More

    ಯುವ ಪೀಳಿಗೆಯ ಮನಸ್ಸನ್ನು ಮಲಿನಗೊಳಿಸುತ್ತಿದ್ದೀರಿ: ಏಕ್ತಾ ಕಪೂರ್​ಗೆ ಸುಪ್ರೀಂ ಕೋರ್ಟ್​ ತರಾಟೆ

    ನವದೆಹಲಿ: ಬಾಲಿವುಡ್​ ನಿರ್ಮಾಪಕಿ ಮತ್ತು ನಿರ್ದೇಶಕಿ ಏಕ್ತಾ ಕಪೂರ್​ರನ್ನು ನಿನ್ನೆ (ಅ.14) ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್​, ಯುವ ಪೀಳಿಗೆಯ ಮನಸ್ಸನ್ನು ಮಲಿನಗೊಳಿಸುತ್ತಿದ್ದೀರಿ ಎಂದು ಕಿಡಿಕಾರಿತು. ‘XXX’ ವೆಬ್ ಸರಣಿಯ ಎರಡನೇ ಸೀಸನ್‍ನಲ್ಲಿ ಹಲವಾರು ಆಕ್ಷೇಪಾರ್ಹ ದೃಶ್ಯಗಳು ಇರುವ ಕಾರಣ ನಿರ್ಮಾಪಕಿ ಏಕ್ತಾ ಕಪೂರ್​ ವಿರುದ್ಧ ಅಪೆಕ್ಷ್​ ಕೋರ್ಟ್​ ಟೀಕಾ ಪ್ರಹಾರ ನಡೆಸಿತು.

    ‘XXX’ ವೆಬ್ ಸರಣಿ ಸೀಸನ್-2ನಲ್ಲಿ ಸೈನಿಕರಿಗೆ ಅವಮಾನಿಸಲಾಗಿದೆ ಎಂದು ಆರೋಪಿಸಿ ಮಾಜಿ ಸೈನಿಕ ಶಂಭುಕುಮಾರ್ ಅವರು ದೂರು ನೀಡಿದ್ದರು. ಸೈನಿಕರು ಮತ್ತು ಅವರ ಕುಟುಂಬಕ್ಕೆ ನೋವಾಗಿದೆ. ಸರಿಯಾದ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಹಾರದ ಬೇಗುಸರಾಯ್ ಕೋರ್ಟ್ ಅರೆಸ್ಟ್​ ವಾರೆಂಟ್ ಜಾರಿಗೊಳಿಸಿದೆ.

    ಅರೆಸ್ಟ್​ ವಾರೆಂಟ್​ ಅನ್ನು ಪ್ರಶ್ನಿಸಿ ಏಕ್ತಾ ಕಪೂರ್​​ ಅವರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು. ಈ ಸಂಬಂಧ ನಿನ್ನೆ ವಿಚಾರಣೆ ನಡೆಸಿದ ನ್ಯಾಯಾಲಯ, ಏನಾದರೂ ಮಾಡಲೇಬೇಕಿದೆ. ನೀವು ದೇಶದ ಯುವ ಪೀಳಿಗೆಯ ಮನಸ್ಸನ್ನು ಮಲಿನಗೊಳಿಸುತ್ತಿದ್ದೀರಿ. ಒಟಿಟಿ ಕಂಟೆಂಟ್​ ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತಿದೆ. ಯಾವ ರೀತಿಯ ಆಯ್ಕೆಯನ್ನು ನೀವು ಜನರಿಗೆ ನೀಡುತ್ತಿದ್ದೀರಿ? ನಿಮ್ಮ ಆಯ್ಕೆಯ ಮೂಲಕ ನೀವು ಯುವ ಪೀಳಿಗೆಯ ಮನಸ್ಸನ್ನು ಕೊಳಕು ಮಾಡುತ್ತೀದ್ದೀರಿ ಎಂದು ನ್ಯಾಯಮೂರ್ತಿಗಳಾದ ಅಜಯ್​ ರಾಸ್ತೋಗಿ ಮತ್ತು ಸಿ.ಟಿ. ರವಿಕುಮಾರ್​ ಅವರಿದ್ದ ಪೀಠ ಏಕ್ತಾ ಕಪೂರ್​ ಅವರನ್ನು ತರಾಟೆಗೆ ತೆಗೆದುಕೊಂಡಿತು.

