ಬೆಂಗಳೂರು: ಗಂಗಾಂಭಿಕಾ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ದೇವರಾಜ ಕುಮಾರ್ ನಿರ್ದೇಶನದ ತಾಜ್ ಮಹಲ್-2 ಚಿತ್ರದ ಕೊನೆಯ ಹಂತದ ಚಿತ್ರೀಕರಣ ಮಾರ್ಚ್ 15 ರಿಂದ ಆರಂಭವಾಗಲಿದೆ. ಬೆಂಗಳೂರಿನ ಹೆಚ್ಎಂಟಿ ಲೇಔಟ್ ನಲ್ಲಿ ಆರು ದಿನಗಳ ಕಾಲ ಸಾಹಸ ಸನ್ನಿವೇಶ ಹಾಗೂ ಹಾಡಿನ ಚಿತ್ರೀಕರಣ ನಡೆಯಲಿದೆ. ಇದರೊಂದಿಗೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಲಿದೆ. ಮೇನಲ್ಲಿ ಟೀಸರ್ ಬಿಡುಗಡೆಯಾಗಲಿದ್ದು, ನಂತರ ಚಿತ್ರ ತೆರೆಗೆ ಬರಲಿದೆ.
ದೇವರಾಜ್ ಕುಮಾರ್ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ವೀನಸ್ ಮೂರ್ತಿ ಅವರ ಛಾಯಾಗ್ರಹಣವಿದೆ. ಮನ್ವರ್ಷಿ ನವಲಗುಂದ ಸಂಭಾಷಣೆ ಹಾಗೂ ಹಾಡುಗಳನ್ನು ಬರೆದಿದ್ದಾರೆ. ವಿಕ್ರಮ್ ಸೆಲ್ವ ಸಂಗೀತ ನಿರ್ದೇಶನ, ಚಂದ್ರು ಬಂಡೆ ಸಾಹಸ ನಿರ್ದೇಶನ ಹಾಗೂ ಧನಂಜಯ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ವಿಜಯ್ ಅವರ ಸಂಕಲನವಿದೆ.
ಇದನ್ನೂ ಓದಿ: ದೊಡ್ಡದಾಗಿ ಬೆಳೆದಿದ್ದು ಕಟ್ ಮಾಡುವುದು ಅನಿವಾರ್ಯ… ಅಮಿತಾಭ್ ಟ್ವೀಟರ್ನಲ್ಲಿ ನಿಗೂಢ ಚಿಹ್ನೆ ‘!!!!! ?????’
ನೈಜ ಪ್ರೇಮಕಥೆಯನ್ನು ಆಧರಿಸಿದ ಈ ಚಿತ್ರದ ನಾಯಕನಾಗಿ ದೇವರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ. ಸಮೃದ್ಧಿ ಈ ಚಿತ್ರದ ನಾಯಕಿ. ಜಿಮ್ ರವಿ, ಶೋಭ್ ರಾಜ್, ಶಿವರಾಂ, ತಬಲಾ ನಾಣಿ, ಕಡ್ಡಿಪುಡಿ ಚಂದ್ರು, ಕಾಕ್ರೋಜ್ ಸುಧೀ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.