More

    ಸಣ್ಣ ಸಮುದಾಯಗಳ ಗುಣಾಕಾರ: ಸೋಷಿಯಲ್ ಇಂಜಿನಿಯರಿಂಗ್​ಗೆ ಮುಂದಾದ ಸಿಎಂ ಬೊಮ್ಮಾಯಿ

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಬಹುದೊಡ್ಡ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮತ ಬ್ಯಾಂಕ್ ಗಟ್ಟಿಗೊಳಿಸಲು ಸೋಷಿಯಲ್ ಇಂಜಿನಿಯರಿಂಗ್​ಗೆ ಆದ್ಯತೆ ನೀಡಲು ಕಾರ್ಯಯೋಜನೆ ರೂಪಿಸಿಕೊಂಡಿದ್ದಾರೆ.

    ಸರ್ಕಾರದಲ್ಲಿ ತಳ ಸಮುದಾಯಗಳು, ಅತ್ಯಂತ ಹಿಂದುಳಿದ ಜಾತಿಗಳಿಗೆ ಆದ್ಯತೆ ನೀಡುವ ಮೂಲಕ ಪಕ್ಷದತ್ತ ಸೆಳೆದುಕೊಳ್ಳುವುದರೊಂದಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅಹಿಂದ ತತ್ವಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಲು ಮುಂದಾಗಿದ್ದಾರೆ.

    ಪರಿಶಿಷ್ಟ ಜಾತಿ ಮತ್ತು ವರ್ಗದವರ ಮೀಸಲಾತಿ ಹೆಚ್ಚಳಕ್ಕೆ ಸಚಿವ ಸಂಪುಟದಲ್ಲಿ ನಿರ್ಧಾರ ಮಾಡಿರುವ ಬೆನ್ನಲ್ಲೇ ಇತರೆ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದು ಸಿಎಂ ಬೊಮ್ಮಾಯಿ ಅವರ ಆದ್ಯತೆಯಾಗಿದೆ. ಆ ಮೂಲಕ ತಮ್ಮ ಮೇಲಿರುವ ಗುರುತರ ಜವಾಬ್ದಾರಿಯನ್ನು ಯಶಸ್ವಿಯಾಗಿ ಈಡೇರಿಸುವುದು ಅವರ ಉದ್ದೇಶವಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಬಿಜೆಪಿ ನಾಯಕರು ಹೇಳುತ್ತಿದ್ದರೂ ಸಹ ಪಕ್ಷ ಅಧಿಕಾರದಲ್ಲಿರುವಾಗ ಮುಖ್ಯಮಂತ್ರಿ ಹುದ್ದೆಯಲ್ಲಿರುವವರ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಆದ್ದರಿಂದಲೇ ಬೊಮ್ಮಾಯಿ ಅವರು ಅಧಿಕಾರದ ಅವಕಾಶಗಳನ್ನು ಬಳಸಿಕೊಂಡು ಸೋಷಿಯಲ್ ಇಂಜಿನಿಯರಿಂಗ್ ಮಾಡುವ ಮೂಲಕ ಮತಗಳನ್ನು ಸೆಳೆಯುವ ಕಾರ್ಯತಂತ್ರ ರೂಪಿಸಿಕೊಂಡಿದ್ದಾರೆ.

    ಪಕ್ಷದ ನಾಯಕರು ಹೇಳುವಂತೆ 150 ಸ್ಥಾನಗಳಲ್ಲ, ಸ್ವಂತ ಶಕ್ತಿಯ ಮೇಲೆ ಅಧಿಕಾರ ನಡೆಸಬೇಕು ಎಂಬುದು ಬೊಮ್ಮಾಯಿ ಅವರ ಉದ್ದೇಶವಾಗಿದೆ. ಅದಕ್ಕೆ ತಕ್ಕಂತೆ ಸದ್ದಿಲ್ಲದೆ ಸಣ್ಣ ಸಮುದಾಯಗಳನ್ನು ಸೆಳೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.

