ನಟ ರಾಕ್ಷಸ ಡಾಲಿ ಧನಂಜಯ್ ಅಥವಾ ಸ್ಯಾಂಡಲ್‌ವುಡ್‌ನ ಡಾಲಿ ಅವರ ಅಭಿಮಾನಿಗಳಿಗೆ ಈ ವರ್ಷದ ಸಂಕ್ರಾಂತಿ ನಿಜಕ್ಕೂ ಬಹಳಷ್ಟು ಸಂತಸ ತಂದಿದೆ. ನಟನ ಹೊಸ ಚಲನಚಿತ್ರದ ಟೈಟಲ್ ಇಂದು ಘೋಷಿಸಲಾಗಿತ್ತು. ಅಂದಹಾಗೆ, ಇದು ನಟನ 25 ನೇ ಚಿತ್ರ ಎಂಬುದು ಗಮನಾರ್ಹ. ಈ ಸ್ಪೇಷಲ್ ಸಿನಿಮಾಗೆ 'ಹೊಯ್ಸಳ' ಎಂದು ಹೆಸರಿಡಲಾಗಿದ್ದು, ಟೈಟಲ್ ಪೋಸ್ಟರ್ ಅನ್ನು ಅವರ ತಂಡ ಮತ್ತು ಹಿತೈಷಿಗಳು ಬಿಡುಗಡೆ ಮಾಡಿದ್ದಾರೆ.
ಈ ಚಿತ್ರಕ್ಕೆಂದು ನಟ ಡಾಲಿ ಅವರು 'ರತ್ನನ್ ಪ್ರಪಂಚ' ನಂತರ ಎರಡನೇ ಬಾರಿಗೆ ಕೆಆರ್ಜಿ ಸ್ಟುಡಿಯೋಸ್ ಜೊತೆ ಕೈಜೋಡಿಸಲಿದ್ದಾರೆ. ಸಿನಿಮಾವನ್ನು 'ಗೀತಾ' ಚಿತ್ರ ಮಾಡಿದ್ದ ವಿಜಯ್.ಎನ್ ಅವರು ನಿರ್ದೇಶಿಸಲಿದ್ದಾರೆ. ಚಿತ್ರತಂಡವು ತಮ್ಮ ಸಿನಿಮಾಗೆ ಥಮನ್ ಎಸ್ ಅವರನ್ನು ಸಂಗೀತ ಸಂಯೋಜಕರನ್ನಾಗಿಸಿದ್ದು , ಮುಂಬರುವ 2022ರ ರಾಜ್ಯೋತ್ಸವಕ್ಕೆ ಸಿನಿಮಾ ಬಿಡುಗಡೆಯಾಗಲಿದೆ. ಸಹಜವಾಗಿ, ನಟ ಡಾಲಿ ಧನಂಜಯ್ ಅವರ 25ನೇ ಸಿನಿಮಾ ಎಂದ ಕೂಡಲೆ ಅಭಿಮಾನಿಗಳಲ್ಲಿ ನಿರೀಕ್ಷೆ ಮತ್ತು ಸಂತಸ, ಎರಡೂ ಕೂಡ ದುಪಟ್ಟು ಆಗಿದೆ.