ಬೆಂಗಳೂರು: ‘ಹೆಸರಿಗೆ ತಕ್ಕ ಹಾಗೆ ಯಾರ ಖಾತೆಯಲ್ಲೂ ಹಣವಿಲ್ಲ. ಚಿತ್ರಪ್ರದರ್ಶನ ಪ್ರಾರಂಭ ಮಾಡುವುದಕ್ಕೆ ಅವಕಾಶ ಕೊಟ್ಟರೆ, ಆಗ ಎಲ್ಲರ ಖಾತೆಯಲ್ಲೂ ಹಣ ಬರುತ್ತದೆ, ಒಳ್ಳೆಯದಾಗುತ್ತದೆ. ಅದಕ್ಕೂ ಮುನ್ನ ಎಲ್ಲರೂ ಲಸಿಕೆ ಹಾಕಿಸಿ. ಭಯಬಿಟ್ಟು ಚಿತ್ರಮಂದಿರದ ಕಡೆ ಬನ್ನಿ ...’ ಗಣೇಶ್ ಹಾಗೆ ಹೇಳುತ್ತಿದ್ದಂತೆಯೇ ಜೋರು ಚಪ್ಪಾಳೆ. ದಿಗಂತ್, ಐಂದ್ರಿತಾ, ರಂಜನಿ ರಾಘವನ್ ಅಭಿನಯದ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆ ಮಾಡುವುದಕ್ಕೆ ಗಣೇಶ್ ಬಂದಿದ್ದರು. ಹಾಡು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು. ಈ ಪಾತ್ರ ದಿಗಂತ್ಗೆ ಹೇಳಿ ಮಾಡಿಸಿದಂತಿದೆ ಎಂದರು.
‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರೀಕರಣ ಈ ವರ್ಷದ ಆರಂಭದಲ್ಲೇ ಮುಗಿದಿತ್ತು. ಇದೀಗ ಪೋಸ್ಟ್-ಪ್ರೊಡಕ್ಷನ್ ಸಹ ಅಂತಿಮ ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ಮುಗಿಯಲಿದೆ. ಈ ಮಧ್ಯೆ, ಹಾಡಿನ ಬಿಡುಗಡೆಯಿಂದ ಚಿತ್ರದ ಪ್ರಚಾರ ಶುರುವಾಗಿದೆ. ಚಿತ್ರದಲ್ಲಿ ಅಡಕೆ ಬೆಳೆಗಾರನ ಪಾತ್ರ ನಿರ್ವಹಿಸಿರುವ ದಿಗಂತ್, ನಿಜಜೀವನದಲ್ಲೂ ಅಡಕೆ ಬೆಳೆಗಾರನಾಗಿರುವುದಾಗಿ ಹೇಳಿಕೊಂಡರು. ‘ಈ ಚಿತ್ರದಲ್ಲಿ ನಮ್ಮ ಮಲೆನಾಡಿನ ಕಥೆ ಹೇಳಲಾಗುತ್ತಿದೆ. ಬಹಳ ಖುಷಿಯಾಗಿದೆ. ಚಿತ್ರ ಚೆನ್ನಾಗಿ ಬಂದಿದೆ. ಜನ ನೋಡಿ ಪ್ರೋತ್ಸಾಹಿಸಬೇಕು ಎಂದರು. ಈ ಸಂದರ್ಭದಲ್ಲಿ ನಿರ್ದೇಶಕ ವಿನಾಯಕ ಕೊಡ್ಸರ್, ನಿರ್ವಪಕ ಸಿಲ್ಕ್ ಮಂಜು, ರಂಜನಿ ರಾಘವನ್, ಲಹರಿ ವೇಲು ಮುಂತಾದವರು ಹಾಜರಿದ್ದರು.