ಚಿಕ್ಕಬಳ್ಳಾಪುರ: ಭಾರತ ದೇಶದಲ್ಲಿ ಖ್ಯಾತ ನಿರ್ದೇಶಕರ ಪಟ್ಟಿಯಲ್ಲಿ ತಮ್ಮ ಉತ್ತಮ ಸಿನಿಮಾಗಳ ಮೂಲಕ ಅವರ ಹೆಸರು ಸೇರಿಸಿಕೊಂಡ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ತಮ್ಮ ಮುಂಬರುವ ‘ಆರ್ಆರ್ಆರ್’ ಚಿತ್ರತಂಡದ ಜತೆಗೆ ಇಂದು ಮಾರ್ಚ್ 19 ರಂದು ಚಿಕ್ಕಬಳ್ಳಾಪುರಕ್ಕೆ ತೆರಳಿದ್ದಾರೆ. ಇಂದು ಸಂಜೆ 6 ಗಂಟೆಯಿಂದ ‘ಆರ್ಆರ್ಆರ್’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಈ ಕಾರ್ಯಕ್ರಮ ಬರೋಬ್ಬರಿ 100 ಏಕರೆಯಲ್ಲಿ ನಡೆಯಲಿದ್ದು, 52,000 ಅಡಿ ಎಲ್ಇಡಿ ಪರದೆಯ ಮೇಲೆ ಈ ಚಿತ್ರತಂಡದ ಮಂದಿ ಅಭಿಮಾನಿಗಳು ಮುಂದೆ ಮಿಂಚಲಿದ್ದಾರೆ.
ಇನ್ನು, ಪ್ರೀ-ರಿಲೀಸ್ ಕಾರ್ಯಕ್ರಮಕ್ಕೂ ಮೊದಲು ನಂದಿ ಬೆಟ್ಟದ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ‘ಆರ್ಆರ್ಆರ್’ ಚಿತ್ರತಂಡ ಮಾಧ್ಯಮ ಮಿತ್ರರಿಗೆ ಒಂದು ಸುದ್ದಿಗೋಷ್ಠಿ ನಡೆಸಿದೆ. ಈ ವೇಳೆ ಸಿನಿಮಾ ಬಗ್ಗೆ ಹಾಗೂ ಸಂಜೆ ನಡೆಯುತ್ತಿರುವ ಪ್ರೀ-ರಿಲೀಸ್ ಕಾರ್ಯಕ್ರಮದ ಬಗ್ಗೆ ಚಿತ್ರದ ನಿರ್ದೇಶಕ ರಾಜಮೌಳಿ ಮಾಹಿತಿಯನ್ನು ನೀಡಿದ್ದರು. ಸಂಜೆ ನಡೆಯಲಿರುವ ಪ್ರೀ-ರಿಲೀಸ್ ಇವೆಂಟ್ನಲ್ಲಿ ''ಕರುನಾಡ ರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ‘ಆರ್ಆರ್ಆರ್’ ತಂಡ ವಿಶೇಷ ನಮನ ಅರ್ಪಿಸಲಿದೆ. ನಟ ಪುನೀತ್ ಅವರ ಹತ್ತು ಹಾಡುಗಳನ್ನು ರಿಮಿಕ್ಸ್ ಮಾಡಿದ್ದು, ಡ್ಯಾನ್ಸ್ ಪರ್ಫಾಮೆನ್ಸ್ ನೀಡಲು ಸಿದ್ಧತೆ ನಡೆದಿದೆ. ಇನ್ನೂ ಹಲವು ವಿಚಾರಗಳು ಈ ಪ್ರೀ-ರಿಲೀಸ್ ಇವೆಂಟ್ನಲ್ಲಿ ಇರಲಿದೆ'', ಎಂದು ಎಸ್.ಎಸ್.ರಾಜಮೌಳಿ ಅವರು ತಿಳಿಸಿದ್ದಾರೆ.
ಇನ್ನು, ಸಿನಿಮಾದ ನಟರು ಜೂ.ಎನ್ಟಿಆರ್, ರಾಮ್ ಚರಣ್ ತೇಜ್ ಕೂಡಾ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದು, ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಸದ್ಯ, ಅಪ್ಪು ಅವರಿಗೆ 52,000 ಅಡಿ ಎಲ್ಇಡಿ ಪರದೆಯ ಮೇಲೆ ವಿಶೇಷ ಗೌರವ ಸಿಗಲಿದೆ ಎಂಬ ಮಾಹಿತಿ ದೊರಕಿದ್ದು, ಅದು ಅಪ್ಪು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ಜತೆಗೆ, ‘ಆರ್ಆರ್ಆರ್’ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ನೋಡಿ ಕಣ್ತುಂಬಿಕೊಳ್ಳಲು ಜನ ಕಾದು ಕುಳಿತ್ತಿದ್ದಾರೆ ಎನ್ನಬಹುದು.