ಸಿನಿವಾಣಿ

ಕಪಾಳಕ್ಕೆ ಹೊಡೆಯುವ ಧೈರ್ಯ ನಿನಗಿದೆಯಾ? ವಿಶಾಲ್​ ವಿರುದ್ಧ ರಾಧಿಕಾ ಶರತ್​ಕುಮಾರ್ ಆಕ್ರೋಶ

ಚೆನ್ನೈ: ನ್ಯಾಯಮೂರ್ತಿ ಹೇಮಾ ಸಮಿತಿ ನೀಡಿರುವ ವರದಿ ಕೇರಳ ಚಿತ್ರರಂಗದಲ್ಲಿ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ ಸಂಚಲನ ಮೂಡಿಸಿದೆ. ಈ ವರದಿಯೊಂದಿಗೆ ಸ್ಟಾರ್ ನಟಿಯರು ಚಿತ್ರರಂಗದಲ್ಲಿ ಎದುರಿಸುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡುತ್ತಿದ್ದಾರೆ. ಇಂಡಸ್ಟ್ರಿಯಲ್ಲಿ ನಿರ್ದೇಶಕ, ನಿರ್ಮಾಪಕ, ಹೀರೋ ಹಾಗೂ ಅಸಿಸ್ಟೆಂಟ್ ಡೈರೆಕ್ಟರ್ ಸೇರಿದಂತೆ ಅನೇಕರು ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿದ್ದಾರೆ. ಹೇಮಾ ಸಮಿತಿ ನೀಡಿರುವ ವರದಿ ಪ್ರಕಾರ 17 ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಪೈಕಿ ಇಬ್ಬರು ನಟರ ವಿರುದ್ಧ ದೂರು ದಾಖಲಿಸಲಾಗಿದೆ.

ಹೇಮಾ ಸಮಿತಿ ವರದಿ ಬಳಿಕ ಒಂದೊಂದೆ ಆರೋಪಗಳು ಬೆಳಕಿಗೆ ಬರುತ್ತಿದ್ದಂತೆ ಮಲಯಾಳಂ ಸಿನಿ ಇಂಡಸ್ಟ್ರಿಯ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ​​ಸದಸ್ಯರು ಒಬ್ಬೊಬ್ಬರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗಷ್ಟೇ ಸ್ಟಾರ್ ಹೀರೋ ಮೋಹನ್ ಲಾಲ್ ಕೂಡ ಮೂವಿ ಅಸೋಸಿಯೇಷನ್ ​ಅಧ್ಯಕ್ಷ ​ಹುದ್ದೆಗೆ ರಾಜೀನಾಮೆ ನೀಡಿದ್ದು ಗೊತ್ತೇ ಇದೆ. ಈ ವಿವಾದದ ಬಗ್ಗೆ ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ಇಂಡಸ್ಟ್ರಿಯ ಸೆಲೆಬ್ರಿಟಿಗಳು ದೊಡ್ಡ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ ಮತ್ತು ಆಸಕ್ತಿದಾಯಕ ಕಾಮೆಂಟ್​ಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೇಮಾ ಸಮಿತಿ ನೀಡಿದ ವರದಿ ಕುರಿತು ಕಾಲಿವುಡ್ ಹೀರೋ ವಿಶಾಲ್ ನೀಡಿರುವ ಹೇಳಿಕೆಗೆ ನಟಿ ರಾಧಿಕಾ ಶರತ್​ಕುಮಾರ್ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.

ನಟಿಯರು ಯಾವುದೇ ಕಾರಣಕ್ಕೂ ಅಡ್ಜಸ್ಟ್ ಮಾಡಿಕೊಳ್ಳಬೇಡಿ ಅದರ ಬದಲು ಕಪಾಳಮೋಕ್ಷ ಮಾಡಿ ಎಂದು ಇತ್ತೀಚೆಗಷ್ಟೇ ನಟ ವಿಶಾಲ್ ಕಲಾವಿದೆಯರನ್ನು ಉದ್ದೇಶಿಸಿ ಕಾಮೆಂಟ್ ಮಾತನಾಡಿದ್ದರು. ಇತ್ತೀಚೆಗಷ್ಟೇ ಇದಕ್ಕೆ ಪ್ರತಿಕ್ರಿಯಿಸಿದ ರಾಧಿಕಾ ಶರತ್​ಕುಮಾರ್​, ಇಂಡಸ್ಟ್ರಿಯಲ್ಲಿ ದೊಡ್ಡವರಿಗೆ ಶೂನಲ್ಲಿ ಹೊಡೆದರೆ ಎಲ್ಲವೂ ಸರಿಹೋಗುತ್ತದೆಯೇ? ಆ ನಂತರ ಆ ಹುಡುಗಿಯ ಪರಿಸ್ಥಿತಿ ಹೇಗಿರುತ್ತದೆ ಎಂದು ಯೋಚಿಸಿದ್ದೀರಾ ಎಂದು ರಾಧಿಕಾ ಪ್ರಶ್ನಿಸಿದ್ದಾರೆ.

ಅದರಲ್ಲೂ ಕಲಾವಿದರ ಸಂಘದ ಅಧ್ಯಕ್ಷ ವಿಶಾಲ್ ಏನು ಹೇಳಬೇಕಿತ್ತು ಅಂದರೆ, ನನ್ನ ಬಳಿ ಬಂದು ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಬೇಕಿತ್ತು. ನಟಿಯರೊಂದಿಗೆ ಅನುಚಿತವಾಗಿ ವರ್ತಿಸುವವರಿಗೆ ವಿಶಾಲ್ ಕಪಾಳಮೋಕ್ಷ ಮಾಡುತ್ತಾರಾ? ಆ ಧೈರ್ಯ ಇದೆಯಾ? ವಿಶಾಲ್ ಅವರ ಕಾಮೆಂಟ್‌ಗಳಲ್ಲಿ ಯಾವುದೇ ಅರ್ಥವಿಲ್ಲ. ಇದು ನಾಯಕನ ಭಾಷಣವೇ? ಎಲ್ಲಾ ಮಹಿಳೆಯರಿಗೆ ಸತ್ಯವನ್ನು ಹೇಳುವ ಧೈರ್ಯವಿಲ್ಲ. ನಟರು ಮತ್ತು ನಿರ್ಮಾಪಕರು ನೀವೆಲ್ಲರು ಒಗ್ಗೂಡಿ ನಮ್ಮನ್ನು ಬೆಂಬಲಿಸಿ. ಆಮೇಲೆ ಎಲ್ಲರೂ ಸೇರಿ ಏನು ಕ್ರಮ ಕೈಗೊಳ್ಳಬೇಕು ಅಂತ ನಿರ್ಧರಿಸೋಣ ಎಂದು ರಾಧಿಕಾ ಸಲಹೆ ನೀಡಿದರು.

ಏನಿದು ಹೇಮಾ ಸಮಿತಿ ವರದಿ?

ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು. (ಏಜೆನ್ಸೀಸ್​)