ಸಿನಿವಾಣಿ

ಮದ್ವೆಗೆ ಹುಡ್ಗಿನೇ ಸಿಗ್ತಿಲ್ಲ, ನಾನಿನ್ನೂ 'ಮಿ.ಬ್ಯಾಚುಲರ್'​ ಅಂತಿದಾರೆ ಡಾರ್ಲಿಂಗ್​ ಕೃಷ್ಣ!

ಬೆಂಗಳೂರು: ಲವ್​ ಮಾಕ್​ಟೇಲ್​ ಸಿನಿಮಾದ ಜೋಡಿ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್​ಗೆ ಮದುವೆ ಫಿಕ್ಸ್​ ಆಗಿರುವ ವಿಚಾರ ನಿಮಗೆಲ್ಲರಿಗೂ ಗೊತ್ತಿರುವುದೇ. ಪ್ರೇಮಿಗಳ ದಿನದಂದೇ ಈ ಜೋಡಿ ಹಸೆಮಣೆ ಏರಲು ಸಿದ್ಧವಾಗಿದೆ. ಇನ್ನೇನು ಮದುವೆಗೆ ಒಂದೂವರೆ ತಿಂಗಳಿರುವಾಗಲೇ ಡಾರ್ಲಿಂಗ್​ ಕೃಷ್ಣ 'ಮಿ. ಬ್ಯಾಚುಲರ್​' ಎಂದು ಹೇಳಿಕೊಂಡಿದ್ದಾರೆ.

ಹೌದು! ಸ್ಯಾಂಡಲ್​ವುಡ್​ನ ಈ ತಾರಾ ಜೋಡಿ ಇದೀಗ ಹೊಸ ಸಿನಿಮಾವೊಂದರಲ್ಲಿ ನಟಿಸುತ್ತಿದೆ. ಮಿ. ಬ್ಯಾಚುಲರ್​ ಹೆಸರಿನ ಈ ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣ ನಾಯಕನಾಗಿದ್ದರೆ, ಮಿಲನಾ ನಾಗರಾಜ್‌ ಮತ್ತು ಇನ್ನೊಬ್ಬ ಇನ್ನೊಬ್ಬ ನಟಿ ನಿಮಿಕಾ ರತ್ನಾಕರ್‌ ನಾಯಕಿಯರಾಗಿ ಬಣ್ಣ ಹಚ್ಚಲಿದ್ದಾರೆ. ಸಿನಿಮಾದ ಪೋಸ್ಟರ್​ನ್ನು ಇದೀಗ ಚಿತ್ರತಂಡ ಬಿಡುಗಡೆ ಮಾಡಿದೆ. ಶ್ರೀನಿವಾಸ್​ ಮತ್ತು ಛಲಪತಿ ಆರ್​ ವಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಕೃಷ್ಣ ಮದುವೆಯ ಬಗ್ಗೆ ಕನಸುಗಳ ಸರಮಾಲೆಯನ್ನೇ ಕಟ್ಟಿಕೊಂಡಿರುವ ಯುವಕ. ಆದರೆ ಅವರಿಗೆ ಮದುವೆ ಭಾಗ್ಯ ಮಾತ್ರ ಯಾವಾಗಲೂ ಕಾಲಿನಲ್ಲಿ ಒದ್ದೇ ಕಳಿಸುವಂತದ್ದು. ಮದುವೆಗಾಗಿ ಪರದಾಡುವ ಸಾಫ್ಟ್​ವೇರ್​ ಇಂಜಿನಿಯರ್​ನ ಬದುಕಿಗೆ ಒಂದಿಷ್ಟು ಫನ್​ ಅನ್ನು ಸೇರಿಸಿ ಚಂದದ ಚಿತ್ರ ತಯಾರಿಸಲು ಸಿದ್ಧರಾಗಿದ್ದಾರೆ ನಿರ್ದೇಶಕ ಬಾಯ್ಡು ಬಂಡಾರ್​. ಚಿತ್ರದಲ್ಲಿ ಮಿಲನಾ ನಾಗರಾಜ್​ ಅವರದ್ದು ಸಂದೇಶ ನೀಡುವಂತಹ ಪಾತ್ರವಾಗಿದ್ದರೆ ನಿಮಿಕಾ ರತ್ನಾಕರ್​ ಟ್ರೆಂಡಿ ಪಾತ್ರವನ್ನು ನಿರ್ವಹಿಸಲಿದ್ದಾರೆ.

ನನ್ನದು ಮದುವೆಯ ಕನಸು ಕಾಣುವ ಪಾತ್ರವಾಗಿದ್ದರೆ ಮಿಲನಾದ್ದು ಚಿತ್ರಕ್ಕೆ ತಿರುವು ನೀಡುವಂತಹ ಪಾತ್ರ. ಹಲವು ದೃಶ್ಯಗಳ ಚಿತ್ರೀಕರಣ ಮುಗಿಸಿದ್ದೇವೆ. ಇನ್ನೂ ಒಂದಿಷ್ಟು ಬಾಕಿಯಿದೆ. ಸದ್ಯದಲ್ಲೇ ಶೂಟಿಂಗ್​ ಆರಂಭಿಸಲಿದ್ದೇವೆ ಎಂದಿದ್ದಾರೆ ನಾಯಕ ನಟ ಡಾರ್ಲಿಂಗ್​ ಕೃಷ್ಣ. (ಏಜೆನ್ಸೀಸ್​)