    ಏಕ್ತಾ ಕಪೂರ್ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ವಾದ ಮಂಡಿಸಿದರು. ಇದೇ ವಿಚಾರದಲ್ಲಿ ಈ ಹಿಂದೆ ಏಕ್ತಾ ಕಪೂರ್‌ಗೆ ಸುಪ್ರೀಂ ಕೋರ್ಟ್ ರಕ್ಷಣೆ ನೀಡಿತ್ತು ಎಂದು ಹೇಳಿದರು. ನಿರ್ಮಿಸುತ್ತಿರುವ ಕಂಟೆಂಟ್​​ ಚಂದಾದಾರಿಕೆ ಆಧಾರಿತವಾಗಿದೆ ಮತ್ತು ಈ ದೇಶದಲ್ಲಿ ಆಯ್ಕೆಯ ಸ್ವಾತಂತ್ರ್ಯವಿದೆ ಎಂದು ರೋಹಟಗಿ ಹೇಳಿದರು.

    ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಪ್ರತಿಬಾರಿ ನೀವು ನ್ಯಾಯಾಲಯಕ್ಕೆ ಬರುವಾಗಲೆಲ್ಲ ನಾವಿದನ್ನು ಪ್ರಶಂಸಿಸುವುದಿಲ್ಲ. ಇಂತಹ ಅರ್ಜಿಯನ್ನು ಸಲ್ಲಿಸಿದ್ದಕ್ಕಾಗಿ ನಾವು ನಿಮ್ಮ ಮೇಲೆಯೇ ದಂಡ ಹಾಕುತ್ತೇವೆ. ರೋಹಟಗಿ ಅವರೇ ದಯವಿಟ್ಟು ನಿಮ್ಮ ಕಕ್ಷಿದಾರರಿಗೆ ತಿಳಿ ಹೇಳಿ. ಏಕೆಂದರೆ ಒಳ್ಳೆಯ ವಕೀಲರಿಂದ ಸೇವೆಗಳನ್ನು ಬಾಡಿಗೆಗೆ ಪಡೆಯಬಹುದು. ಆದರೆ, ಈ ನ್ಯಾಯಾಲಯ ಇರುವುದು ಧ್ವನಿ ಇರುವವರಿಗೆ ಅಲ್ಲ. ಧ್ವನಿ ಇಲ್ಲದವರ ಪರವಾಗಿ ಮಾತ್ರ ಈ ಕೋರ್ಟ್​ ಕೆಲಸ ಮಾಡುತ್ತದೆ. ಒಂದು ವೇಳೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿರುವ ಈ ಜನರಿಗೆ ನ್ಯಾಯ ಸಿಗದೇ ಹೋದರೆ, ಈ ಜನಸಾಮಾನ್ಯರ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಒಮ್ಮೆ ಯೋಚಿಸಿ. ನಾವು ಹೈಕೋರ್ಟ್​ ಆದೇಶವನ್ನು ನೋಡಿದ್ದೇವೆ ಮತ್ತು ನಮಗೂ ನಮ್ಮದೇ ಆದ ಮೀಸಲಾತಿ ಇದೆ ಎಂದು ಪೀಠವು ಹೇಳಿತು.

    ಸುಪ್ರೀಂ ಕೋರ್ಟ್​ ಈ ಪ್ರಕರಣವನ್ನು ಬಾಕಿ ಉಳಿಸಿಕೊಂಡಿದ್ದು, ಮತ್ತು ಹೈಕೋರ್ಟ್​ನಲ್ಲಿ ವಿಚಾರಣೆಯ ಸ್ಥಿತಿಯ ಬಗ್ಗೆ ತಿಳಿಯಲು ಸ್ಥಳೀಯ ವಕೀಲರನ್ನು ಕೆಲಸ ಮಾಡುವಂತೆ ಸೂಚಿಸಿತು.