    ವರದಿಯ ಬಗ್ಗೆ ಆಕ್ಷೇಪ: ನ್ಯಾ. ಸದಾಶಿವ ಆಯೋಗದ ಬಗ್ಗೆ ಕೆಲ ಸಮುದಾಯಗಳಲ್ಲಿ ಆಕ್ಷೇಪ ಇದೆ. ಕೇಂದ್ರ ಸರ್ಕಾರದ ಜಾತಿಗಣತಿಯ ಅಂಕಿ-ಅಂಶ ಹಾಗೂ ಸದಾಶಿವ ವರದಿಯ ಅಂಕಿ-ಅಂಶಗಳಿಗೆ ಸಾಕಷ್ಟು ವ್ಯತ್ಯಾಸಗಳಿವೆ ಎಂಬ ಆರೋಪಗಳನ್ನು ಮಾಡುತ್ತಿವೆ. ಇನ್ನೊಂದು ಜನಗಣತಿಯ ನಂತರವೇ ಅಂತಿಮ ತೀರ್ವನವಾಗಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ. ಆದ್ದರಿಂದ ಬೊಮ್ಮಾಯಿ ಯಾವ ರೀತಿಯ ನಿರ್ಧಾರ ಮಾಡಲಿದ್ದಾರೆ ಎಂಬ ಕುತೂಹಲವೂ ಇದೆ.

    ಉತ್ತರ ಪ್ರದೇಶ ಮಾದರಿ: ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಯೋಗಿ ಆದಿತ್ಯನಾಥ ಅವರ ಆಡಳಿತ ಶೈಲಿಯ ಜತೆಗೆ ಅವರು ಸಣ್ಣ ಸಮುದಾಯಗಳನ್ನು ವಿವಿಧ ಯೋಜನೆಗಳ ಮೂಲಕ ಬಿಜೆಪಿ ಕಡೆ ಸೆಳೆದಿದ್ದರು. ರಾಜ್ಯದಲ್ಲಿಯೂ ಸಹ ಬೊಮ್ಮಾಯಿ ಅವರು ಅದೇ ಮಾದರಿಯಲ್ಲಿ ಸಣ್ಣ ಸಣ್ಣ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಕಡೆ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ.

    ದೊಡ್ಡ ಸಮುದಾಯಗಳ ಗೊಂದಲ: ಪಂಚಮಸಾಲಿ ಸಮುದಾಯ ಹಿಂದುಳಿದ ವರ್ಗಗಳ ಪ್ರವರ್ಗ 2ಎಗೆ ಸೇರಿಸುವಂತೆ ಪಟ್ಟು ಹಿಡಿದಿದೆ. ಆದರೆ ಯಾವ ರೀತಿಯಲ್ಲಿ ಸೇರಿಸಬೇಕು ಎಂಬ ಗೊಂದಲ ಇದೆ. ಆ ಬಗ್ಗೆ ತಕ್ಷಣಕ್ಕೆ ಯಾವುದೇ ನಿರ್ಧಾರಕ್ಕೆ ಬರಲಾಗದು ಎಂದು ಮೂಲಗಳು ಹೇಳುತ್ತವೆ. ಕುರುಬ ರನ್ನು ಎಸ್​ಟಿಗೆ ಸೇರಿಸುವುದಕ್ಕೆ ಸಂಬಂಧಿಸಿದಂತೆ ಕುಲಶಾಸ್ತ್ರೀಯ ಅಧ್ಯಯನ ವರದಿ ಬರುವ ತನಕ ಕಾಯಬೇಕಾಗುತ್ತದೆ.

