ಸಿನಿವಾಣಿ

74ನೇ ಕಾನ್ ಚಿತ್ರೋತ್ಸವದ ಮಾರುಕಟ್ಟೆ ವಿಭಾಗದಲ್ಲಿ 'ದೇವರ ಕನಸು' ಪ್ರದರ್ಶನ

ಬೆಂಗಳೂರು: ಮಿಲೇನಿಯಮ್ ಪ್ರೊಡಕ್ಷನ್ಸ್ ಸಂಸ್ಥೆಯಡಿ ನಿರ್ಮಾಣವಾಗಿರುವ 'ದೇವರ ಕನಸು' ಚಿತ್ರವು ಪ್ರತಿಷ್ಠಿತ 74ನೇ ಕಾನ್ ಚಿತ್ರೋತ್ಸವದ ಮಾರುಕಟ್ಟೆ ವಿಭಾಗವಾದ ಮಾರ್ಷ್ ಡು ಫಿಲಂನಲ್ಲಿ ಪ್ರದರ್ಶನ ಕಂಡಿದೆ. ಈ ಚಿತ್ರವನ್ನು ಸುರೇಶ್ ಲಕ್ಕೂರ್ ನಿರ್ದೇಶನ ಮಾಡಿದ್ದಾರೆ.

ಸಾಮಾಜಿಕ ಸಂದೇಶ ಸಾರುವ ಈ ಚಿತ್ರವು 12 ವರ್ಷದ ಬಾಲಕನೊಬ್ಬನ ಸುತ್ತ ಸುತ್ತುತ್ತದೆ. ಸ್ವಂತ ಸೈಕಲ್​ ಖರೀದಿಸಿ, ಊರ ಸೈಕಲ್ ರೇಸ್​ನಲ್ಲಿ ಗೆಲುವು ಸಾಧಿಸುವುದು ಆತನ ಕನಸು. ಈ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಆ ಹುಡುಗ ಏನೆಲ್ಲ ಮಾಡುತ್ತಾನೆ ಎಂಬುದೇ ಈ 'ದೇವರ ಕನಸು' ಚಿತ್ರದ ಕಥೆ.

ಈ ಚಿತ್ರೋತ್ಸವದಲ್ಲಿ ಭಾಗವಹಿಸಲು ಚಿತ್ರತಂಡಕ್ಕೆ ಅವಕಾಶವಿತ್ತಾದರೂ, ಕರೊನಾ ಎರಡನೆಯ ಅಲೆಯ ಹಿನ್ನೆಲೆಯಲ್ಲಿ ವಿಮಾನಪ್ರಯಾಣ ರದ್ದು ಮಾಡಿದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ. ಮಾರುಕಟ್ಟೆ ವಿಭಾಗದ ಚಿತ್ರಗಳು ಆನ್ಲೈನ್ ಮೂಲಕ ಪ್ರದರ್ಶನ ಕಾಣಲಿದ್ದು, ಈ ಚಿತ್ರ ಸಹ ಆನ್​ಲೈನ್​ನಲ್ಲಿ ಪ್ರದರ್ಶನ ಕಂಡಿದೆ.

ಈ ಚಿತ್ರದ ವಿಶೇಷತೆಯೆಂದರೆ, ಪ್ಯಾನ್ ಇಂಡಿಯಾ ತಂತ್ರಜ್ಞರು ಕೆಲಸ ಮಾಡಿರುವುದು. ಪಶ್ಚಿಮ ಬಂಗಾಳ ಮೂಲದ ರತ್ನಜಿತ್ ರಾಯ್ ಛಾಯಾಗ್ರಹಣ, ಅನಿರ್ಬನ್ ಗಂಗೂಲಿ ಸೌಂಡ್ ಡಿಸೈನಿಂಗ್, ಜಿಸ್ನು ಸೇನ್​ ಸಂಕಲನ ಮಾಡಿದ್ದಾರೆ. ಅದೇ ರೀತಿ ಚೆನ್ನೈ ಮೂಲದ ಸುಂದರ್ ಆರ್ ಸಂಗೀತ ಸಂಯೋಜಿಸಿದ್ದಾರೆ. ಕೇರಳ ಮೂಲದ ಜಿಷಾ ಮ್ಯಾಥ್ಯು ವಸ್ತ್ರ ವಿನ್ಯಾಸ ಮಾಡಿದ್ದು, ಮನೋಜ್ ಅಂಗಮಾಲಿ ಮೇಕಪ್ ಜವಾಬ್ದಾರಿ ನಿಭಾಯಿಸಿದ್ದಾರೆ. ಕರ್ನಾಟಕದ ಲಿಂಗರಾಜ್ ಇತಿಹಾಸ್ ಸಂಭಾಷಣೆ ಮತ್ತು ಸಾಹಿತ್ಯ ಬರೆದರೆ, ಚನ್ನಬಸವ ಪ್ರೊಡಕ್ಷನ್ ಡಿಸೈನರ್ ಆಗಿ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಈ ಸಿನಿಮಾಕ್ಕೆ ಸುನೀಲ್ ರಾಮ್ ಕಥೆ ಬರೆದಿದ್ದಾರೆ.

ಈ ಮಕ್ಕಳ ಚಿತ್ರವನ್ನು ಸುರೇಶ್​ ಲಕ್ಕೂರು, ಚಿಂತಾಮಣಿಯ ಬಳಿಯ ಹಿರೇಪಳ್ಳಿ. ಕನಂಪಲ್ಲಿ, ಕೈವಾರ ಸುತ್ತಮುತ್ತ ಚಿತ್ರೀಕರಿಸಿದ್ದಾರೆ. ದೀಪಕ್, ಅಮೂಲ್ಯ, ಯುವರಾಜ್ ಕಿಣಿ, ಆರುಷಿ ವೇದಿಕಾ, ಮಣಿ, ರೂಪಾ, ವಿಜಯ್ ರಾಕೇಶ್ ಮುಂತಾದವರು ನಟಿಸಿರುವ ಈ ಚಿತ್ರವನ್ನು ಸಿ ಜಯಕುಮಾರ್​ ಮತ್ತು ಸಿ ಶೇಖರ್​ ನಿರ್ಮಿಸಿದ್ದಾರೆ.