ಮುಂಬೈ: ಭಾರತೀಯ ಚಿತ್ರರಂಗದ 'ಟ್ರಾಜಿಡಿ ಕಿಂಗ್' ಎಂದೇ ಹೆಸರಾಗಿರುವ ದಿಲೀಪ್ ಕುಮಾರ್ ತಮ್ಮ ಸುಧೀರ್ಘ ಚಿತ್ರಪಯಣದಲ್ಲಿ ಎಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಗೊತ್ತಾ? ಕೇವಲ 63 ಚಿತ್ರಗಳಲ್ಲಿ ಮಾತ್ರ ಎಂದರೆ ಆಶ್ಚರ್ಯವಾಗಬಹುದು. ಆದರೂ ಇದು ನಿಜ.
ಇದನ್ನೂ ಓದಿ: ದಿಲೀಪ್ ಕುಮಾರ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
1944ರಲ್ಲಿ ಚಿತ್ರರಂಗಕ್ಕೆ ಬಂದ ದಿಲೀಪ್ ಕುಮಾರ್ ಅಲ್ಲಿಂದ 32 ವರ್ಷಗಳ ಕಾಲ ಸತತವಾಗಿ ನಟಿಸಿದರು. ಈ ಪೈಕಿ ಕೆಲವು ವರ್ಷಗಳ ಕಾಲ ಅವರ ಅಭಿನಯದ ಯಾವುದೇ ಚಿತ್ರ ಬಿಡುಗಡೆಯಾಗಲಿಲ್ಲ. ಕೆಲವೊಮ್ಮೆ ವರ್ಷಕ್ಕೆ ಮೂರು ಚಿತ್ರಗಳು ಬಿಡುಗಡೆಯಗಿದ್ದೂ ಇದೆ. ಈ 32 ವರ್ಷಗಳಲ್ಲಿ ಅವರು ನಟಿಸಿದ್ದು ಕೇವಲ 50 ಚಿತ್ರಗಳಲ್ಲಿ ಮಾತ್ರ.
1976ರಲ್ಲಿ ದಿಲೀಪ್ ಕುಮಾರ್ ಅಭಿನಯದ 50ನೇ ಚಿತ್ರ ಬಿಡುಗಡೆಯಾಯಿತು. ‘ಭೈರಾಗ್’ ಎಂಬ ಹೆಸರಿನ ಈ ಚಿತ್ರದಲ್ಲಿ ದಿಲೀಪ್ ಕುಮಾರ್ ಮೊದಲ ಬಾರಿ ತ್ರಿಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರದ ನಂತರ ಐದು ವರ್ಷಗಳ ಕಾಲ ಗ್ಯಾಪ್ ತೆಗೆದುಕೊಂಡ ಅವರು, ಮನೋಜ್ ಕುಮಾರ್ ನಿರ್ದೇಶನದ ‘ಕ್ರಾಂತಿ’ ಚಿತ್ರದ ಮೂಲಕ ಅಭಿನಯಕ್ಕೆ ವಾಪಸ್ಸಾದರು. ಆ ನಂತರ, 13 ಚಿತ್ರಗಳಲ್ಲಿ ನಟಿಸಿದರು.
ಇದನ್ನೂ ಓದಿ: ದಿಲೀಪ್ ಕುಮಾರ್ ನಿಧನ … ಶೋಕದಲ್ಲಿ ಬಾಲಿವುಡ್
ದಿಲೀಪ್ ಕುಮಾರ್ ಕೊನೆಯದಾಗಿ ಬಣ್ಣ ಹಚ್ಚಿದ ಚಿತ್ರ ಎಂದರೆ ಅದು ‘ಕಿಲಾ’. 1998ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅವರು ದ್ವಿಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರದ ನಂತರ ದಿಲೀಪ್ ಕುಮಾರ್ ಮತ್ತೆ ಬಣ್ಣ ಹಚ್ಚಲಿಲ್ಲ. ಇನ್ನು, 1990ರಲ್ಲಿ ಪ್ರಾರಂಭವಾದ, ಕನ್ನಡದ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ಆಗ್ ಕಾ ದರಿಯಾ’ ಸಂಪೂರ್ಣವಾಯಿತಾದರೂ ಕಾರಣಾಂತರಗಳಿಂದ ಬಿಡುಗಡೆಯಾಗಲಿಲ್ಲ.