ಸಿನಿವಾಣಿ

ಒಟಿಟಿಯಲ್ಲಿ ಬರಲಿದೆ ಪದ್ಮಶ್ರೀ ಪುರಸ್ಕೃತ ನಟಿ ಭಾರತಿ ವಿಷ್ಣುವರ್ಧನ್​ ಅವರ 'ಬಾಳೆ ಬಂಗಾರ'

Webdesk - Ravikanth

ಬೆಂಗಳೂರು: ಪದ್ಮಶ್ರೀ ಪುರಸ್ಕೃತೆ, ಬಹುಭಾಷಾ ತಾರೆ, ನಟಿ ಭಾರತಿ ವಿಷ್ಣುವರ್ಧನ್​ ಅವರ ಜೀವನಗಾಥೆ 'ಬಾಳೆ ಬಂಗಾರ' ಆಗಿ ಹೊರಹೊಮ್ಮಲಿದೆ. ಅರ್ಥಾತ್​ ಅವರ ಅಳಿಯ, ನಟ ಅನಿರುದ್ಧ್ ಅವರು ಭಾರತಿ ವಿಷ್ಣುವರ್ಧನ್​ ಕುರಿತ ಸಾಕ್ಷ್ಯಚಿತ್ರವೊಂದನ್ನು ತರಲಿದ್ದು, ಅದಕ್ಕೆ 'ಬಾಳೆ ಬಂಗಾರ' ಎಂಬ ಶೀರ್ಷಿಕೆ ಇರಿಸಿದ್ದಾರೆ.

ಇಂದು ಭಾರತಿ ವಿಷ್ಣುವರ್ಧನ್​ ಅವರ ಜನ್ಮದಿನದ ಪ್ರಯುಕ್ತ 'ಬಾಳೆ ಬಂಗಾರ' ಸಾಕ್ಷ್ಯಚಿತ್ರದ ಪೋಸ್ಟರ್ ಹಾಗೂ ಟ್ರೇಲರ್ ಬಿಡುಗಡೆ ಮಾಡಿರುವ ಅನಿರುದ್ಧ್, ಆ ಮೂಲಕ ಭಾರತಿ ಅವರಿಗೆ ಜನ್ಮದಿನದ ಶುಭಾಶಯವನ್ನು ಕೋರಿದ್ದಾರೆ. 'ಕೀರ್ತಿ ಇನ್ನೋವೇಷನ್ಸ್​' ಮೂಲಕ ನಿರ್ಮಾಣ ಆಗಲಿರುವ ಈ ಸಾಕ್ಷ್ಯಚಿತ್ರಕ್ಕೆ ಅನಿರುದ್ಧ್ ಅವರದೇ ಸಂಕಲ್ಪನೆ, ಸಂಶೋಧನೆ, ಬರಹ, ನಿರೂಪಣೆ, ನಿರ್ದೇಶನ ಇರಲಿದೆ.

ಈ ಸಾಕ್ಷ್ಯಚಿತ್ರಕ್ಕೆ ಗುರುಕಿರಣ್ ಅವರ ಹಿನ್ನೆಲೆ ಸಂಗೀತ, ದಕ್ಷ ಮೀಡಿಯಾದ ಸಂಕಲನ, ಕರಿಸುಬ್ಬು ಸ್ಟುಡಿಯೋಸ್​ ಧ್ವನಿ, ಶಿವಕುಮಾರ್ ಅಂಬಲಿ, ಕೆ.ರಾಮ್​ ಪುಲ್ಲರೆಡ್ಡಿ, ವಿನೋದ್​ ನಾಯ್ಡು ಅವರ ಛಾಯಾಗ್ರಹಣವಿದ್ದು, ನಿರ್ಮಾಣ ಬಹುತೇಕ ಮುಗಿದಿದೆ. ಇದನ್ನು ಸಾಕ್ಷ್ಯಚಿತ್ರ ಎಂದರೂ ಬಹುತೇಕ ಸಿನಿಮಾ ಥರವೇ ಇರಲಿದೆ. 2 ಗಂಟೆ 21 ನಿಮಿಷ ಕಾಲ ಇರುವ ಈ ಸಾಕ್ಷ್ಯಚಿತ್ರದಲ್ಲಿ ಭಾರತಿ ಅವರ ಜೀವನ ಕುರಿತ ಸಮಗ್ರ ಚಿತ್ರಣ ಇರಲಿದೆ. ಶೀಘ್ರದಲ್ಲೇ ಇದನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅನಿರುದ್ಧ್​ ತಿಳಿಸಿದ್ದಾರೆ.