ಸಿನಿವಾಣಿ

ಒಬ್ಬ ಮೂರ್ಖ...ರಮ್ಯಾ-ದರ್ಶನ್​ ಫ್ಯಾನ್ಸ್​ ವಾಗ್ವಾದದ ಬೆನ್ನಲ್ಲೇ ವಿಜಯಲಕ್ಷ್ಮೀ ಇನ್​ಸ್ಟಾ ಸ್ಟೋರಿ ವೈರಲ್! Actress Ramya

Actress Ramya : ಮೋಹಕ ತಾರೆ​ ರಮ್ಯಾ ಹಾಗೂ ನಟ ದರ್ಶನ್​ ಅಭಿಮಾನಿಗಳ ನಡುವಿನ ವಾಗ್ವಾದದ ಮಧ್ಯೆ ದರ್ಶನ್​ ಪತ್ನಿ ವಿಜಯಲಕ್ಷ್ಮೀ ಅವರು ಎಂಟ್ರಿಯಾಗಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯ ಮೂಲಕ "ಮೌನ" ಎಂಬ ಪದವನ್ನು ಉಲ್ಲೇಖಿಸಿ, ಪರೋಕ್ಷವಾಗಿ ರಮ್ಯಾ ಅವರಿಗೆ ಟಾಂಗ್​ ಕೊಟ್ಟಿದ್ದಾರೆ.

ಕೆಟ್ಟದಾಗಿ ಕಾಮೆಂಟ್​ ಮಾಡಿದ ದರ್ಶನ್​ ಅಭಿಮಾನಿಗಳ ವಿರುದ್ಧ ರಮ್ಯಾ ಅವರು ದೂರು ದಾಖಲಿಸಲು ಮುಂದಾಗಿದ್ದಾರೆ. ಇದರ ನಡುವೆ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಕೋರ್ಟ್​ನಲ್ಲಿರುವಾಗ ಅದರ ಬಗ್ಗೆ ಪ್ರಸ್ತಾಪ ಮಾಡಿದ ಹಿನ್ನೆಲೆಯಲ್ಲಿ ರಮ್ಯಾ ವಿರುದ್ಧ ವಿಜಯಲಕ್ಷ್ಮೀ ದೂರು ದಾಖಲಿಸಲು ಮುಂದಾಗಿದ್ದಾರೆ ಎಂದು ವರದಿಯೂ ಬಂದಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತವಾಗಿ ಯಾವುದೇ ಹೇಳಿಕೆಗಳು ಹೊರಬಂದಿಲ್ಲ. ಆದರೆ, ಆಪ್ತ ಮೂಲಗಳ ಪ್ರಕಾರ ದೂರು ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ದರ್ಶನ್​ ಫ್ಯಾನ್ಸ್​ ಮತ್ತು ರಮ್ಯಾ ನಡುವೆ ವಾಗ್ವಾದ ನಡೆಯುತ್ತಿರುವ ಬೆನ್ನಲ್ಲೇ ವಿಜಯಲಕ್ಷ್ಮೀ ಅವರ ಇನ್​ಸ್ಟಾಗ್ರಾಂ ಸ್ಟೋರಿ ಎಲ್ಲರ ಗಮನ ಸೆಳೆದಿದೆ. ಒಬ್ಬ ಮೂರ್ಖನನ್ನು ತನ್ನ ಮಾತಿನಿಂದಲೇ ಗುರುತಿಸಬಹುದು ಅದೇ ರೀತಿ ಓರ್ವ ಬುದ್ಧಿವಂತನನ್ನು ಆತನ ಮೌನದಿಂದಲೇ ಗುರುತಿಸಬಹುದು ಎಂದು ಬರೆದುಕೊಂಡಿದ್ದಾರೆ. ಈ ಬೆಳವಣಿಗೆ ನಡುವೆ ಈ ಪೋಸ್ಟ್​ ಮಾಡಿರುವುದರಿಂದ ಪರೋಕ್ಷವಾಗಿ ರಮ್ಯಾ ಅವರಿಗೆ ವಿಜಯಲಕ್ಷ್ಮೀ ಟಾಂಗ್​ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಏನಿದು ವಿವಾದ?

