ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಗೆ ಭೇಟಿ ನೀಡಿದ ನಟ ರಜನಿಕಾಂತ್!  
ಕಾಲಿವುಡ್

ಮೆಟ್ಟಿಲುಗಳನ್ನು ಹತ್ತುವಾಗ ಜಾರಿಬಿದ್ದ ಅಣ್ಣ ಆಸ್ಪತ್ರೆಗೆ ದಾಖಲು: ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನಿಕಾಂತ್! Superstar Rajinikanth

ಬೆಂಗಳೂರು: ಮೆಟ್ಟಿಲುಗಳನ್ನು ಹತ್ತುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದು ಆಸ್ಪತ್ರೆಗೆ ದಾಖಲಾಗಿರುವ ಅಣ್ಣನ ಆರೋಗ್ಯ ವಿಚಾರಿಸಲು ಭಾರತೀಯ ಸಿನಿರಂಗದ ಸೂಪರ್‌ಸ್ಟಾರ್ ರಜನಿಕಾಂತ್ ( Superstar Rajinikanth ) ಅವರು ಇಂದು (ನ.05) ಬೆಂಗಳೂರಿಗೆ ಆಗಮಿಸಿದ್ದಾರೆ.

ರಜನಿಕಾಂತ್​ ಅವರಿಗೆ ಬೆಂಗಳೂರು ಎಂದರೆ ಕೇವಲ ನೆನಪುಗಳ ನಗರವಲ್ಲ, ಅದು ಅವರ ಬಾಲ್ಯ. ತಂದೆ ಸಮಾನರಾದ ಹಿರಿಯ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ ನೆಲೆಸಿರುವ ತವರಾಗಿದೆ. ಸುಮಾರು ನಾಲ್ಕೈದು ದಿನಗಳ ಹಿಂದೆ ಸತ್ಯನಾರಾಯಣ ಅವರು ತಮ್ಮ ಮನೆಯ ಮೆಟ್ಟಿಲುಗಳನ್ನು ಹತ್ತುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದರು. ಈ ಅಪಘಾತದಲ್ಲಿ ಅವರ ಮೆದುಳಿಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವ ಸಂಭವಿಸಿದ ಕಾರಣ, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಣ್ಣನ ಆರೋಗ್ಯ ಸ್ಥಿತಿ ಗಂಭೀರವಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿದ ನಟ ರಜನಿಕಾಂತ್, ತಕ್ಷಣವೇ ರಾಜಧಾನಿ ಬೆಂಗಳೂರಿಗೆ ಆಗಮಿಸಿ, ರಾಜರಾಜೇಶ್ವರಿ ನಗರದಲ್ಲಿರುವ ಪ್ರಸಿದ್ಧ ರಾಷ್ಟ್ರೋತ್ಥಾನ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ವೈದ್ಯರ ಉಸ್ತುವಾರಿಯಲ್ಲಿ ಸತ್ಯನಾರಾಯಣ ರಾವ್ ಅವರಿಗೆ ಮೆದುಳಿನ ಶಸ್ತ್ರಚಿಕಿತ್ಸೆ (ಬ್ರೈನ್ ಸರ್ಜರಿ) ಯಶಸ್ವಿಯಾಗಿ ನೆರವೇರಿದ್ದು, ನುರಿತ ತಜ್ಞ ವೈದ್ಯರ ತಂಡ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಿದೆ. ಆಸ್ಪತ್ರೆಗೆ ಭೇಟಿ ನೀಡಿದ ಸೂಪರ್‌ಸ್ಟಾರ್, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರೊಂದಿಗೆ ಖುದ್ದಾಗಿ ಮಾತುಕತೆ ನಡೆಸಿ ಸಹೋದರನ ಪ್ರಸ್ತುತ ಚೇತರಿಕೆಯ ಕುರಿತು ವಿವರವಾದ ಮಾಹಿತಿ ಪಡೆದುಕೊಂಡರು.

ರಜನಿಕಾಂತ್ ಅವರ ಇಡೀ ಜೀವನ ಹಾಗೂ ಕಲಾಪಯಣಕ್ಕೆ ಅವರ ಹಿರಿಯ ಸಹೋದರ ಸತ್ಯನಾರಾಯಣ ರಾವ್ ಅವರೇ ಬೆನ್ನೆಲುಬಾಗಿ ನಿಂತವರು. ರಜನಿಕಾಂತ್ ಅವರನ್ನು ಕಂಡರೆ ಸತ್ಯನಾರಾಯಣ ಅವರಿಗೆ ಎಷ್ಟು ಪ್ರೀತಿಯೋ, ರಜನಿಕಾಂತ್ ಅವರಿಗೂ ಅಣ್ಣನ ಎಂದರೆ ಅಷ್ಟೇ ಅಪಾರ ಗೌರವ. ಯಾವುದೇ ದೊಡ್ಡ ಸಿನಿಮಾ ಬಿಡುಗಡೆಯಾಗಲಿ ಅಥವಾ ಜೀವನದ ಪ್ರಮುಖ ಘಟ್ಟವಿರಲಿ, ರಜನಿಕಾಂತ್ ಅವರು ಬೆಂಗಳೂರಿಗೆ ಬಂದು ಅಣ್ಣನ ಆಶೀರ್ವಾದ ಪಡೆಯುವುದನ್ನು ವಾಡಿಕೆಯಾಗಿ ಇಟ್ಟುಕೊಂಡಿದ್ದಾರೆ. ಇದೀಗ ವಯೋಸಹಜ ಅನಾರೋಗ್ಯ ಮತ್ತು ಅಪಘಾತದಿಂದ ಕಂಗೆಟ್ಟಿರುವ ಅಣ್ಣನ ಪಕ್ಕದಲ್ಲಿದ್ದು ಧೈರ್ಯ ತುಂಬಲು ಅವರು ಓಡೋಡಿ ಬಂದಿದ್ದಾರೆ.

ತಮ್ಮ ನೆಚ್ಚಿನ ನಟ ಆಸ್ಪತ್ರೆಗೆ ಆಗಮಿಸುತ್ತಿದ್ದಂತೆಯೇ ಸ್ಥಳೀಯ ಅಭಿಮಾನಿಗಳು ಮತ್ತು ಮಾಧ್ಯಮಗಳು ಸ್ಥಳಕ್ಕೆ ಧಾವಿಸಿದರೂ, ರಜನಿಕಾಂತ್ ಅವರು ಅತ್ಯಂತ ಸರಳವಾಗಿ ಆಸ್ಪತ್ರೆಯ ಪ್ರಕ್ರಿಯೆಗಳಿಗೆ ಅಡ್ಡಿಯಾಗದಂತೆ ಅಣ್ಣನನ್ನು ಭೇಟಿಯಾದರು. ವೈದ್ಯರ ಸಲಹೆಯಂತೆ ಸತ್ಯನಾರಾಯಣ ರಾವ್ ಅವರು ಸದ್ಯ ವಿಶ್ರಾಂತಿಯಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಅಣ್ಣನ ಆರೋಗ್ಯ ಸ್ಥಿತಿ ಸ್ಥಿರವಾಗಿರುವುದನ್ನು ಖಚಿತಪಡಿಸಿಕೊಂಡ ನಟ ರಜನಿಕಾಂತ್, ಕುಟುಂಬಸ್ಥರಿಗೆ ಧೈರ್ಯ ತುಂಬಿ ತಮ್ಮ ಸಹೋದರ ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ.