ಸಿನಿವಾಣಿ

ಮಂಡ್ಯದಲ್ಲಿ ಕಲರ್​ಫುಲ್​ ಕಾಟೇರ ; ಪ್ರಿ-ರಿಲೀಸ್​ ಕಾರ್ಯಕ್ರಮದಲ್ಲಿ ತಾರೆಯರ ಹಾಡು, ಕುಣಿತ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ದರ್ಶನ್ ಅಭಿನಯದ, ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಸಿನಿಮಾ ಇದೇ 29ಕ್ಕೆ ರಿಲೀಸ್ ಆಗುತ್ತಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಚಿತ್ರದ ಎರಡು ಹಾಡುಗಳು, ಟ್ರೇಲರ್ ರಿಲೀಸ್ ಆಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಸಿನಿಮಾ 80ರ ದಶಕದಲ್ಲಿ ನಡೆದ ನೈಜ ಘಟನೆ ಆಧಾರಿತವಾಗಿದ್ದು, ರೈತರ ಸಂಕಷ್ಟ, ಹೋರಾಟಗಳ ಕುರಿತು ಬೆಳಕು ಚೆಲ್ಲಲಿದೆ. ಶನಿವಾರ (ಡಿ.23) ರೈತರ ದಿನಾಚರಣೆಯ ಪ್ರಯುಕ್ತ ಚಿತ್ರತಂಡ ರೈತಗೀತೆಯೊಂದನ್ನು ಮಂಡ್ಯದಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ರಿಲೀಸ್ ಮಾಡಿದೆ.

ದರ್ಶನ್, ‘ಈ ಸಿನಿಮಾಗಾಗಿ ತಾಂತ್ರಿಕ ವರ್ಗದಿಂದ ಹಿಡಿದು ಪ್ರತಿಯೊಬ್ಬರು ಶ್ರಮ ಹಾಕಿದ್ದಾರೆ. ಇದು ಕೇವಲ ಆಡಂಬರದ ಸಿನಿಮಾ ಅಲ್ಲ, ರೈತರು ಧರಿಸುವ ಹಸಿರು ಶಾಲಿಗೆ ಎಷ್ಟು ಶಕ್ತಿ ಇದೆ ಎಂದು ತೋರಿಸುವ ಸಿನಿಮಾ. ರೈತರನ್ನು ಅಯ್ಯೋ ಪಾಪ ಎಂದು ನೋಡುವ ಬದಲು, ಅವರಿಗೆ ಸಿಗಬೇಕಾದ ನ್ಯಾಯವಾದ ಬೆಲೆ ಕೊಟ್ಟರೆ ಸಾಕು. ಎಲ್ಲಿಯವರೆಗೂ ರಂಜಿಸಲು ಸಾಧ್ಯವೋ ಅಲ್ಲಿಯವರೆಗೂ ಒಳ್ಳೆಯ ಸಿನಿಮಾಗಳನ್ನು ಮಾಡುತ್ತೇನೆ’ ಎಂದು ಹೇಳಿಕೊಂಡರು.

ನಾಯಕಿಯಾಗಿ ಡೆಬ್ಯೂ ಮಾಡುತ್ತಿರುವ ಆರಾಧನಾ, ‘ಸಿನಿಮಾದಲ್ಲಿ ನಟಿಸುವ ನನ್ನ ಕನಸನ್ನು ನನಸು ಮಾಡಿದ ರಾಕ್‌ಲೈನ್ ವೆಂಕಟೇಶ್, ದರ್ಶನ್ ಹಾಗೂ ತರುಣ್‌ಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎಲ್ಲರೂ ನನ್ನನ್ನು ಕೈ ಹಿಡಿದು ಗೈಡ್ ಮಾಡಿದ್ದಾರೆ’ ಎಂದರು. ದರ್ಶನ್, ಆರಾಧನಾ ಜತೆಗೆ ಕುಮಾರ್ ಗೋವಿಂದ್, ಬಿರಾದಾರ್, ರವಿಚೇತನ್, ಶೃತಿ, ವನಿತಾ ವಾಸು, ಜಗಪತಿ ಬಾಬು, ರೋಹಿತ್ ಮುಖ್ಯ ತಾರಾಗಣದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ, ಸುಧಾಕರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿರಲಿದೆ.

ತಾರೆಯರ ಸಾಥ್:
‘ಕಾಟೇರ’ ಪ್ರಿ-ರಿಲೀಸ್‌ನಲ್ಲಿ ಹಲವು ಮನರಂಜನಾ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. ಗಾಯಕಿ ಮಂಗ್ಲಿ ಹಾಡಿನ ಮೂಲಕ ರಂಜಿಸಿದರೆ, ಅಭಿಷೇಕ್ ಅಂಬರೀಷ್, ಮೇಘಾ ಶೆಟ್ಟಿ, ಬೃಂದಾ ಆಚಾರ್ಯ, ನಿಮಿಕಾ ರತ್ನಾಕರ್, ಆರಾಧನಾ ದರ್ಶನ್ ಹಾಡುಗಳಿಗೆ ಡಾನ್ಸ್ ಮಾಡಿ ಮನರಂಜಿಸಿದರು. ಜತೆಗೆ ಮಾಲಾಶ್ರೀ, ಚಿಕ್ಕಣ್ಣ, ಝೈದ್ ಖಾನ್, ಧನ್ವೀರ್, ವಿನೋದ್ ಪ್ರಭಾಕರ್, ಶೃತಿ ಸೇರಿ ಹಲವು ತಾರೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.