ನಿನ್ನೆಯಷ್ಟೇ ರಮ್ಯಾ ಅವರು ಎಲ್ಲ ಡಿ ಬಾಸ್​ (ದರ್ಶನ್​) ಅಭಿಮಾನಿಗಳೇ ನನ್ನ ಇನ್​ಸ್ಟಾಗ್ರಾಂ ಖಾತೆಗೆ ಸ್ವಾಗತ. ರೇಣುಕಾಸ್ವಾಮಿ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಎನ್ನುವುದಕ್ಕೆ ನಿಮ್ಮ ಕಾಮೆಂಟ್​ಗಳೇ ಸಾಕ್ಷಿ ಎಂದು ಇನ್​ಸ್ಟಾಗ್ರಾಂನಲ್ಲಿ ಸ್ಟೋರಿ ಪೋಸ್ಟ್​ ಮಾಡಿದ್ದರು. ರಮ್ಯಾ ಅವರು ಆ ರೀತಿ ಸ್ಟೋರಿ ಪೋಸ್ಟ್​ ಮಾಡುವುದಕ್ಕೆ ಕಾರಣ ಏನೆಂದರೆ, ಅನೇಕ ದರ್ಶನ್​ ಅಭಿಮಾನಿಗಳು ರಮ್ಯಾ ಅವರಿಗೆ ಇನ್​ಸ್ಟಾಗ್ರಾಂನಲ್ಲಿ ಕೆಟ್ಟದಾಗಿ ಮೆಸೇಜ್​ ಮಾಡುತ್ತಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ದರ್ಶನ್​ ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್​ ಮಾಡಿದ ಸ್ಕ್ರೀನ್​ಶಾಟ್​ಗಳನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ರಮ್ಯಾ ಅವರು ಶೇರ್​ ಮಾಡಿಕೊಂಡರು. ದರ್ಶನ್​ ಅಭಿಮಾನಿಗಳು ಎಷ್ಟು ಕೆಟ್ಟದಾಗಿ ಕಾಮೆಂಟ್​ ಮಾಡಿದ್ದರು ಅಂದರೆ, ಅದನ್ನು ಊಹಿಸಲು ಸಾಧ್ಯವಿಲ್ಲ. ಇದರಿಂದ ಆಕ್ರೋಶಗೊಂಡಿರುವ ರಮ್ಯಾ, ಇದೀಗ ದೂರು ನೀಡಲು ಮುಂದಾಗಿದ್ದಾರೆ. ತಮ್ಮ ವಕೀಲರೊಂದಿಗೆ ಚರ್ಚೆ ಮಾಡಿ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡುವುದಾಗಿ ನಟಿ ರಮ್ಯಾ ಅವರು ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್​ ಕೂಡ ಪ್ರತಿಕ್ರಿಯೆ ನೀಡಿದ್ದು, ರಮ್ಯಾ ಅವರು ದೂರು ನೀಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಅಲ್ಲದೆ, ಸುಮೊಟೋ ಪ್ರಕರಣ ದಾಖಲಿಸಲು ಅವಕಾಶವಿದ್ದರೆ ಪೊಲೀಸರು ಪರಿಶೀಲನೆ ನಡೆಸುತ್ತಾರೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ಬೆಳವಣಿಗೆಯಿಂದ ರಮ್ಯಾ ಅವರಿಗೆ ಕೆಟ್ಟದಾಗಿ ಕಾಮೆಂಟ್​ ಮಾಡಿದ ದರ್ಶನ್​ ಅಭಿಮಾನಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ರಮ್ಯಾ ಅವರು ಹೇಳಿದಂತೆ ದೂರು ದಾಖಲಿಸಿದರೆ, ಕಾಮೆಂಟ್​ ಮಾಡಿದ ಕಡಿಗೇಡಿಗಳನ್ನು ಬಂಧಿಸುವ ಸಾಧ್ಯತೆ ಇದೆ. ಇಂತಹ ಕಾಮೆಂಟ್​ ಮಾಡುವ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಬೇಕೆಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ.

