ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ರಾಬರ್ಟ್ ಚಿತ್ರದ ಟ್ರೇಲರ್ ಅವರ ಜನ್ಮದಿನದ ಪ್ರಯುಕ್ತ ಮಂಗಳವಾರ ಬಿಡುಗಡೆಯಾಗಿದೆ. ಈಗಾಗಲೇ ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ದುಪ್ಪಟ್ಟುಗೊಳಿಸಿದ್ದ ತಂಡ ಇದೀಗ ಟ್ರೇಲರ್ ಬಿಡುಗಡೆ ಮಾಡಿ ಅಭಿಮಾನಿಗಳ ಎದೆಬಡಿತವನ್ನು ಮತ್ತಷ್ಟು ಹೆಚ್ಚಿಸಿದೆ.
ಸಿನಿಮಾದಲ್ಲಿ ಏನೆಲ್ಲ ಇರಲಿದೆ ಎಂಬ ಬಗ್ಗೆ ಈ ಹಿಂದಿನ ಪೋಸ್ಟ್ಗಳಲ್ಲಿ ಎಲ್ಲಿಯೂ ಗುಟ್ಟು ಬಿಟ್ಟುಕೊಡದ ರಾಬರ್ಟ್ ತಂಡ, ಟ್ರೇಲರ್ನಲ್ಲಿ ಪಾತ್ರಗಳ ಪರಿಚಯವಾಗಿದೆ. ಡೈನಾಮಿಕ್ ಹೀರೋ ದೇವರಾಜ್, ನಾಯಕಿ ಆಶಾ ಭಟ್, ಖಳನಾಯಕ ಜಗಪತಿ ಬಾಬು, ವಿನೋದ್ ಪ್ರಭಾಕರ್, ರವಿ ಕಿಶನ್, ರವಿಶಂಕರ್ ಸೇರಿ ಹಲವರ ಪಾತ್ರ ರಿವೀಲ್ ಆಗಿದೆ. ಮಾರ್ಚ್ 11ಕ್ಕೆ ಕನ್ನಡದ ಜತೆಗೆ ತೆಲುಗು ಭಾಷೆಯಲ್ಲಿಯ ರಾಬರ್ಟ್ ಸಿನಿಮಾ ಬಿಡುಗಡೆ ಆಗಲಿದ್ದು, ಆ ಭಾಗದಿಂದಲೂ ಚಿತ್ರಕ್ಕೆ ಒಳ್ಳೇ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಬಿಡುಗಡೆ ಆಗಿರುವ ತೆಲುಗು ಟ್ರೇಲರ್ಗೆ ಮೆಚ್ಚುಗೆ ಸಿಕ್ಕಿದೆ.
ಜನ್ಮದಿನದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆಯೇ ಈ ವರ್ಷದ ಬರ್ತ್ಡೇ ಆಚರಣೆ ಇರುವುದಿಲ್ಲ. ದಯಮಾಡಿ ಮನೆ ಬಳಿ ಯಾರೂ ಬರಬೇಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ದರ್ಶನ್ ಹೇಳಿಕೊಂಡಿದ್ದರು. ಅದರಂತೆ ಮನೆ ಬಾಗಿಲು ಬಳಿ ಬೋರ್ಡ್ ಸಹ ಹಾಕಲಾಗಿದ್ದು, ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಆದರೆ, ಈ ವಿಚಾರ ಗೊತ್ತಿಲ್ಲದ ಹಲವು ಅಭಿಮಾನಿಗಳು ತಡರಾತ್ರಿಯಿಂದಲೇ ದರ್ಶನ್ ಮನೆ ಬಳಿ ಜಮಾವಣೆ ಆಗಿದ್ದರು.
ಇನ್ನು ಇತ್ತ ಚಂದನವನದ ಸಿನಿಮಾಮಂದಿ ದರ್ಶನ್ಗೆ ಸೋಷಿಯಲ್ ಮೀಡಿಯಾ ಮೂಲಕ ಜನ್ಮದಿನದ ಶುಭಾಶಯ ಕೋರಿದ್ದಾರೆ. ಅಭಿಮಾನಿ ವಲಯದಲ್ಲಿ ದೊಡ್ಡ ಹಬ್ಬದಂತೆ ನೆಚ್ಚಿನ ನಟನ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಸಿಡಿಪಿ ಬಿಡುಗಡೆ ಮಾಡಿ, ಸಂಭ್ರಮಿಸುತ್ತಿದ್ದಾರೆ.