ಬೆಂಗಳೂರು: ‘ಕೆಜಿಎಫ್ ಚಾಪ್ಟರ್ 2’ ಬಿಡುಗಡೆಯಾಗಿ ಆರು ತಿಂಗಳಾದರೂ ಯಶ್ ಮುಂದಿನ ಚಿತ್ರ ಯಾವುದು ಎಂಬ ವಿಷಯ ಇನ್ನೂ ಗುಟ್ಟಾಗಿಯೇ ಉಳಿದಿದೆ. ‘ಮಫ್ತಿ’ ನಿರ್ದೇಶಕ ನರ್ತನ್ ಜತೆ ಚಿತ್ರ ಮಾಡುತ್ತಾರಂತೆ. ಯಶ್ ಮುಂದಿನ ಚಿತ್ರಕ್ಕೆ ತಮಿಳು ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳುತ್ತಾರಂತೆ. ತೆಲುಗು ನಿರ್ದೇಶಕ ಬೋಯಪಾಟಿ ಶ್ರೀನು ಜತೆ ಯಶ್ ಸಿನಿಮಾ ಫಿಕ್ಸ್ ಅಂತೆಲ್ಲ ಸುದ್ದಿಗಳು ಹರಿದಾಡಿದ್ದವು. ಈಗ ಹೊಸ ಸುದ್ದಿಯ ಪ್ರಕಾರ ಯಶ್ಗೆ ಬಾಲಿವುಡ್ನಿಂದ ಎರಡು ಆಫರ್ಗಳು ಬಂದಿವೆ ಎನ್ನಲಾಗಿದೆ.
‘ಕೆಜಿಎಫ್ 1’ ಚಿತ್ರಕ್ಕಿಂತ ‘ಕೆಜಿಎಫ್ 2’ ದೊಡ್ಡ ಮಟ್ಟದ ಹಿಟ್ ಆಗಿತ್ತು. ಈಗ ‘ಕೆಜಿಎಫ್ 2’ ಬಳಿಕ ಮಾಡಲಿರುವ ಹೊಸ ಸಿನಿಮಾ ಅದಕ್ಕಿಂತಲೂ ದೊಡ್ಡ ಹಿಟ್ ಆಗಬೇಕು ಎಂಬುದು ಯಶ್ ಆಲೋಚನೆ. ಹೀಗಾಗಿಯೇ ನಿಧಾನವಾದರೂ ಸರಿಯೇ ಒಂದೊಳ್ಳೆ ಕಥೆ, ಚಿತ್ರ, ಪಾತ್ರದೊಂದಿಗೆ ವಾಪಸ್ಸಾಗಬೇಕು ಎಂದು ಸಮಯ ತೆಗೆದುಕೊಳ್ಳುತ್ತಿದ್ದಾರಂತೆ. ಸದ್ಯ ಬಾಲಿವುಡ್ನಿಂದ ಅವರಿಗೆ ‘ಬ್ರಹ್ಮಾಸ್ತ್ರ 2’ ಚಿತ್ರದಲ್ಲಿ ನಟಿಸಲು ಆಫರ್ ಬಂದಿದೆ ಎನ್ನಲಾಗಿದೆ. ಅಯಾನ್ ಮುಖರ್ಜಿ ನಿರ್ದೇಶನದ ರಣಬೀರ್ ಕಪೂರ್, ಅಮಿತಾಭ್ ಬಚ್ಚನ್, ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ‘ಬ್ರಹ್ಮಾಸ್ತ್ರ 1’ ಚಿತ್ರದ ಮುಂದುವರಿದ ಭಾಗವಿದು.
ಈ ಚಿತ್ರದ ಜತೆಗೆ ‘ರಂಗ್ ದೇ ಬಸಂತಿ’, ‘ಭಾಗ್ ಮಿಲ್ಕಾ ಭಾಗ್’ ಚಿತ್ರಗಳ ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಕೂಡ ಮತ್ತೊಂದು ಚಿತ್ರವನ್ನು ಯಶ್ಗೆ ಆಫರ್ ಮಾಡಿದ್ದಾರೆ ಎನ್ನಲಾಗಿದೆ. ರಾಕೇಶ್ ಮಹಾಭಾರತದ ‘ಕರ್ಣ’ನ ಕುರಿತ ಚಿತ್ರ ಮಾಡಲಿದ್ದು, ಕರ್ಣನ ಪಾತ್ರಕ್ಕೆ ಯಶ್ರನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ಎರಡು ಭಾಗಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಯಶ್ ‘ಬ್ರಹ್ಮಾಸ್ತ್ರ 2’ ಚಿತ್ರದಲ್ಲಿ ನಟಿಸಲಿದ್ದಾರಾ? ‘ಕರ್ಣ’ ಚಿತ್ರದಲ್ಲಿ ಅಭಿನಯಿಸಲಿದ್ದಾರಾ? ಎರಡೂ ಚಿತ್ರಗಳಲ್ಲೂ ಕಾಣಿಸಿಕೊಳ್ಳಲಿದ್ದಾರಾ? ಅಥವಾ ಎರಡನ್ನೂ ಬಿಟ್ಟು ಬೇರೆ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುತ್ತಾರಾ ಎಂಬುದು ಬರುವ ಜನವರಿ 8ರ ಅವರ ಹುಟ್ಟುಹಬ್ಬದಂದು ತಿಳಿಯಲಿದೆ. -ಏಜೆನ್ಸೀಸ್