ಸಿನಿವಾಣಿ

OTTಯಲ್ಲಿ ಇಷ್ಟೊಂದು ಕೋಟಿ ಗಳಿಸಿತಾ ಸೂಪರ್​ ಹಿಟ್​ ಮಹಾರಾಜ ಸಿನಿಮಾ? ನಿಮ್ಮ ಹುಬ್ಬೇರೋದು ಖಚಿತ! Maharaja

ಚೆನ್ನೈ: ಕಾಲಿವುಡ್​ ಸೂಪರ್​ಸ್ಟಾರ್​ ವಿಜಯ್​ ಸೇತುಪತಿ ( Vijay Sethupathi ) ಅವರ 50ನೇ ಸಿನಿಮಾ "ಮಹಾರಾಜ" ( Maharaja ) ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಜೂನ್​ 14ರಂದು ಯಾವುದೇ ನಿರೀಕ್ಷೆಗಳಿಲ್ಲದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಎಲ್ಲೆಡೆ ಮೆಚ್ಚುಗೆ ಪಡೆಯಿತು. ಅದರಲ್ಲೂ ಒಟಿಟಿ ಸ್ಟ್ರೀಮಿಂಗ್‌ಗೆ ಬಂದ ನಂತರ, ಈ ಚಿತ್ರದ ಖ್ಯಾತಿ ಮತ್ತೊಂದು ಹಂತಕ್ಕೆ ಹೋಯಿತು. ಮಹಾರಾಜ ಈ ವರ್ಷದ ಅತ್ಯುತ್ತಮ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ.

ಈ ಸಿನಿಮಾವನ್ನು ನಿರ್ದೇಶಕ ನಿಥಿಲನ್​ ಸ್ವಾಮಿನಾಥನ್ ನಿರ್ದೇಶಿಸಿದ್ದಾರೆ. ಈ ಹಿಂದೆ ಇವರ ನಿರ್ದೇಶನದಲ್ಲಿ ತೆರೆಕಂಡ ಕುರುಂಗು ಪೋಮಿ ಚಿತ್ರ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದಿರುವುದು ಗಮನಿಸಬೇಕಾದ ಸಂಗತಿ. ತಮ್ಮ ವಿಭಿನ್ನ ಚಿತ್ರಕಥೆಯ ಮೂಲಕ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸುವ ನಿರ್ದೇಶಕ ನಿಥಿಲನ್, ಮಹಾರಾಜ ಸಿನಿಮಾದಲ್ಲೂ ಒಂದೊಳ್ಳೆಯ ಅನುಭವವನ್ನು ಪ್ರೇಕ್ಷಕರಿಗೆ ಕಟ್ಟಿ ಕೊಟ್ಟಿದ್ದಾರೆ.

ಈ ಚಿತ್ರದಲ್ಲಿ ವಿಜಯ್ ಸೇತುಪತಿ ಜೊತೆಗೆ ಬಾಲಿವುಡ್ ನಟ ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ, ಮಮತಾ ಮೋಹನ್‌ದಾಸ್, ಅಭಿರಾಮಿ, ನಟ್ಟಿ ನಟರಾಜ್, ಮುನೀಸ್ಕಾಂತ್, ಸಿಂಗಂ ಪುಲಿ ಸೇರಿದಂತೆ ಹಲವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕೇವಲ 20 ಕೋಟಿ ರೂಪಾಯಿಯಲ್ಲಿ ತಯಾರಾದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

ತಾಜಾ ಸಂಗತಿ ಏನೆಂದರೆ, ಮಹಾರಾಜ ಸಿನಿಮಾ ಒಟಿಟಿಯಲ್ಲೂ ಭರ್ಜರಿ ದಾಖಲೆಯನ್ನು ಬರೆದಿದೆಯಂತೆ. ನೆಟ್‌ಫ್ಲಿಕ್ಸ್​ ಒಟಿಟಿ ಕಂಪನಿ ಮಹಾರಾಜ ಸಿನಿಮಾವನ್ನು 17 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ನೆಟ್‌ಫ್ಲಿಕ್ಸ್ ಒಟಿಟಿ ಸೈಟ್‌ನಲ್ಲಿ ಈ ಸಿನಿಮಾವನ್ನು ಇದುವರೆಗೆ 2 ಕೋಟಿಗೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದು, ಇದರಿಂದ ನೆಟ್‌ಫ್ಲಿಕ್ಸ್​ಗೆ 150 ಕೋಟಿ ರೂ. ಸಂಗ್ರಹವಾಗಿದೆ ಎಂದು ಸಿನಿ ಮೂಲಗಳ ಹೇಳುತ್ತಿವೆ. ಚಿತ್ರಮಂದಿರಗಳಿಗಿಂತ ಒಟಿಟಿಯಲ್ಲೇ ಈ ಸಿನಿಮಾ ಭರ್ಜರಿ ಕಲೆಕ್ಷನ್​ ಮಾಡಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಈ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಈ ಮಾಹಿತಿ ಎಷ್ಟರ ಮಟ್ಟಿಗೆ ಸತ್ಯ ಎಂಬುದು ತಿಳಿದು ಬಂದಿಲ್ಲ. ಈ ವಿಚಾರವಾಗಿ ಸಿನಿಮಾ ತಂಡ ಅಥವಾ ಒಟಿಟಿ ಕಂಪನಿಯೇ ಸ್ಪಷ್ಟನೆ ನೀಡಬೇಕಿದೆ. ಆದರೆ, ಮಹಾರಾಜ ಸಿನಿಮಾವಂತೂ ಸಿನಿಪ್ರೇಕ್ಷಕರನ್ನು ಹೆಚ್ಚು ಗಮನ ಸೆಳೆದಿದ್ದು ಮಾತ್ರ ನಿಜವಾಗಿದೆ. (ಏಜೆನ್ಸೀಸ್​)