ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಅವರು ಕಳೆದ ಎರಡು ತಿಂಗಳಿನಲ್ಲಿ ಇಬ್ಬರು ಸಹೋದರರನ್ನು ಕರೊನಾದಿಂದಾಗಿ ಕಳೆದುಕೊಂಡಿರುವುದು ಈಗಾಗಲೇ ಸುದ್ದಿಯಾಗಿದೆ. ಆದರೆ, ದಿಲೀಪ್ ಕುಮಾರ್ ಅವರಿಗೆ ಈ ವಿಷಯವನ್ನು ಅವರ ಮನೆಯವರಿನ್ನೂ ಹೇಳಿಯೇ ಇಲ್ಲವಂತೆ. ಹಾಗಂತ ಖುದ್ದು ದಿಲೀಪ್ ಕುಮಾರ್ ಅವರ ಪತ್ನಿ ಸಾಯಿರಾ ಬಾನು ಈ ವಿಷಯವಾಗಿ ಹೇಳಿಕೊಂಡಿದ್ದಾರೆ.
ದಿಲೀಪ್ ಕುಮಾರ್ ಅವರ ಸಹೋದರ ಎಹ್ಸಾನ್ ಖಾನ್ ಅವರು ಆಗಸ್ಟ್ 15ರಂದು ಕರೊನಾಗೆ ಬಲಿಯಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಸೆಪ್ಟೆಂಬರ್ ಎರಡಕ್ಕೆ ದಿಲೀಪ್ ಅವರ ಇನ್ನೊಬ್ಬ ಸಹೋದರ ಅಸ್ಲಂ ಖಾನ್ ಸಹ ಕರೊನಾಗೆ ಬಲಿಯಾದರು.
ಕರೊನಾ ಸೋಂಕು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಇಬ್ಬರೂ ಸಹೋದರರನ್ನು ಆಗಸ್ಟ್ನಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ನಿಧನರಾಗಿದ್ದರು.
ಆದರೆ, ಈ ವಿಷಯವನ್ನು ದಿಲೀಪ್ ಕುಮಾರ್ ಅವರಿಗೆ ಇನ್ನೂ ಹೇಳಿಲ್ಲವಂತೆ. 97 ವರ್ಷ ವಯಸ್ಸಿನ ದಿಲೀಪ್ ಕುಮಾರ್ ಅವರು ಈ ವಿಷಯವನ್ನು ಕೇಳಿದರೆ ಆಘಾತಗೊಳ್ಳಬಹುದು ಎಂಬ ಕಾರಣಕ್ಕೆ ಅವರಿಗಿನ್ನೂ ಹೇಳಿಲ್ಲವಂತೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ದಿಲೀಪ್ ಕುಮಾರ್ ಅವರ ಪತ್ನಿ ಸಾಯಿರಾ ಬಾನು, 'ದಿಲೀಪ್ ಕುಮಾರ್ ಅವರಿಗೆ ಅವರ ಸಹೋದರರ ನಿಧನದ ಬಗ್ಗೆ ಇನ್ನೂ ಏನೂ ಹೇಳಿಲ್ಲ. ಅವರಿಗೆ ನೋವಾಗುವಂತಹ ಯಾವುದೇ ವಿಷಯವನ್ನು ಅವರಿಗೆ ಹೇಳುತ್ತಿಲ್ಲ' ಎಂದು ಅವರು ಹೇಳಿದ್ದಾರೆ.
'ಇತ್ತೀಚೆಗೆ ಅಮಿತಾಭ್ ಬಚ್ಚನ್ ಅವರು ಕೋವಿಡ್ನಿಂದ ನಾನಾವತಿ ಆಸ್ಪತ್ರೆಗೆ ಸೇರಿದ್ದರಲ್ಲ, ಆ ವಿಷಯವನ್ನು ಸಹ ನಾವು ಅವರಿಗೆ ಹೇಳಿರಲಿಲ್ಲ. ಏಕೆಂದರೆ, ಅವರಿಗೆ ಅಮಿತಾಭ್ ಕಂಡರೆ ಬಹಳ ಇಷ್ಟ. ಹಾಗಾಗಿ ವಿಷಯ ಕೇಳಿ ಅವರು ನೊಂದುಕೊಳ್ಳಬಾರದು ಎಂಬ ಕಾರಣಕ್ಕೆ, ಅವರಿಗೆ ಯಾವುದೇ ಆಘಾತಕಾರಿ ವಿಷಯಗಳನ್ನು ತಿಳಿಸುತ್ತಿಲ್ಲ' ಎಂದು ಸಾಯಿರಾ ಬಾನು ಸ್ಪಷ್ಟಪಡಿಸಿದ್ದಾರೆ.