ನ್ಯಾಯದ ಭರವಸೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​ ಹಾಗೂ ಗೆಳತಿ ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳಿಗೆ ನೀಡಿರುವ ಜಾಮೀನು ಪ್ರಶ್ನಿಸಿ (ಜಾಮೀನು ರದ್ದು ಕೋರಿ) ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಜುಲೈ 24ರಂದು ಎರಡೂ ಕಡೆಯ ವಾದನ್ನು ಆಲಿಸಿ, ತೀರ್ಪು ಕಾಯ್ದಿರಿಸಿದೆ. ಗಮನಾರ್ಹ ಸಂಗತಿ ಏನೆಂದರೆ, ದರ್ಶನ್​ಗೆ ಜಾಮೀನು ನೀಡಿರುವ ಹೈಕೋರ್ಟ್​ ಕ್ರಮವನ್ನು ಸುಪ್ರೀಂಕೋರ್ಟ್​ ಟೀಕಿಸಿದೆ. ಇದರ ಬೆನ್ನಲ್ಲೇ ಸುಪ್ರೀಂಕೋರ್ಟ್​ ಹೇಳಿಕೆಗಳನ್ನು ಉಲ್ಲೇಖಿಸಿ ಲೈವ್​ ಲಾ ಸುದ್ದಿ ಮಾಧ್ಯಮ ಮಾಡಿರುವ ವರದಿಯ ಸ್ಕ್ರೀನ್​ಶಾಟ್​ ಅನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡ ನಟಿ ರಮ್ಯಾ, ಭಾರತದ ಸಾಮಾನ್ಯ ಜನರಿಗೆ ಸುಪ್ರೀಂಕೋರ್ಟ್ ಒಂದು ಆಶಾಕಿರಣ. ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ಬರೆದುಕೊಂಡಿದ್ದರು. ಹೀಗಾಗಿ ದರ್ಶನ್​ ಅಭಿಮಾನಿಗಳು ರಮ್ಯಾ ಅವರ ವಿರುದ್ಧ ಮುಗಿಬಿದ್ದಿದ್ದಾರೆ.

ಸುಪ್ರೀಂಕೋರ್ಟ್​ ಹೇಳಿದ್ದೇನು?

ನಟ ದರ್ಶನ್​ ಹಾಗೂ ಪವಿತ್ರಾ ಗೌಡಗೆ ಜಾಮೀನು ನೀಡಿದ ಕ್ರಮವನ್ನು ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಟೀಕಿಸಿದರು. ಹೈಕೋರ್ಟ್ ಆದೇಶವನ್ನು ನೀಡಿದ ರೀತಿ ತುಂಬಾ ವಿಷಾದವಿದೆ. ಇತರ ಪ್ರಕರಣಗಳಲ್ಲಿಯೂ ಹೈಕೋರ್ಟ್ ಅದೇ ರೀತಿಯ ಆದೇಶವನ್ನು ನಿರ್ದೇಶಿಸುತ್ತದೆಯೇ? ಕೊಲೆ ಪ್ರಕರಣಕ್ಕೆ ಬಂಧನದ ಆಧಾರಗಳನ್ನು ಒದಗಿಸಲಾಗಿಲ್ಲ ಎಂದು ಹೈಕೋರ್ಟ್​ ಹೇಳಿರುವುದು ತೊಂದರೆದಾಯಕವಾಗಿದೆ. ಇದು ಪ್ರಾಥಮಿಕವಾಗಿ, ನ್ಯಾಯಾಂಗ ಅಧಿಕಾರದ ದುರ್ಬಳಕೆಯಾಗಿದೆ. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಅಂತಹ ತಪ್ಪನ್ನು ಮಾಡುವುದು ಸ್ವೀಕಾರಾರ್ಹ ಆದರೆ, ಹೈಕೋರ್ಟ್ ನ್ಯಾಯಮೂರ್ತಿಗಳು ಈ ರೀತಿ ಮಾಡುವುದು ಸರಿಯೇ ಎಂದು ಅಸಮಾಧಾನ ಹೊರಹಾಕಿದರು. ಈ ತೀರ್ಪುನಲ್ಲಿ ಹೈಕೋರ್ಟ್​ ಮಾಡಿದ ತಪ್ಪನ್ನು ನಾವು ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್​ ಒತ್ತಿ ಹೇಳಿತು.

