ಮುಂಬೈ: ಕಿರುತೆರೆ, ಒಟಿಟಿ ಮತ್ತು ಸಿನಿಮಾ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ಮಾಪಕಿ ಮತ್ತು ನಿರ್ದೇಶಕಿ ಏಕ್ತಾ ಕಪೂರ್ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಈ ಹಿಂದೆ ‘XXX’ ವೆಬ್ ಸರಣಿಯ ಎರಡನೇ ಸೀಸನ್‍ನಲ್ಲಿ ಹಲವಾರು ದೃಶ್ಯಗಳಲ್ಲಿ ಸೈನಿಕರನ್ನು ಮತ್ತು ಅವರ ಕುಟುಂಬದವರನ್ನು ಅವಮಾನಿಸಿದ್ದಾರೆ ಎಂಬ ಆರೋಪವನ್ನು ಏಕ್ತಾ ಕಪೂರ್ ಹೊತ್ತಿದ್ದರು. ಇದೀಗ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸಿರುವ ಆರೋಪಕ್ಕೆ ಏಕ್ತಾ ಗುರಿಯಾಗಿದ್ದಾರೆ.
ಒಟಿಟಿಯಲ್ಲಿ ಅಶ್ಲೀಲತೆಯ ಪ್ರದರ್ಶನ ಎಲ್ಲೆ ಮೀರಿದೆ. ಯಾವುದೇ ಕಡಿವಾಣ ಇಲ್ಲದಿರುವುದರಿಂದ ಒಟಿಟಿ ವೆಬ್ ಸರಣಿಗಳ ಕಥಾವಸ್ತುಗಳಲ್ಲಿ ಬಹಳಷ್ಟು ನಿಷೇಧಿತ ಮತ್ತು ಸೂಕ್ಷ್ಮ ವಿಷಯಗಳನ್ನು ಬಿಂಬಿಸಲಾಗುತ್ತಿದೆ. ಅಶ್ಲೀಲತೆಯೇ ಪ್ರಧಾನವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಮಪ್ರಚೋದಕತೆಯನ್ನು ಅನ್ವೇಷಿಸುವ ಗಾಂಡಿ ಬಾತ್ ವೆಬ್ ಸರಣಿಯು ಇದಕ್ಕೆ ಉದಾಹರಣೆಯಾಗಿದೆ. ALT ಬಾಲಾಜಿಯಲ್ಲಿ ಪ್ರಸಾರವಾಗುವ ಈ ಸರಣಿಯು ಇದೀಗ ಪೋಸ್ಟರ್ ಕಾರಣದಿಂದ ವಿವಾದಕ್ಕೆ ಸಿಲುಕಿದೆ.
ಗಾಂಡಿ ಬಾತ್ 6ನೇ ಸರಣಿಯ ಥಂಬ್ನೈಲ್ ಪೋಸ್ಟರ್ ಬಗ್ಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿಕೊಂಡಿದ್ದಾರೆ. ತನ್ನ ಸೊಂಟದ ಬಳಿ ಕಮಲದ ಹೂವು ಮತ್ತು ಎರಡು ಬದಿಗಳಲ್ಲಿ ನವಿಲುಗಳೊಂದಿಗೆ ಬಾಯಿ ಮೇಲೆ ಬೆರಳಿಟ್ಟು ಹುಶ್ ಎಂದು ಹೇಳುತ್ತಿರುವ ಭಂಗಿಯಲ್ಲಿ ಭಾರತೀಯ ಉಡುಪನ್ನು ಧರಿಸಿರುವ ಮಹಿಳೆಯನ್ನು ಚಿತ್ರವನ್ನು ಗಾಂಡಿ ಬಾತ್ ಸರಣಿಯ ಥಂಬ್ನೈಲ್ ಪೋಸ್ಟರ್ ಒಳಗೊಂಡಿದೆ. ಆದರೆ, ಒಂದು ವರ್ಗದ ನೆಟ್ಟಿಗರು ಈ ಥಂಬ್ನೈಲ್ ಕಮಲದ ಮೇಲೆ ಕುಳಿತುಕೊಳ್ಳುವ ಲಕ್ಷ್ಮೀ ದೇವತೆ ಪೋಸ್ಟರ್ ಹೋಲುತ್ತದೆ ಎಂದು ವಾದಿಸಿದ್ದಾರೆ.
