ಸಿನಿವಾಣಿ

ನೀವೇನಾದ್ರೂ ಈ ಲಿಂಕ್​ ಶೇರ್ ಮಾಡಿದ್ದರೆ ನಿಮಗೆ ವಾಟ್ಸ್​ಆ್ಯಪ್​ ಸೇವೆಯೇ ಸ್ಥಗಿತಗೊಂಡೀತು!; ಕ್ರಮಕೈಗೊಳ್ಳಲು ಸೂಚನೆ ಕೊಟ್ಟ ಹೈಕೋರ್ಟ್​

ಮುಂಬೈ: ಇವತ್ತು ಸಹೋದರರ ದಿನ. ಹಾಗಂತ ಯುವರ್​ ಮೋಸ್ಟ್ ವಾಂಟೆಡ್​ ಭಾಯ್​ಗಳಿಗೆ ಅರ್ಥಾತ್ ನಿಮ್ಮ ನೆಚ್ಚಿನ ಅಣ್ಣಂದಿರಿಗೆ ವಾಟ್ಸ್​ಆ್ಯಪ್​ ಮುಂತಾದವುಗಳ ಮೂಲಕ ಈ ಲಿಂಕ್​ ಶೇರ್ ಮಾಡಿಕೊಳ್ಳಲು ಮುಂದಾಗಬೇಡಿ. ಹೌದು.. 'ಯುವರ್ ಮೋಸ್ಟ್​ ವಾಂಟೆಡ್​ ಭಾಯ್​' ಎಂಬ ಟ್ಯಾಗ್​ಲೈನ್​ ಇರುವ ಸಲ್ಮಾನ್​ ಖಾನ್​ ಅಭಿನಯದ 'ರಾಧೆ' ಸಿನಿಮಾದ ಪೈರಸಿ ಕಾಪಿ ಅಂದರೆ ನಕಲು ಪ್ರತಿಯನ್ನೇನಾದರೂ ಹಂಚಿಕೊಂಡರೆ ನಿಮ್ಮ ವಾಟ್ಸ್​ಆ್ಯಪ್​ ಸಂವಹನಕ್ಕೇ ಕುತ್ತು ಬಂದೀತು.

ಮೇ 13ರಂದು ಜೀ-5 ಮೂಲಕ ಒಟಿಟಿಯಲ್ಲಿ ಬಿಡುಗಡೆ ಆಗಿರುವ 'ರಾಧೆ' ಸಿನಿಮಾ ಪೈರಸಿ ಆಗಿ ಎಲ್ಲ ಕಡೆ ಹಂಚಿಕೆ ಆಗುತ್ತಿರುವುದರ ವಿರುದ್ಧ ಜೀ ಕಂಪನಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಇದೀಗ ಕಕ್ಷಿದಾರರ ವಾದವನ್ನು ಆಲಿಸಿರುವ ಹೈಕೋರ್ಟ್, ರಾಧೆ ಚಿತ್ರದ ಪೈರಸಿ ಲಿಂಕ್ ಶೇರ್ ಮಾಡಿಕೊಂಡವರ ನಂಬರ್​ಗೆ ಸೇವೆ ಸ್ಥಗಿತಗೊಳಿಸುವಂತೆ ವಾಟ್ಸ್​ಆ್ಯಪ್​ಗೆ ಸೂಚನೆ ನೀಡಿದೆ.

ಮಾತ್ರವಲ್ಲ, ದೇಶದ ಪ್ರಮುಖ ದೂರಸಂಪರ್ಕ ಕಂಪನಿಗಳಾದ ಜಿಯೋ, ಏರ್​​ಟೆಲ್​, ವೊಡಾಫೋನ್​ಗೂ ಸೂಚನೆ ಕೊಟ್ಟಿರುವ ಹೈಕೋರ್ಟ್​, ರಾಧೆ ಸಿನಿಮಾದ ವಿರುದ್ಧ ಕಾನೂನುಬಾಹಿರವಾಗಿ ನಡೆದುಕೊಂಡವರ ಮಾಹಿತಿ ಜೀ ಕಂಪನಿಗೆ ನೀಡುವಂತೆ ಹೇಳಿದೆ. ಈ ಮಾಹಿತಿ ಸಿಗುತ್ತದೆ ಜೀ ಕಂಪನಿ ಮುಂದಿನ ಕಾನೂನುಕ್ರಮಕ್ಕೆ ಮುಂದಾಗಲಿದೆ.