ಮಂಗಳೂರು: ನಟ ರಿಷಭ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ 'ಕಾಂತಾರ' ಸಿನಿಮಾ ನಿರೀಕ್ಷೆಗೂ ಮೀರಿ ದಾಖಲೆ ಬರೆಯುತ್ತಿದೆ. ಕನ್ನಡ ಮಾತ್ರವಲ್ಲದೇ ಇತರ ಭಾಷೆಗಳಲ್ಲೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಬಹುಶಃ ಈ ಸಿನಿಮಾವನ್ನು ಮೆಚ್ಚಿಕೊಳ್ಳದ ಪ್ರೇಕ್ಷಕರೇ ಇಲ್ಲ. ಇದೀಗ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ತಮ್ಮ ಕುಟುಂಬದೊಂದಿಗೆ 'ಕಾಂತಾರ' ನೋಡಿದ್ದು, ಇನ್ನೂ ಈ ಸಿನಿಮಾ ಗುಂಗಿನಿಂದ ಹೊರಬಂದಿಲ್ಲವಂತೆ!
ಮಂಗಳೂರಿನ ಮಾಲ್ವೊಂದರಲ್ಲಿ ಸಾರ್ವಜನಿಕರೊಂದಿಗೆ ಕುಳಿತು ಸಿನಿಮಾ ನೋಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ವೀರೇಂದ್ರ ಹೆಗ್ಗಡೆ, ಸಿನಿಮಾ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 'ಸಿನಿಮಾಗಳನ್ನು ನೋಡಿ ಬಹಳ ದಿನಗಳಾಗಿತ್ತು. ಈ ಸಿನಿಮಾ ಸಾಮಾನ್ಯ ಸಿನಿಮಾಗಳಿಗಿಂತ ವಿಭಿನ್ನವಾಗಿದೆ. ಕರ್ನಾಟಕದಲ್ಲಿನ ಒಂದು ಭಾಗದ ವಿಶೇಷ ಆಚರಣೆ, ನಂಬಿಕೆ ಮತ್ತು ಪ್ರಮುಖವಾಗಿ ದೈವಾರಾಧನೆಯಲ್ಲಿರುವ ಸೂಕ್ಷ್ಮತೆಯನ್ನು ರಿಷಭ್ ಶೆಟ್ಟಿಯವರು ಈ ಸಿನಿಮಾದಲ್ಲಿ ಬಹಳ ಚೆನ್ನಾಗಿ ತೋರಿಸಿದ್ದಾರೆ. ಇಂತಹ ಚಿತ್ರಗಳು ಯುವ ಜನತೆಗೆ ಹೊಸ ಕಥೆಯೊಂದಿಗೆ ಹಳೆಯದರ ಸ್ಮರಣೆಯನ್ನು ನೀಡುತ್ತದೆ. ಈ ಸಿನಿಮಾದಲ್ಲಿ ಹೊಸ ದೃಷ್ಟಿಕೋನವಿದೆ' ಎಂದರು.
'ಇಂದು ನಮಗೆ ಬೇಕಾಗಿರುವುದು ಸತ್ಯದ ರಕ್ಷಣೆ, ಅನ್ಯಾಯದ ವಿರುದ್ಧ ಹೋರಾಟ ಮತ್ತು ನೆಮ್ಮದಿಯ ಜೀವನ. ಜಾತಿ, ಮತ, ಪಂಥಗಳ ಬೇಧ ಮರೆತು ಎಲ್ಲರೂ ಸಹಬಾಳ್ವೆ ಮಾಡಬೇಕೆಂಬ ಸಂದೇಶ ಕಾಂತಾರದಲ್ಲಿದೆ. ಈ ಸಿನಿಮಾ ನೋಡಿ ಬಹಳ ಸಂತೋಷವಾಗಿದೆ. ನಾನಿನ್ನೂ ಈ ಚಿತ್ರದ ಗುಂಗಿನಿಂದ ಹೊರಗೆ ಬಂದಿಲ್ಲವಾದ್ದರಿಂದ ಹೆಚ್ಚು ಮಾತನಾಡುವುದಿಲ್ಲ' ಎಂದ ಡಾ. ವೀರೇಂದ್ರ ಹೆಗ್ಗಡೆ, ಕಾಂತಾರ ಚಿತ್ರ ತಂಡಕ್ಕೆ ಅಭಿನಂದನೆ ತಿಳಿಸಿದರು.