ಸಿನಿವಾಣಿ

'ವರಾಹ ರೂಪಂ‌' ವಿವಾದ: ನ್ಯಾಯಾಲಯದ ತಡೆಯಾಜ್ಞೆ ತೆರವು; 'ಕಾಂತಾರ' ತಂಡಕ್ಕೆ ಗೆಲವು

ಅನುಮತಿ ಇಲ್ಲದೆ 'ಕಾಂತಾರ' ಚಿತ್ರದ 'ವರಾಹ ರೂಪಂ' ಹಾಡನ್ನು ಎಲ್ಲೂ ಬಳಸುವಂತಿಲ್ಲ ಎಂದು ಕೇರಳದ ಕೋರ್ಟ್​ ಆದೇಶ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿದ್ದು, ಇದರಿಂದ 'ಕಾಂತಾರ' ಚಿತ್ರತಂಡಕ್ಕೆ ಗೆಲುವು ಸಿಕ್ಕಂತಾಗಿದೆ.

ರಿಷಭ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ 'ಕಾಂತಾರ' ಚಿತ್ರದಲ್ಲಿರುವ 'ವರಾಹ ರೂಪಂ' ಹಾಡನ್ನು 'ನವರಸಂ' ಎಂಬ ಮಲಯಾಳಂ ಹಾಡಿನಿಂದ ಯಥಾವತ್ತಾಗಿ ಎರವಲು ಪಡೆಯಲಾಗಿದೆ ಎಂದು ಸುದ್ದಿಯಾಗಿತ್ತು. ಈ ಹಾಡನ್ನು ಮಲಯಾಳಂನ ಜನಪ್ರಿಯ ಬ್ರಾಂಡ್​ ಥಾಯ್ಕುಡಂ ಬ್ರಿಡ್ಜ್​ ರೂಪಿಸಿದ್ದು, ಚಿತ್ರತಂಡದವರ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿತ್ತು. ಹಾಡನ್ನು ಬಳಿಸಿದ್ದಕ್ಕೆ ಕ್ರೆಡಿಟ್​ ಕೊಡಬೇಕು, ಇಲ್ಲ ಹಾಡನ್ನು ಬಳಸವುದಕ್ಕೆ ಅನುಮತಿ ನೀಡಬಾರದು ಎಂದು ಥಾಯ್ಕುಡಂ ಬ್ರಿಡ್ಜ್​, ಕೋರ್ಟ್​ಗೆ ಮನವಿ ಮಾಡಿತ್ತು.

ಅರ್ಜಿ ವಿಚಾರಣೆ ನಡೆಸಿದ ಕೇರಳದ ಕೋರ್ಟ್​ ‘ವರಾಹ ರೂಪಂ ...’ ಹಾಡಿನ ಮೇಲೆ ನಿರ್ಬಂಧ ಹೇರಿತ್ತು. ‘ಯೂಟ್ಯೂಬ್ ಸೇರಿದಂತೆ ಯಾವುದೇ ಪ್ಲಾಟ್​ಫಾರ್ಮ್​ಗಳಲ್ಲಿ ‘ಕಾಂತಾರ’ ಚಿತ್ರದ ‘ವರಾಹ ರೂಪಂ ...’ ಹಾಡನ್ನು ಒಪ್ಪಿಗೆ ಇಲ್ಲದೆ ಬಳಸಬಾರದು’ ಎಂದು ಆದೇಶ ಹೊರಡಿಸಿತ್ತು. ಇದಕ್ಕೆ ತಲೆ ಬಾಗಿರುವ ಚಿತ್ರತಂಡವು, 'ವರಾಹ ರೂಪಂ' ಹಾಡನ್ನು ಯೂಟ್ಯೂಬ್​ನ ಹೊಂಬಾಳೆ ಫಿಲಂಸ್​ನ ಚಾನಲ್​ ಸೇರಿದಂತೆ ಮ್ಯೂಸಿಕ್ ಆ್ಯಪ್​ಗಳಾದ ಸಾವನ್ ಮುಂತಾದ ಕಡೆಗಳಿಂದ ಹಾಡನ್ನು ಡಿಲೀಟ್​ ಮಾಡಿದೆ. ಅಷ್ಟೇ ಅಲ್ಲ, ಗುರುವಾರ ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾದ 'ಕಾಂತಾರ' ಚಿತ್ರದಲ್ಲಿ ಬೇರೆ ಟ್ಯೂನ್​ ಬಳಸಲಾಗಿದೆ.

ಆದರೆ, 'ವರಾಹ ರೂಪಂ‌' ಮತ್ತು 'ನವರಸಂ' ಒಂದೇ ತರಹ ಇದ್ದರೂ, ಒಂದೇ ರಾಗ ಅಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ತಾತ್ಕಾಲಿಕವಾಗಿ ತಡೆಯಾಜ್ಞೆಯನ್ನ ತೆರವು ಮಾಡಲು ಆದೇಶ ಹೊರಡಿಸಲಾಗಿದೆ. ಇದರಿಂದಾಗಿ 'ಕಾಂತಾರ' ಚಿತ್ರತಂಡಕ್ಕೆ ಗೆಲುವು ಸಿಕ್ಕಂತಾಗಿದೆ.