ಸಿನಿಮಾದಲ್ಲಿ ನಟಿಸಿದ್ದ ದೃಶ್ಯಗಳನ್ನೇ ತೆರೆ ಮೇಲಿಂದ ಕಟ್ ಮಾಡಿದ್ದಕ್ಕೆ ತಮಿಳು ನಟಿ ಆನಂದಿ ಅಜಯ್ ಭಾವುಕ
- ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'
- ಸಿನಿಮಾದಲ್ಲಿ ನಟಿಸಿದ್ದ ದೃಶ್ಯಗಳನ್ನೇ ತೆರೆ ಮೇಲಿಂದ ಕಟ್ ಮಾಡಿದ್ದಕ್ಕೆ ತಮಿಳು ನಟಿ ಆನಂದಿ ಅಜಯ್ ಭಾವುಕ
- ವಿಜಯ್ ಕೊನೆಯ ಸಿನಿಮಾದಲ್ಲಾದ ಅನ್ಯಾಯದ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಹಂಚಿಕೊಂಡ ವಿಡಿಯೋ ವೈರಲ್
ಚೆನ್ನೈ: ನಿರ್ಮಾಣ ಹಂತದಿಂದ ಬಿಡುಗಡೆವೆರೆಗೆ ಸದಾ ವಿವಾದಗಳ ಮೂಲಕವೇ ಚರ್ಚೆಯಲ್ಲಿದ್ದ ಸಿನಿಮಾ ಎಂದರೆ ಅದು ದಳಪತಿ ವಿಜಯ್ ಅಭಿನಯದ ಚಿತ್ರ ಜನ ನಾಯಗನ್. ಈ ಸಿನಿಮಾ ತಮಿಳುನಾಡಿನ ಪ್ರಸ್ತುತ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಲಿಯಾಸ್ ದಳಪತಿ ವಿಜಯ್ ಅವರ ಕೊನೆಯ ಸಿನಿಮಾವಾಗಿದ್ದ ಕಾರಣ ಅವರ ಅಭಿಮಾನಿಗಳ ಕ್ರೇಜ್ ಸ್ವಲ್ಪ ಜಾಸ್ತಿಯೇ ಇತ್ತು.
ಆದರೆ ಈ ಸಿನಿಮಾ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರವನ್ನು ಪಡೆದುಕೊಳ್ಳುವಲ್ಲಿ ವಿಳಂಬ ಮಾಡಿಕೊಂಡ ಹಿನ್ನಲೆ ನಿನ್ನೆ (ಗುರುವಾರ, ಜು.23) ಈ ಸಿನಿಮಾ ತೆರೆಕಂಡಿದೆ. ಸಿನಿಮಾ ಏನೋ ತೆರೆಕಂಡಿದೆ, ಆದರೆ ಈಗ ಈ ಸಿನಿಮಾದಲ್ಲಿ ನಟಿಸಿದ ಕಲಾವಿದೆಯೊಬ್ಬಳು ತನಗೆ ಈ ಸಿನಿಮಾದಲ್ಲಿ ಅನ್ಯಾಯವಾಗಿದೆ ಎಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾಳೆ.
ನನ್ನ ಸೀನ್ ಅನ್ನು ತೆಗೆದು ಹಾಕಿದ್ದಾರೆ!
ಈ ವಿಡಿಯೋವನ್ನು ತಮಿಳು ನಟಿ ಆನಂದಿ ಅಜಯ್ (Anandhi Ajay on Jana Nayagan) ಹಂಚಿಕೊಂಡಿದ್ದು, ನಾನು ಕಳೆದೊಂದು ವರ್ಷದಿಂದ ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿದೆ. ಈ ಸಿನಿಮಾದಲ್ಲಿ ದಳಪತಿ ವಿಜಯ್ ಅವರ ಜೊತೆ ಕಾಣಿಸಿಕೊಳ್ಳುತ್ತಿರುವುದು ನನಗೆ ತುಂಬಾ ಸಂತಸದ ಸಂಗತಿಯಾಗಿತ್ತು.
ಆದರೆ, ಸಿನಿಮಾದಲ್ಲಿ ನಾನು ಅಭಿನಯಿಸಿದ ದೃಶ್ಯವನ್ನೇ ತೆರೆದುಹಾಕಿದ್ದಾರೆ ಎಂದು ಆನಂದಿ ಇನ್‌ಸ್ಟಾಗ್ರಾಮ್‌ನಲ್ಲಿ ಕಣ್ಣೀರನ್ನು ಸುರಿಸಿದ್ದಾರೆ. ಇದು ವಿಜಯ್ ಅವರ ಕೊನೆಯ ಸಿನಿಮಾವಾಗಿದ್ದ ಕಾರಣ ಜೀವನದಲ್ಲಿ ಇನ್ನೊಮ್ಮೆ ಅವರೊಂದಿಗೆ ನಟಿಸಲು ಸಾಧ್ಯವಾಗುವುದಿಲ್ಲ ಎನ್ನುವುದೇ ನನ್ನ ದುಃಖವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ನಟಿ ದುಃಖವನ್ನು ತೋಡಿಕೊಂಡಿದ್ದಾರೆ.
ನೆಟ್ಟಿಗರಿಂದ ನಟಿಗೆ ಸಮಾಧಾನ!
ನಟಿ ಆನಂದಿ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಟಿಗೆ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ಚಿತ್ರರಂಗದಲ್ಲಿ ಇವೆಲ್ಲಾ ಬಹಳ ಮಾಮೂಲಿ, ಆದರೆ ನೀವು ಬೇಜಾರು ಮಾಡಿಕೊಳ್ಳಬೇಡಿ, ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ದೊರೆಯುತ್ತದೆ ಎಂದು ಒಬ್ಬರು ಹೇಳಿದ್ದಾರೆ.
ನಿಮ್ಮಲ್ಲಿ ಪ್ರತಿಭೆಯಿದೆ, ಇದನ್ನು ಇಂದಲ್ಲಾ, ನಾಳೆ ಯಾರಾದರೂ ಗುರುತಿಸುತ್ತಾರೆ, ಚಿಂತೆ ಪಡಬೇಡಿ ಎಂದು ಇನ್ನೊಬ್ಬರು ಸಮಾಧಾನ ಮಾಡಿದ್ದಾರೆ. ಚಿತ್ರ ರಂಗಕ್ಕೆ ಬರಲು ಆಸಕ್ತರಾಗಿರುವವರು ಇದನ್ನು ನೋಡಿ, ಸಿನಿಮಾ ಜಗತ್ತು ಹೊರಗಿನಿಂದ ನೋಡಲು ಮಾತ್ರ ವರ್ಣರಂಜಿತ, ಅದರ ನಿಜವಾದ ಮುಖ ಬೇರೆಯೇ ಇರುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ, (ಏಜನ್ಸೀಸ್).