ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಮತ್ತು ಪತಿ ನಾಗಚೈತನ್ಯ ನಡುವೆ ಬಿರುಕು ಮೂಡಿದೆ, ಇನ್ನೇನು ಅವರು ವಿಚ್ಛೇದನ ನೀಡುವುದಷ್ಟೇ ಬಾಕಿ ಎಂಬ ವದಂತಿಗಳು ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿವೆ. ಇತ್ತೀಚೆಗೆ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಹೆಸರು ಬದಲಾಯಿಸಿಕೊಂಡಿದ್ದರು. ಸಮಂತಾ ಅಕ್ಕಿನೇನಿ ಬದಲಿಗೆ ಕೇವಲ ‘ಎಸ್’ ಎಂದಷ್ಟೇ ಇಟ್ಟುಕೊಂಡಿದ್ದರು. ಅಕ್ಕಿನೇನಿ ಹೆಸರನ್ನು ಹೀಗೆ ಏಕಾಏಕಿ ಕಳಚಿಕೊಂಡಾಗಲೇ, ಸಮಂತಾ ಮತ್ತು ನಾಗಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ ಎಂಬ ಪ್ರಶ್ನೆ ಎದುರಾಗಿತ್ತು. ಆದರೆ, ಈ ಪ್ರಶ್ನೆಗೆ ಸಮಂತಾ ಉತ್ತರಿಸುವ ಗೋಜಿಗೆ ಹೋಗಿಲ್ಲ.
ಖಾಸಗಿ ವೆಬ್ಸೈಟ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಈ ಕುರಿತು ಪ್ರಶ್ನಿಸಿದಾಗ, ‘ಸದ್ಯಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಯಾವಾಗ ಮಾತನಾಡಬೇಕು ಅನಿಸುತ್ತದೆಯೋ ಅಂದೇ ಹೇಳುತ್ತೇನೆ. ಸದ್ಯಕ್ಕೆ ಏನನ್ನೂ ಕೇಳಬೇಡಿ. ಎಲ್ಲದಕ್ಕೂ ಸಮಯ ಬರಲಿ’ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ಇನ್ನು, ಭಾನುವಾರ ನಟ ಹಾಗೂ ನಾಗಚೈತನ್ಯ ಅವರ ತಂದೆ ನಾಗಾರ್ಜುನ ಹುಟ್ಟುಹಬ್ಬಕ್ಕೆ ಸಮಂತಾ ವಿಶ್ ಮಾಡಿದರಾದರೂ, ಅಂದು ಅವರ ಮನೆಯಲ್ಲಿ ನಡೆದ ಪಾರ್ಟಿಗೆ ಹೋಗಿಲ್ಲವಂತೆ. ಪಾರ್ಟಿಯ ಫೋಟೋಗಳಲ್ಲಿ ಅಕ್ಕಿನೇನಿ ಕುಟುಂಬದ ಮಿಕ್ಕ ಸದಸ್ಯರು ಇದ್ದರೂ, ಸಮಂತಾ ಮಾತ್ರ ಕಾಣಿಸಿಕೊಂಡಿಲ್ಲ. ಇದೆಲ್ಲವೂ, ಸಮಂತಾ ಮತ್ತು ನಾಗಚೈತನ್ಯ ನಡುವೆ ಎಲ್ಲವೂ ಸರಿ ಇಲ್ಲ ಎಂದು ಇನ್ನಷ್ಟು ಪುಷ್ಠೀಕರಿಸುವಂತಿದೆ. ಹಾಗಾದರೆ ಅಷ್ಟಕ್ಕೂ ಆಗಿದ್ದೇನು? ಈ ಪ್ರಶ್ನೆಗೆ ಅವರೇ ಉತ್ತರಿಸಬೇಕು.