ಸಿನಿವಾಣಿ

ಡಿಸೆಂಬರ್ ಧಮಾಕಾ!; ಕೊನೆಯ ವಾರ ಲಕ್ಕಿ ಎಂಬ ನಂಬಿಕೆ ಚಿತ್ರರಂಗದ ಹಲವರಿಗೆ..

ಚಿತ್ರ ಬಿಡುಗಡೆಗೆ ಡಿಸೆಂಬರ್ ಕೊನೆಯ ವಾರ ಲಕ್ಕಿ ಎಂಬ ನಂಬಿಕೆ ಚಿತ್ರರಂಗದ ಹಲವರಲ್ಲಿದೆ. ಜತೆಗೆ, ವರ್ಷಾಂತ್ಯವಾದ್ದರಿಂದ ಜನ ರಜೆಯ ಮೂಡ್​ನಲ್ಲಿರುತ್ತಾರೆ, ಚಿತ್ರ ನೋಡುತ್ತಾರೆಂದು ಕೊನೆಯ ವಾರದಲ್ಲಿ ಚಿತ್ರ ಬಿಡುಗಡೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಈ ಬಾರಿಯ ವರ್ಷಾಂತ್ಯಕ್ಕೆ ಪರಭಾಷೆಯ ಒಂದಿಷ್ಟು ಚಿತ್ರಗಳ ಜತೆಗೆ ಕನ್ನಡದ್ದೇ ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿವೆ.

ಯೋಗಿಯ 9ನೇ ದಿಕ್ಕು

ಲೂಸ್ ಮಾದ ಯೋಗಿ ನಟನೆಯ ‘ಒಂಬತ್ತನೇ ದಿಕ್ಕು’ ಚಿತ್ರ ಹಲವು ಕಾರಣಗಳಿಂದ ವಿಶೇಷವೆನಿಸಿದೆ. ಈಗಾಗಲೇ ಹೊರ ಬಂದಿರುವ ಟೀಸರ್, ಸಿನಿಮಾದಲ್ಲೇನಿದೆ ಎಂಬುದನ್ನು ತೋರಿಸಿದೆ. ದಯಾಳ್ ಪದ್ಮನಾಭನ್ ನಿರ್ದೇಶನ ಮತ್ತು ನಿರ್ವಣದ ಈ ಚಿತ್ರದಲ್ಲಿ ಯೋಗಿಗೆ ಅದಿತಿ ಪ್ರಭುದೇವ ನಾಯಕಿಯಾಗಿ ದ್ದಾರೆ. ಕ್ರೖೆಂ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ, ರಾಕೇಶ್ ಛಾಯಾಗ್ರಹಣ, ಪ್ರೀತಿ ಮೋಹನ್ ಸಂಕಲನವಿದೆ. ಗುರು ದೇಶಪಾಂಡೆ ನಿರ್ವಣದಲ್ಲಿ ಸಾಥ್ ನೀಡಿದ್ದಾರೆ.

ಅರ್ಜುನ್ ಗೌಡ ಆದ ಪ್ರಜ್ವಲ್

ರಾಮು ಫಿಲಂಸ್ ಬ್ಯಾನರ್​ನಲ್ಲಿ ಸಿದ್ಧವಾಗಿರುವ ಪ್ರಜ್ವಲ್ ದೇವರಾಜ್ ನಟನೆಯ ‘ಅರ್ಜುನ್ ಗೌಡ’ ಚಿತ್ರ ಕಳೆದ ವರ್ಷವೇ ತೆರೆಗೆ ಬರಬೇಕಿತ್ತು. ಆದರೆ ಕೋವಿಡ್ ಕಾರಣ ಮತ್ತು ರಾಮು ಅವರ ನಿಧನದಿಂದಾಗಿ ಬಿಡುಗಡೆಯನ್ನೇ ಚಿತ್ರತಂಡ ಮುಂದೂಡಿತ್ತು. ಇದೀಗ ಅದೆಲ್ಲವನ್ನು ದಾಟಿ ರಿಲೀಸ್ ಹಂತಕ್ಕೆ ಬಂದಿದೆ. 31ರಂದೇ ಈ ಚಿತ್ರವೂ ತೆರೆಗೆ ಬರುತ್ತಿದ್ದು, ಪ್ರಜ್ವಲ್​ಗೆ ಜೋಡಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದಾರೆ. ಶಂಕರ್ ನಿರ್ದೇಶನದ ಈ ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣ, ಧರ್ಮ ವಿಶ್ ಸಂಗೀತ, ಅರ್ಜುನ್ ಕಿಟ್ಟು ಸಂಕಲನ ಮಾಡಿದ್ದಾರೆ.

ಅಜೇಯ್-ರಚಿತಾ ಲವ್ ಯೂ ರಚ್ಚು

ಅಜೇಯ್ ರಾವ್ ಮತ್ತು ರಚಿತಾ ರಾಮ್ ಕಾಂಬಿನೇಷನ್​ನ ಮೊದಲ ಸಿನಿಮಾ ‘ಲವ್ ಯೂ ರಚ್ಚು’ ಇದೇ ತಿಂಗಳ 31ಕ್ಕೆ ತೆರೆಗೆ ಬರಲಿದೆ. ರೊಮ್ಯಾಂಟಿಕ್ ಲವ್​ಸ್ಟೋರಿ ಹಿನ್ನೆಲೆಯ ಈ ಚಿತ್ರಕ್ಕೆ ಶಂಕರ್ ಎಸ್. ರಾಜ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಮೂರು ಹಾಡಿನ ಮೂಲಕವೇ ಒಂದಷ್ಟು ಸದ್ದು ಮಾಡಿರುವ ಲವ್ ಯೂ ರಚ್ಚು ಸಿನಿಮಾದ ಟ್ರೇಲರ್ ಡಿಸೆಂಬರ್ 16ಕ್ಕೆ ಬಿಡುಗಡೆ ಆಗಲಿದೆ. ಈ ಚಿತ್ರವನ್ನು ಗುರು ದೇಶಪಾಂಡೆ ನಿರ್ವಿುಸಿದ್ದಾರೆ.

ದಿಗಂತ್ ಹುಟ್ಟುಹಬ್ಬ

ಇತ್ತ ನಟ ದಿಗಂತ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಅಂದರೆ, ನಾಗರಾಜ್ ಬೇತೂರ್ ನಿರ್ದೇಶನ ಮಾಡಿರುವ ಹುಟ್ಟು ಹಬ್ಬದ ಶುಭಾಶಯಗಳು ಚಿತ್ರವೂ ವರ್ಷಾಂತ್ಯಕ್ಕೆ ಬಿಡುಗಡೆ ಆಗುತ್ತಿದೆ. ಪೋಸ್ಟರ್ ಮೂಲಕವೇ ಕುತೂಹಲ ಹೆಚ್ಚಿಸಿದ್ದ ಈ ಸಿನಿಮಾ, ಇದೀಗ ಚಿತ್ರಮಂದಿರದತ್ತ ದಾಪುಗಾಲಿಡಲು ಸಿದ್ಧತೆ ನಡೆಸಿದೆ. ದಿಗಂತ್​ಗೆ ಕವಿತಾ ಗೌಡ ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಟಿ. ಆರ್ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯ, ಶ್ರೀಧರ್ ವಿ ಸಂಭ್ರಮ್ ಸಂಗೀತ. ಅಭಿಲಾಷ್ ಛಾಯಾಗ್ರಹಣವಿದೆ.