ಅಂದಹಾಗೆ, ಜುಲೈ 24ರಂದು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ.ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠ, ಸರ್ಕಾರ ಹಾಗೂ ದರ್ಶನ ಪರ ವಕೀಲರ ವಾದವನ್ನು ಆಲಿಸಿತು. ಬಳಿಕ ಎರಡೂ ಕಡೆಯ ವಕೀಲರಿಗೆ ಲಿಖಿತ ವಾದಾಂಶವನ್ನು ಸಲ್ಲಿಸಲು ಕೋರ್ಟ್​ ಒಂದು ವಾರಗಳ ಗಡುವು ನೀಡಿದ್ದು, ಆ ಬಳಿಕ ತೀರ್ಪು ಪ್ರಕಟಿಸಲಿದೆ. 3 ಪುಟದೊಳಗೆ ಲಿಖಿತ ವಾದ ಸಲ್ಲಿಸಲು ನ್ಯಾಯಾಲಯ ಹೇಳಿದೆ.

ಸರ್ಕಾರದ ಪರ ಸಿದ್ಧಾರ್ಥ್​ ಲೂತ್ರಾ ಹಾಗೂ ನಟ ದರ್ಶನ್​ ಪರ ಸಿದ್ಧಾರ್ಥ್​ ದವೆ ವಾದ ಮಂಡನೆ ಮಾಡಿದರು. ಸಾಕ್ಷಿಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆ, ದರ್ಶನ್​ ಹಾಗೂ ಪವಿತ್ರಾ ಗೌಡ ನಡುವಿನ ಸಂಬಂಧ ಹಾಗೂ ಕೊಲೆಗೆ ಕಾರಣವೇನು? ಮುಂತಾದ ವಿಚಾರಗಳ ಬಗ್ಗೆ ನ್ಯಾಯಾಲಯ ಪ್ರಶ್ನೆಗಳನ್ನು ಕೇಳಿತು. ಎರಡೂ ಕಡೆಯ ವಕೀಲರು ಪ್ರಬಲವಾಗಿ ವಾದ ಮಂಡನೆ ಮಾಡಿದ್ದು, ವಾದವನ್ನು ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ. ಸುಮಾರು 10 ದಿನಗಳ ಬಳಿಕ ಕೋರ್ಟ್​ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

ಕೊಲೆ ಕೇಸ್​ನ ಆರೋಪಿಗಳಾದ ನಟ ದರ್ಶನ್​, ಪವಿತ್ರಗೌಡ, ಪ್ರದೂಶ್​, ಲಕ್ಷ್ಮಣ್​, ನಾಗರಾಜು ಹಾಗೂ ಅನುಕುಮಾರ್​ ಸೇರಿದಂತೆ 7 ಪ್ರಮುಖ ಆರೋಪಿಗಳಿಗೆ ಕಳೆದ(2024) ಡಿಸೆಂಬರ್​ 13ರಂದು ಕರ್ನಾಟಕ ಹೈಕೋರ್ಟ್​ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರದ ಪರ ನಗರ ಪೊಲೀಸರು ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಸುದೀರ್ಘ ವಾದ-ವಿವಾದ ಪರಿಶೀಲಿಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.

2024ರ ಜೂನ್​ 8ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆಯಾಗಿತ್ತು. ಈ ಹತ್ಯೆಯ ಕೇಸ್​ನಲ್ಲಿ ನಟ ದರ್ಶನ್​ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿತ್ತು. 6 ತಿಂಗಳ ಬಳಿಕ ಪ್ರಕರಣದ ಎಲ್ಲಾ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿತ್ತು.