಿತ್ರಗಳು ಈ ಪ್ರಯತ್ನ ಮಾಡಿದರಾದರೂ, ಅಷ್ಟು ಯಶಸ್ವಿಯಾಗಲಿಲ್ಲ. ಈಗ ಸಲ್ಮಾನ್ ಖಾನ್ ತಮ್ಮ ‘ರಾಧೆ’ ಚಿತ್ರವನ್ನು ಆನ್ಲೈನ್ ಮತ್ತು ಡಿಟಿಎಚ್ನಲ್ಲಿ ಪೇ ಪರ್ ವ್ಯೂ ಮಾದರಿಯಲ್ಲಿ ಬಿಡುಗಡೆ ಮಾಡುತ್ತಿರುವುದು ಹಲವರಲ್ಲಿ ಕುತೂಹಲ ಮತ್ತು ನಿರೀಕ್ಷೆಗಳನ್ನು ಮೂಡಿಸಿದೆ. ಒಂದು ಪಕ್ಷ ಹೆಚ್ಚು ಜನ ಡಿಟಿಎಚ್ ಮೂಲಕ ಚಿತ್ರ ನೋಡಿ ಈ ಪ್ರಯೋಗ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಇನ್ನೊಂದಿಷ್ಟು ಹೊಸ ಚಿತ್ರಗಳು ಇದೇ ರೀತಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಓಟಿಟಿಗಳಲ್ಲಿ ಸಿನಿಮಾ ಹಬ್ಬ: ಕನ್ನಡದ ‘ಯುವರತ್ನ’ ಮತ್ತು ‘ರಾಬರ್ಟ್’ ಚಿತ್ರಗಳು ಅಮೆಜಾನ್ ಪ್ರೖೆಂನಲ್ಲಿ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಪವನ್ ಕಲ್ಯಾಣ್ ‘ವಕೀಲ್ ಸಾಬ್’, ‘ಸುಲ್ತಾನ್’, ‘ಸೈನಾ’ ಮುಂತಾದ ಚಿತ್ರಗಳು ಕಳೆದ ತಿಂಗಳಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದವು. ಇದೀಗ ಈ ಚಿತ್ರಗಳು ಓಟಿಟಿಯಲ್ಲಿ ಲಭ್ಯವಿವೆ. ಅದೇ ರೀತಿ ಮಮ್ಮೂಟ್ಟಿ ಅಭಿನಯಿಸಿರುವ ಮಲಯಾಳಂ ಚಿತ್ರ ‘ಒನ್’ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿದೆ. ನಾಗಾರ್ಜುನ ಅವರ ‘ವೈಲ್ಡ್ ಡಾಗ್’ ಚಿತ್ರ ಮತ್ತು ಧನುಷ್ ‘ಜಗಮೇ ತಂಧಿರಮ್ ತಮಿಳು ಚಿತ್ರವನ್ನೂ ಸಹ ನೆಟ್ಫ್ಲಿಕ್ಸ್ ನಲ್ಲಿ ನೋಡಬಹುದು. ಇದು ಈಗಾಗಲೇ ಬಿಡುಗಡೆಯಾಗಿರುವ ಚಿತ್ರಗಳಾದರೆ, ಬಿಡುಗಡೆಯಾಗಬೇಕಿರುವ ಚಿತ್ರಗಳ ಪಟ್ಟಿ ಸಹ ದೊಡ್ಡದಿದೆ. ಅರ್ಜುನ್ ಕಪೂರ್ ಮತ್ತು ರಾಕುಲ್ ಪ್ರೀತ್ ಸಿಂಗ್ ಅಭಿನಯದ ಹಿಂದಿ ಚಿತ್ರ ‘ಸರ್ದಾರ್ ಕಾ ಗ್ರ್ಯಾಂಡ್ಸನ್’, ನಿತಿನ್ ಮತ್ತು ಕೀರ್ತಿ ಸುರೇಶ್ ಅಭಿನಯದ ತೆಲುಗು ಚಿತ್ರ ‘ರಂಗ್ದೇ’, ಧನುಷ್ ಅಭಿನಯದ ತಮಿಳು ಚಿತ್ರ ‘ಕರ್ಣನ್’ ಸಹ ವಿವಿಧ ಓಟಿಟಿಗಳಲ್ಲಿ ಬಿಡುಗಡೆಗೆ ಸಜ್ಜಾಗಿವೆ.