ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ತುಂಬಾ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದ್ದು ಅನೇಕ ಕಲಾವಿದರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಂತಹ ಹಾಸ್ಯ ರಿಯಾಲಿಟಿ ಶೋಗಳಲ್ಲಿ 'ಕಾಮಿಡಿ ಕಿಲಾಡಿಗಳು' ಕೂಡ ಒಂದು. ಹೌದು, ಕಾಮಿಡಿ ಕಿಲಾಡಿಗಳು ಜನರನ್ನು ನಕ್ಕು ನಗಿಸುವಲ್ಲಿ ಯಶಸ್ವಿಯಾಗಿತ್ತು. ಈ ರಿಯಾಲಿಟಿ ಶೋದಲ್ಲಿ ಸಾಕಷ್ಟು ಕಲಾವಿದರಿಗೆ ವೇದಿಕೆ ಸಿಕ್ಕಿದ್ದು ಅವರು ಇಂದು ಸಿನಿಮಾಗಳಲ್ಲಿ ಹಾಸ್ಯ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಂತೆ, ಈಗ ಕನ್ನಡಿಗರ ಮನೆಮಾತಾದವರಲ್ಲಿ ಸಂಜುಬಸಯ್ಯ ಕೂಡ ಒಬ್ಬರು. ನೋಡಲು ಚಿಕ್ಕವರಾಗಿ ಕಂಡರೂ ಕೂಡ ಇವರ ಕಲೆ ನಿಜಕ್ಕೂ ಮೆಚ್ಚುವಂತದ್ದು. ಇಷ್ಟೆಲ್ಲಾ ಖ್ಯಾತಿಯನ್ನು ಪಡೆದಿರುವ ಸಂಜುಬಸಯ್ಯ ಅವರಿಗೆ ಕೂಡ ಒಬ್ಬರು ಪ್ರೇಯಸಿ ಇದ್ದಾರೆ. ಆ ಪ್ರೇಯಸಿಯನ್ನೆ ಮದುವೆಯಾಗಲಿದ್ದಾರೆ ಸಂಜುಬಸಯ್ಯ.
ಸಂಜು ಬಸಯ್ಯ ಅವರಿಗೆ ಒಬ್ಬರು ಪ್ರೇಯಸಿ ಇದ್ದು ಅವರನ್ನು ಇತ್ತೀಚೆಗೆ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಪರಿಚಯಿಸಿದ್ದಾರೆ. ಇವರು ನನ್ನ ಪ್ರೇಯಸಿ ಎಂದು ಪರಿಚಯಿಸಿ, ವೇದಿಕೆ ಮೇಲೆ ನೆರೆದಿದ್ದ ಸಾಕಷ್ಟು ಜನರಿಗೆ ಆಶಚರ್ಯ ಮೂಡುವಂತೆ ಮಾಡಿದ್ದಾರೆ. ತಮ್ಮ ಎಂಟು ವರ್ಷಗಳ ಪ್ರೇಮಕಥೆಯನ್ನು ಕೂಡ ಎಲ್ಲರ ಮುಂದೆ ಬಿಚ್ಚಿಟ್ಟಿದ್ದಾರೆ. ಸಂಜು ಬಸಯ್ಯ ಅವರ ಪ್ರೇಯಸಿ ಪಲ್ಲವಿ ಯಾವ ನಟಿಗೂ ಕೂಡ ಕಮ್ಮಿ ಇಲ್ಲ. ''ನಾವಿಬ್ಬರೂ ಒಂದು ನಾಟಕ ಕಂಪನಿಯಲ್ಲಿ ಒಟ್ಟಾಗಿ ಪ್ರವೇಶ ಮಾಡಿದೆವು. ನಂತರ ನಾಟಕಗಳಲ್ಲಿ ಅಭಿನಯಿಸುತ್ತಾ ಒಬ್ಬರಿಗೊಬ್ಬರು ಪರಿಚಯವಾದೆವು. ಆ ಸಮಯದಲ್ಲಿ ನಮ್ಮಿಬ್ಬರ ಮಧ್ಯೆ ಪ್ರೀತಿ ಚಿಗುರಿ ನಾನು ಅವರಿಗೆ 8 ವರ್ಷಗಳ ಹಿಂದೆ ಪ್ರಪೋಸ್ ಮಾಡಿದ್ದೆ. ಇದಕ್ಕೆ ಆಕೆ ಕೂಡ ಒಪ್ಪಿಕೊಂಡಿದ್ದಳು'' ಎಂದು ಹೇಳಿದ್ದಾರೆ.
ಇನ್ನು ಸಂಜು ಬಸಯ್ಯ ಅವರ ಪ್ರೇಯಸಿ ಮಾತನಾಡಿ ''ನನಗಿಂತ ಸಂಜು ಬಸಯ್ಯ ಅವರು ಆರು ತಿಂಗಳು ದೊಡ್ಡವರು'' ಎಂದು ಹೇಳಿದ್ದಾರೆ. ವೇದಿಕೆಯಲ್ಲಿ ನಟ ಜಗ್ಗೇಶ್ ಅವರು ಪಲ್ಲವಿ ಜೊತೆಗೆ ಮಾತನಾಡಿ ಆಕೆಯ ನಿರ್ಧಾರವನ್ನು ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ''ಅವರಿಬ್ಬರು ಮದುವೆಯಾದರೆ, ಅವರ ಮದುವೆಗೆ ಅತಿಥಿಯಾಗಿ ನಾನು ಬರುತ್ತೇನೆ'' ಎಂದು ಜಗ್ಗೇಶ್ ಅವರು ಭರವಸೆ ನೀಡಿದರು. ಈಗ ಕೆಲವೇ ತಿಂಗಳಲ್ಲಿ ಸಂಜು ಬಸಯ್ಯ ಅವರ ಮದುವೆ ನಡೆಯಲಿದ್ದು ಅವರ ಅಭಿಮಾನಿಗಳು ಈಗಲೇ ಶುಭ ಹಾರೈಸುತ್ತಿದ್ದಾರೆ.