    ಅಂದಹಾಗೆ ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್ ಒಡೆತನದ ಒಟಿಟಿ ಪ್ಲಾಟ್‍ಫಾರ್ಮ್ ಎಎಲ್‍ಟಿ ಬಾಲಾಜಿಯಲ್ಲಿ ಈ ಸರಣಿಯನ್ನು ಪ್ರಸಾರ ಮಾಡಿದೆ. ಈ ಸರಣಿಯಲ್ಲಿ ಸೈನಿಕನ ಪತ್ನಿಗೆ ಸಂಬಂಧಿಸಿದ ಆಕ್ಷೇಪಾರ್ಹ ದೃಶ್ಯಗಳಿವೆ, ಮಾತ್ರವಲ್ಲದೇ ಈ ಸರಣಿ ಸೈನಿಕರ ವಿರುದ್ಧವೇ ಮಾಡಿದ್ದಾರೆ ಶಂಭುಕುಮಾರ್ ಆಕ್ಷೇಪಿಸಿದ್ದಾರೆ. ಈ ಮೊದಲು ವಿಚಾರಣೆ ನಡೆಸಿದ್ದ ಕೋರ್ಟ್​ ಸಮನ್ಸ್​ ಜಾರಿಗೊಳಿಸಿತ್ತು. ಆಗ ವಕೀಲರನ್ನು ನೇಮಕ ಮಾಡಿಕೊಂಡಿದ್ದ ಏಕ್ತಾ ಕಪೂರ್​, ಕೋರ್ಟ್​ಗೆ ಸಮಜಾಯಿಷಿ ನೀಡಿದ್ದರು. ಆಕ್ಷೇಪಣೆಯ ನಂತರ ಸರಣಿಯಲ್ಲಿನ ಕೆಲವು ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಅವರ ಪರ ವಕೀಲ ಹೃಷಿಕೇಶ್ ಪಾಠಕ್ ಕೋರ್ಟ್​ ಗಮನಕ್ಕೆ ತಂದರು. ಅದರೆ ನ್ಯಾಯಾಧೀಶ ವಿಕಾಸ್ ಕುಮಾರ್ ಅದನ್ನು ಮಾನ್ಯ ಮಾಡಲಿಲ್ಲ. ವಾರೆಂಟ್​ ಜಾರಿಗೊಳಿಸಿ ಆದೇಶಿಸಿದರು.

    ಅಂದಹಾಗೆ, ‘ಎಕ್ಸ್ ಎಕ್ಸ್​ ಎಕ್ಸ್​’ ವೆಬ್​ ಸೀರಿಸ್​ನ ಮೊದಲ ಸೀಸನ್​ 2018ರಲ್ಲಿ ಪ್ರಸಾರವಾಗಿತ್ತು. 2020ರ ಜನವರಿಯಲ್ಲಿ ಎರಡನೇ ಸೀಸನ್​ ಬಿಡುಗಡೆ ಆಯಿತು. ಇದರ ಪ್ರತಿ ಎಪಿಸೋಡ್​ಗಳಲ್ಲಿ ಬೇರೆ ಬೇರೆ ಕಥೆ ಇದೆ. ಲೈಂಗಿಕ ಸಂಬಂಧಗಳ ವಿವಿಧ ಆಯಾಮಗಳನ್ನು ಇಟ್ಟುಕೊಂಡು ಈ ಸಂಚಿಕೆಗಳು ಮೂಡಿಬಂದಿವೆ. ಇದರಲ್ಲಿ ಸೈನಿಕರ ಕುಟುಂಬಕ್ಕೆ ಹಾಗೂ ಪತ್ನಿಯರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. (ಏಜೆನ್ಸೀಸ್​)

    ನಿರ್ಮಾಪಕಿ ಏಕ್ತಾ ಕಪೂರ್​ಗೆ ಶಾಕ್​ ಕೊಟ್ಟ ‘XXX’ : ತಾಯಿ-ಮಗಳಿಗೆ ಅರೆಸ್ಟ್​ ವಾರೆಂಟ್​ ಜಾರಿ

    ಮಾರ್ಗದರ್ಶಕ ಅಬ್ದುಲ್ ಕಲಾಂ

    ಸಣ್ಣ ಸಮುದಾಯಗಳ ಗುಣಾಕಾರ: ಸೋಷಿಯಲ್ ಇಂಜಿನಿಯರಿಂಗ್​ಗೆ ಮುಂದಾದ ಸಿಎಂ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts