ಸಿನಿವಾಣಿ

ಹೊಸ ಚಿತ್ರದಲ್ಲಿ ದೀಪಿಕಾ ಪಾತ್ರ ಏನಿರಬಹುದು ಗೆಸ್​ ಮಾಡಿ ...

ಮುಂಬೈ: ಶಕುನ್​ ಬಾತ್ರಾ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿರುವ ವಿಷಯ ಗೊತ್ತಿರಬಹುದು. ಈ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಪ್ರಾರಂಭವಾಗಿತ್ತು. ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಮುಗಿದಿರುವ ಈ ಚಿತ್ರದಲ್ಲಿ ದೀಪಿಕಾ ಅವರ ಪಾತ್ರ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದ್ದು. ಈ ಪ್ರಶ್ನೆಗೆ ಈಗ ಕೊನೆಗೂ ಉತ್ತರ ಸಿಕ್ಕಿದೆ.

ಮೂಲಗಳ ಪ್ರಕಾರ, ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ಫಿಟ್ನೆಸ್​ ಸಲಹೆಗಾರರಾಗಿ ಅಭಿನಯಿಸುತ್ತಿದ್ದಾರಂತೆ. ದೀಪಿಕಾ ಫಿಟ್​ನೆಸ್​ ಬಗ್ಗೆ ಹೆಚ್ಚು ಗಮನಹರಿಸುವುದು, ಇನ್​ಸ್ಟಾಗ್ರಾಂನಲ್ಲಿ ಅವರು ಆಗಾಗ ಶೇರ್​ ಮಾಡಿಕೊಳ್ಳುವ ವಿಡಿಯೋಗಳೇ ಹೇಳುತ್ತವೆ. ಇಲ್ಲಿಯವರೆಗೂ ವಿಡಿಯೋಗಳ ಬಗ್ಗೆ ಫಿಟ್ನೆಸ್​ ಬಗ್ಗೆ ಸಲಹೆಗಳನ್ನು ನೀಡುತ್ತಿದ್ದ ದೀಪಿಕಾ, ಈಗ ಈ ಚಿತ್ರದಲ್ಲಿ ಫಿಟ್ನೆಸ್​ ಸಲಹೆಗಾರರಾಗಿ ಅಭಿನಯಿಸುತ್ತಿರುವುದು ವಿಶೇಷ.

ಈ ಚಿತ್ರದಲ್ಲಿ ದೀಪಿಕಾ ಜತೆಗೆ ಅನನ್ಯ ಪಾಂಡೆ, ಸಿದ್ಧಾಂತ್​ ಚತುರ್ವೇದಿ, ಧೈರ್ಯ ಕರ್ವ ಮುಂತಾದವರು ಅಭಿನಯಿಸುತ್ತಿದ್ದು, ಈ ಚಿತ್ರದಲ್ಲಿ ದೀಪಿಕಾ ಮತ್ತು ಅನನ್ಯ ಅಕ್ಕ-ತಂಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇನ್ನು, ದೀಪಿಕಾಗೆ ಸಿದ್ಧಾಂತ್​ ಜೋಡಿಯಾದರೆ, ಅನನ್ಯಗೆ ಧೈರ್ಯ ಜೋಡಿಯಂತೆ.

ಹೆಸರು ಫೈನಲ್​ ಆಗದಿರುವ ಈ ಚಿತ್ರವನ್ನು ಧರ್ಮ ಪ್ರೊಡಕ್ಷನ್ಸ್​ನಡಿ ಕರಣ್​ ಜೋಹರ್​ ನಿರ್ಮಿಸುತ್ತಿದ್ದು, ಲಾಕ್​ಡೌನ್​ ಮುಗಿದ ನಂತರ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಲಿದೆ.