ಬೆಂಗಳೂರು: ಬಹುಶಃ ಬೇರೆ ಯಾರಾದರೂ ಆಗಿದ್ದರೆ ಈ ಸಮಯದಲ್ಲಿ ಕಡಿಮೆ ಎಂದರೂ ನಾಲ್ಕು ಸಿನಿಮಾಗಳನ್ನು ಮುಗಿಸಿರುತ್ತಿದ್ದರು. ಆದರೆ, ಧ್ರುವ ಮಾತ್ರ ಕಳೆದ ಮೂರೂವರೆ ವರ್ಷಗಳಿಂದ ‘ಪೊಗರು’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಚಿತ್ರ ಕೊನೆಗೂ ಮುಗಿದಿದ್ದು, ಫೆಬ್ರವರಿ 19ರಂದು ಬಿಡುಗಡೆಯಾಗಲಿದೆ. ಇಷ್ಟಕ್ಕೂ ‘ಪೊಗರು’ ಅಷ್ಟೊಂದು ತಡವಾಗಿದ್ದು ಏಕೆ? ಅದಕ್ಕೆ ಸಾಕಷ್ಟು ಕಾರಣಗಳಿವೆ ಎನ್ನುತ್ತಾರೆ ಧ್ರುವ. ಪ್ರಮುಖವಾಗಿ ಚಿತ್ರದಲ್ಲಿ ಎರಡು ಶೇಡ್ಗಳಿವೆಯಂತೆ. ಒಂದು ಶೇಡ್ನಲ್ಲಿ ಅವರು ಸ್ಕೂಲ್ ಹುಡುಗನಾಗಿ ಕಾಣಿಸಿಕೊಳ್ಳಬೇಕಿದ್ದು, ಮೊದಲು ಅದಕ್ಕೆ ತೂಕ ಕಡಿಮೆ ಮಾಡಿಕೊಂಡರಂತೆ. ಆ ಭಾಗದ ಚಿತ್ರೀಕರಣ ಮುಗಿಸಿ, ಆರು ತಿಂಗಳ ಕಾಲ ತೂಕ ಹೆಚ್ಚಿಸಿಕೊಂಡರಂತೆ. ಇವೆಲ್ಲದರಿಂದ ಸಹಜವಾಗಿಯೇ ಚಿತ್ರ ತಡವಾಯಿತು ಎನ್ನುತ್ತಾರೆ ಧ್ರುವ.
‘ಒಬ್ಬ ನಟ ಏನಾದರೂ ಪ್ರಯೋಗ ಮಾಡುತ್ತೀನಿ ಎಂದಾಗ, ತಡವಾದರೂ ಪರವಾಗಿಲ್ಲ ನಾವು ಜತೆಗಿರುತ್ತೀವಿ ಎಂದು ಹೇಳಬೇಕಾದವರು ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು. ಅಂಥದ್ದೊಂದು ತಂಡ ನನಗೆ ಈ ಚಿತ್ರದಲ್ಲಿ ಸಿಕ್ಕಿದೆ. ಸಣ್ಣ ಆಗೋಕೆ, ದಪ್ಪ ಆಗೋಕೆ ಸಾಕಷ್ಟು ಸಮಯ ಬೇಕಾಯಿತು. ಆದರೆ, ಯಾವತ್ತೂ ತಡವಾಯಿತು ಅಂತ ಅವರು ಹೇಳಲಿಲ್ಲ. ಚಿತ್ರ ನೋಡಿದವರಿಗೂ ಸಾಕಷ್ಟು ತಡವಾಯಿತು ಎನಿಸುವುದಿಲ್ಲ. ಏಕೆಂದರೆ, ವಿಶೇಷವಾದ ಕಂಟೆಂಟ್ ಚಿತ್ರದಲ್ಲಿದೆ. ಜನರ ನಂಬಿಕೆ ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಹೇಗ್ಹೇಗೋ ಸಿನಿಮಾ ಮಾಡಿದರೆ, ಮತ್ತೆ ಯಾವ ಮುಖ ಇಟ್ಟುಕೊಂಡು ಅವರ ಮುಂದೆ ಹೋಗೋದು? ಹಾಗಾಗಿ ಇಲ್ಲಿ ಕ್ವಾಲಿಟಿ ಮುಖ್ಯ. ಕ್ವಾಲಿಟಿ ಬೇಕು ಅಂದರೆ ಸಹಜವಾಗಿಯೇ ತಡವಾಗುತ್ತದೆ’ ಎಂಬುದು ಧ್ರುವ ವಾದ. ಹೀಗೆ ಒಂದೊಂದು ಚಿತ್ರಕ್ಕೆ ಮೂರು ವರ್ಷ ತೆಗೆದುಕೊಂಡರೆ, ಅಭಿಮಾನಿಗಳು ಏನಂತಾರೆ ಮತ್ತು ಎಲ್ಲಕ್ಕಿಂತ ಒಬ್ಬ ನಟ ಒಂದೇ ಪಾತ್ರದ ಹ್ಯಾಂಗೋವರ್ನಲ್ಲಿ ಇರುವುದು ಕಷ್ಟವಲ್ಲವಾ ಎಂಬ ಪ್ರಶ್ನೆ ಸಹಜ. ಅದಕ್ಕೆ ಧ್ರುವ ಉತ್ತರ ಹೀಗಿದೆ.
‘ಎಲ್ಲ ಕಲಾವಿದರ ಉದ್ದೇಶ ಜನರಿಗೆ ರೀಚ್ ಆಗುವುದು. ಅದಕ್ಕಾಗಿ ಎಷ್ಟು ಬೇಕಾದರೂ ಕಷ್ಟಪಡುತ್ತಾರೆ. ಜನರಿಗೆ ಹತ್ತಿರವಾಗಬೇಕು ಎಂಬುದನ್ನು ತಲೆಯಲ್ಲಿ ಇಟ್ಟುಕೊಂಡಾಗ ಯಾವುದೂ ಕಷ್ಟ ಅಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಏನೇ ಕಟ್ಟಬೇಕಾದರೂ ಮೊದಲು ಫೌಂಡೇಷನ್ ಮುಖ್ಯ. ಮೊದಲು ಬೇರು ಬಿಡಬೇಕು. ಆ ನಂತರ ಚಿತ್ರ ಮಾಡೋದು ಇದ್ದೇ ಇದೆ. ಇವತ್ತಿಗೂ ‘ನಾಗರಹಾವು’ ನೋಡಿದರೆ ಫ್ರೆಶ್ ಅಂತ ಅನಿಸುತ್ತೆ. ಕಾರಣ, ಆ ರೀತಿ ಚಿತ್ರ ಮಾಡಿದ್ದಾರೆ. ಸಿನಿಮಾಕ್ಕಿಂತ ದೊಡ್ಡವರು ಯಾರೂ ಅಲ್ಲ. ಸಿನಿಮಾ ಚೆನ್ನಾಗಿ ಮಾಡಬೇಕು ಅಷ್ಟೇ. ಎಷ್ಟೇ ಕಷ್ಟವಾದರೂ ಪರವಾಗಿಲ್ಲ’ ಎನ್ನುತ್ತಾರೆ ಧ್ರುವ.