ಸಿನಿವಾಣಿ

ಧನಂಜಯ್​-ರಚಿತಾ ಹೊಸ ಚಿತ್ರದ ಬಗ್ಗೆ ಇಲ್ಲಿದೆ ಡೀಟೇಲ್ಸ್​ ...

ಧನಂಜಯ್​ ಮತ್ತು ರಚಿತಾ ರಾಮ್​ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಕಳೆದೊಂದು ತಿಂಗಳಿನಿಂದ ಕೇಳಿ ಬರುತ್ತಲೇ ಇದೆ. ಕೆಲವು ದಿನಗಳ ಹಿಂದೆ ಈ ಚಿತ್ರದ ಫೋಟೋಶೂಟ್​ ಸಹ ಮಿನರ್ವ ಮಿಲ್​ನಲ್ಲಿ ಮುಗಿದಿದೆ. ಆದರೆ, ಚಿತ್ರ ಯಾವಾಗ ಶುರು, ವಿಶೇಷತೆ ಏನು ಎಂಬ ಯಾವ ವಿಷಯದ ಬಗ್ಗೆಯೂ ಸ್ಪಷ್ಟತೆ ಇರಲಿಲ್ಲ. ಇದೀಗ ಚಿತ್ರದ ನಿರ್ಮಾಪಕ ವಿಖ್ಯಾತ್​, ಈ ಹೊಸ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ಅಂದಹಾಗೆ, ಈ ಹೊಸ ಚಿತ್ರಕ್ಕೆ ಇನ್ನೂ ಹೆಸರಿಡಲಾಗಿಲ್ಲ. ಮೂರು ಹೆಸರುಗಳು ಚಿತ್ರಕ್ಕೆ ಹೊಂದುವಂತಿದ್ದು, ಈ ಪೈಕಿ ಯಾವುದು ಫೈನಲ್​ ಮಾಡುವುದು ಎಂಬ ಜಿಜ್ನಾಸೆ ಚಿತ್ರತಂಡದಲ್ಲಿ ಇದೆ. ಹಾಗಾಗಿ ಪ್ರೊಡಕ್ಷನ್​ ನಂ 4ಗೆ ಎಂಬ ಹೆಸರಿನಲ್ಲಿ ಚಿತ್ರಕ್ಕೆ ಚಾಲನೆ ನೀಡಲಾಗಿದ್ದು, ಸದ್ಯದಲ್ಲೇ ಚಿತ್ರದ ಅಧಿಕೃತ ಟೈಟಲ್​ ಪ್ರಕಟಿಸಲಾಗುತ್ತದಂತೆ.

ಇನ್ನು ಚಿತ್ರದ ಮೊದಲ ಹಂತದ ಚಿತ್ರೀಕರಣ ಸೆಪ್ಟೆಂಬರ್​ ಮೊದಲ ವಾರದಿಂದ ಶುರುವಾಗಲಿದೆ. ಇದೊಂದು ಪೀರಿಯಡ್​ ಕಥೆಯಾಗಿದ್ದು, 70-80ರ ದಶಕದ ಕಥೆ ಹೇಳುತ್ತದೆಯಂತೆ. ಅದಕ್ಕೆ ಹೊಂದುವಂತಹ ಪರಿಸರ ಆಗುಂಬೆ, ತೀರ್ಥಹಳ್ಳಿ, ಕಾರವಾರ ಮುಂತಾದ ಕಡೆ ಹುಡುಕಲಾಗಿದ್ದು, ಅಲ್ಲೇ ಚಿತ್ರೀಕರಣ ನಡೆಯಲಿದೆ. ಕಲಾ ನಿರ್ದೇಶಕ ಗುಣ, ಈ ಸ್ಥಳಗಳಲ್ಲಿ ವಿಶೇಷವಾದ ಸೆಟ್​ ನಿರ್ಮಿಸಲಿದ್ದಾರೆ.

ಇದೊಂದು ಲವ್​ ಕಂ ಆಕ್ಷನ್​ ಚಿತ್ರವಾಗಿದ್ದು, 'ವಾಡಾ ಚೆನ್ನೈ'ನ ಫ್ಲೇವರ್​ ಇರುತ್ತದಂತೆ. ರಚಿತಾ ರಾಮ್​ ಒಂದು ವಿಭಿನ್ನವಾದ ಪಾತ್ರವನ್ನು ಈ ಚಿತ್ರದಲ್ಲಿ ಮಾಡುತ್ತಲಿದ್ದು, ಇದುವರೆಗೂ ಅಂಥದ್ದೊಂದು ಪಾತ್ರವನ್ನು ಕನ್ನಡದಲ್ಲಿ ಯಾರೂ ಮಾಡಿಲ್ಲ ಎನ್ನುತ್ತಾರೆ ವಿಖ್ಯಾತ್​. 'ಸದ್ಯದಲ್ಲೇ ಟೀಸರ್​ ಬಿಡುಗಡೆಯಾಗಲಿದ್ದು, ರಚಿತಾ ರಾಮ್​ ಅವರ ಝಲಕ್​ ಈ ಟೀಸರ್​ನಲ್ಲಿ ನೋಡಬಹುದಾಗಿದೆ' ಎನ್ನುತ್ತಾರೆ.

'ಪುಷ್ಪಕ ವಿಮಾನ' ಚಿತ್ರದಲ್ಲಿ ಕೆಲಸ ಮಾಡಿದ್ದ ತಾಂತ್ರಿಕ ತಂಡವೇ ಇಲ್ಲೂ ಮುಂದುವರೆಯಲಿದೆ. ರವೀಂದ್ರನಾಥ್​ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದರೆ, ಚರಣ್​ರಾಜ್​ ಸಂಗೀತ ಸಂಯೋಜಿಸುತ್ತಿದ್ದಾರೆ.