ALT ಬಾಲಾಜಿ ಒಟಿಟಿ ವೇದಿಕೆ ಏಕ್ತಾ ಕಪೂರ್‌ಗೆ ಸೇರಿದ್ದಾಗಿದೆ. ಬಾಲಾಜಿ ಎಂಬ ಹೆಸರಿಟ್ಟುಕೊಂಡಿದ್ದಾರೆ. ಆದರೆ, ಅವರು ಮಾಡುವ ಕೆಲಸ ಅದಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಆಲ್ಟ್ ಬಾಲಾಜಿಯಲ್ಲಿ ಅಶ್ಲೀಲತೆಯನ್ನು ಪ್ರದರ್ಶಿಸಲಾಗುತ್ತದೆ. ಲಕ್ಷ್ಮಿ ದೇವಿಯಂತಹ ಥಂಬ್‌ನೇಲ್ ಅನ್ನು ರಚಿಸಲಾಗಿದೆ. ಕೊಳಕು ಮಹಿಳೆಯನ್ನು ಕಮಲದ ಮೇಲೆ ಕುಳಿತುಕೊಳ್ಳುವಂತೆ ಮಾಡಲಾಗಿದೆ. ಇದು ಲಕ್ಷ್ಮೀ ದೇವಿಗೆ ಮಾಡಿ ಅಪಮಾನವಾಗಿದೆ. ನನಗೆ ಮಾತ್ರ ಇದು ಆಕ್ಷೇಪಾರ್ಹವೆಂದು ತೋರುತ್ತದೆಯೇ ಅಥವಾ ನಿಮ್ಮೆಲ್ಲರಿಗೂ ಆಕ್ಷೇಪಣೆಗಳಿವೆಯೇ? ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಅಲ್ಲದೆ, ಅನೇಕರು ಟ್ವೀಟ್ ಮೂಲಕ ಆಕ್ಷೇಪ ಹೊರಹಾಕುತ್ತಿದ್ದಾರೆ.
ಥಂಬ್ನೈಲ್ ವಿಚಾರದಲ್ಲಿ ನೆಟ್ಟಿಗರು ಏಕ್ತಾ ಕಪೂರ್ ಹೆಸರು ಪ್ರಸ್ತಾಪಿಸಿದ್ದಾರೆ. ಆದರೆ, ಈ ವರ್ಷದ ಆರಂಭದಲ್ಲೇ ಏಕ್ತಾ ಕಪೂರ್ ಆಲ್ಟ್ ಬಾಲಾಜಿಯ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ್ದಾರೆ ಎಂದು ವರದಿಯಾಗಿದೆ. ವಿವೇಕ್ ಕೋಕಾ ಅವರನ್ನು ಹೊಸ ಮುಖ್ಯ ವ್ಯವಹಾರ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಕಂಪನಿ ಪ್ರಕಟಿಸಿದೆ.
ಇನ್ನು ಇದೇ ಸಮಯದಲ್ಲಿ ವಿವಾದಾತ್ಮಕ ಮತ್ತು ಜನಪ್ರಿಯವಾಗಿರುವ ಗಾಂಡಿ ಬಾತ್ ಸರಣಿಯು ಪ್ರಸ್ತುತ ತನ್ನ ಏಳನೇ ಸೀಸನ್ ಅನ್ನು ಸ್ಟ್ರೀಮ್ ಮಾಡುತ್ತಿದೆ ಮತ್ತು ಅದನ್ನು ಸಚಿನ್ ಮೋಹಿತೆ ಎಂಬುವರು ನಿರ್ದೇಶಿಸಿದ್ದಾರೆ. ಈ ಸರಣಿಯ ಪ್ರತಿಯೊಂದು ಸಂಚಿಕೆಯು ಗ್ರಾಮೀಣ ಭಾರತದ ಕಾಮಪ್ರಚೋದಕ ವಿಷಯದ ಕಥೆಯನ್ನು ಒಳಗೊಂಡಿದೆ. ಇದು ಜಿಯೋ ಸಿನಿಮಾದಲ್ಲೂ ಸ್ಟ್ರೀಮ್ ಆಗುತ್ತದೆ. (ಏಜೆನ್ಸೀಸ್)