    ಸಣ್ಣ ಸಮುದಾಯಗಳ ಗುಣಾಕಾರ: ಸೋಷಿಯಲ್ ಇಂಜಿನಿಯರಿಂಗ್​ಗೆ ಮುಂದಾದ ಸಿಎಂ ಬೊಮ್ಮಾಯಿ

    ವರದಿ ಮಂಡನೆ: ಪರಿಶಿಷ್ಟರ ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ. ಎ.ಜೆ. ಸದಾಶಿವ ಅವರು ನೀಡಿರುವ ವರದಿಯನ್ನು ಸರ್ಕಾರ ಇದುವರೆಗೂ ಅಂಗೀಕರಿಸಿಯೂ ಇಲ್ಲ, ತಿರಸ್ಕರಿಸಿಯೂ ಇಲ್ಲ. ಆ ವರದಿಯ ಬಗ್ಗೆ ಕಾನೂನು ಸಚಿವರಿಂದ ಅಭಿಪ್ರಾಯ ಕೋರಲಾಗಿದೆ. ಆದರೆ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ನ್ಯಾ. ಸದಾಶಿವ ಅವರ ವರದಿಯನ್ನು ಮಂಡಿಸುವುದು ಬೊಮ್ಮಾಯಿ ಅವರ ಉದ್ದೇಶವಾಗಿದೆ. ಆ ಮೂಲಕ ಅವರು ಪ್ರತಿಪಕ್ಷಗಳಿಗೆ ಮತ್ತೊಂದು ಮಾಸ್ಟರ್ ಸ್ಟ್ರೋಕ್ ನೀಡಲು ನಿರ್ಧರಿಸಿದ್ದಾರೆ. ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸಿ ನಂತರ ಅದನ್ನು ಜಾರಿಗೊಳಿಸುವ ಬಗ್ಗೆ ಬೊಮ್ಮಾಯಿ ತಮ್ಮ ಆಪ್ತರ ಜತೆ ಚರ್ಚೆ ನಡೆಸಿದ್ದಾರೆ. ಪರಿಶಿಷ್ಟರ ಮೀಸಲಾತಿ ಹೆಚ್ಚಳಕ್ಕೆ ಸಂಸತ್ತಿನಲ್ಲಿ ಒಪ್ಪಿಗೆ ಸಿಗಬೇಕಾಗಿದೆ. ಅಲ್ಲಿ ತಡವಾಗಬಹುದು, ಆದರೆ ಒಳ ಮೀಸಲಾತಿ ರಾಜ್ಯದಲ್ಲಿಯೇ ಮಾಡಿಕೊಳ್ಳಲು ಅವಕಾಶ ಇರುವುದರಿಂದ ಪರಿಶಿಷ್ಟರಲ್ಲಿ ನಂಬಿಕೆ ಮೂಡುವಂತೆ ಮಾಡುವುದು ಬೊಮ್ಮಾಯಿ ಅವರ ನಿರ್ಧಾರವಾಗಿದೆ ಎಂದು ಮೂಲಗಳು ಹೇಳಿವೆ.

    ಸಣ್ಣ ಸಮುದಾಯಗಳಿಗೆ ನ್ಯಾಯ: ದೊಡ್ಡ ಸಮುದಾಯಗಳ ಮೀಸಲಾತಿಯ ಬೇಡಿಕೆಯನ್ನು ಚುನಾವಣೆಗೂ ಮುನ್ನ ಈಡೇರಿಸುವ ಸಾಧ್ಯತೆಗಳು ತೀರಾ ಕಡಿಮೆ ಎಂಬ ಅರಿವು ಬೊಮ್ಮಾಯಿ ಅವರಿಗೆ ಇದೆ. ಆದ್ದರಿಂದ ಅವರು ಈಗ ಸಣ್ಣ ಸಮುದಾಯಗಳತ್ತ ಗಮನ ಹರಿಸುತ್ತಿದ್ದಾರೆ. ಸವಿತಾ ಸಮಾಜ, ಮಡಿವಾಳ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವುದು, ಉಪ್ಪಾರ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಶಿಫಾರಸು ಮಾಡುವುದು. ಕಾಡು ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರೂ, ಇನ್ನೂ ಕೆಲವೊಂದು ಸಮಸ್ಯೆ ಇರುವುದರಿಂದ ಅದನ್ನು ಬಗೆಹರಿಸುವುದು. ಈಗಾಗಲೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಶಿಫಾರಸು ಆಗಿ ಬಂದಿರುವ ಕೆಲವು ಸಮುದಾಯಗಳನ್ನು ಹಿಂದುಳಿದ ವರ್ಗಗಳಿಗೆ ಸೇರಿಸುವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಖಚಿತಪಡಿಸಿವೆ.

    ಕಾಂತಾರ: 2 ವಾರ ಕಳೆದರೂ ತಗ್ಗದ ಅಬ್ಬರ; ಬಾಲಿವುಡ್ ಚಿತ್ರಗಳೆರಡೂ ತತ್ತರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts