ಸಿನಿವಾಣಿ

ಕನ್ನಡ ಚಿತ್ರದಲ್ಲಿ ಹಿಂದಿಯ ಗೋವಿಂದ?; ಪ್ರಜ್ವಲ್ ಸಿನಿಮಾದಲ್ಲಿ ಅಭಿನಯ..

ಬೆಂಗಳೂರು: ಬಾಲಿವುಡ್ ನಟ ಗೋವಿಂದ ಹಿಂದಿ ಸಿನಿಮಾ ಹೊರತುಪಡಿಸಿದರೆ ದಕ್ಷಿಣದ ಸಿನಿಮಾಗಳಲ್ಲಿ ನಟಿಸಿದ ಉದಾಹರಣೆ ಇಲ್ಲ. 2003ರಲ್ಲಿ ತಮಿಳಿನ ಚಿತ್ರವೊಂದರಲ್ಲಿ ಅತಿಥಿ ಪಾತ್ರ ಮಾಡಿದ್ದರಾದರೂ ಪೂರ್ಣ ಪ್ರಮಾಣದ ನಟನಾಗಿ ಕಾಣಿಸಿಕೊಂಡಿಲ್ಲ. ಇದೀಗ ಅವರನ್ನು ಕನ್ನಡಕ್ಕೆ ಕರೆತರುವ ಕೆಲಸ ತೆರೆಮರೆಯಲ್ಲಿ ನಡೆಯುತ್ತಿದೆ. ಅದೂ ಪ್ರಜ್ವಲ್ ದೇವರಾಜ್ ಚಿತ್ರದಲ್ಲಿ ಎಂಬುದು ವಿಶೇಷ.

ಪ್ರಜ್ವಲ್ ನಟಿಸಲಿರುವ ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರವನ್ನು ಕಿರಣ್ ವಿಶ್ವನಾಥ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ನವೀನ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಇತ್ತೀಚೆಗಷ್ಟೇ ಗೋವಿಂದ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಅಷ್ಟೇ ಅಲ್ಲ ಅವರಿಗೆ ಸಿನಿಮಾ ಕಥೆಯನ್ನೂ ಹೇಳಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ. ಹಾಗಾದರೆ ಗೋವಿಂದ ಅವರ ಪಾತ್ರ ಎಂಥದ್ದು? ಸದ್ಯದ ಮಾಹಿತಿ ಪ್ರಕಾರ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಪ್ರಮುಖವೊಂದಕ್ಕೆ ಬಣ್ಣ ಹಚ್ಚಲಿದ್ದಾರಂತೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.