ರಜಿನಿಕಾಂತ್, ಕಮಲ್ ಹಾಸನ್, ಸುಂದರ್ ಸಿ ಹಾಗೂ ಖುಷ್ಬೂ
- ಸೂಪರ್ ಸ್ಟಾರ್ ರಜಿನಿಕಾಂತ್ ಮುಂದಿನ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ
- ಸಕಲಕಲಾ ವಲ್ಲಭ ಕಮಲ್ ಹಾಸನ್ ನಿರ್ಮಾಣದಲ್ಲಿ ರಜಿನಿ ಸಿನಿಮಾ
- ನಿರ್ದೇಶನದಿಂದ ಹಿಂದೆ ಸರಿದ ಕಾಲಿವುಡ್ನ ಖ್ಯಾತ ನಿರ್ದೇಶಕ ಸುಂದರ್.ಸಿ
- ಸುಂದರ್ ಸಿ ವಿರುದ್ಧದ ಟ್ರೋಲ್ಗೆ ಖಡಕ್ ಉತ್ತರ ನೀಡುತ್ತಿರುವ ಪತ್ನಿ ಖುಷ್ಬೂ
ಚೆನ್ನೈ: ಕೂಲಿ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಸೂಪರ್ ಸ್ಟಾರ್ ರಜಿನಿಕಾಂತ್ ( Rajinikanth ) ಅವರ ಮುಂದಿನ ಚಿತ್ರದ ಬಗ್ಗೆ ಭಾರಿ ನಿರೀಕ್ಷೆಗಳು ಉಂಟಾಗಿವೆ. ಸಕಲಕಲಾವಲ್ಲಭ ಕಮಲ್ ಹಾಸನ್ ಅವರ ರಾಜ್ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ನಿರ್ಮಾಣ ಸಂಸ್ಥೆ ರಜಿನಿಗೆ ಚಿತ್ರ ನಿರ್ಮಾಣ ಮಾಡಲಿದ್ದು, ಹಲವು ದಶಕಗಳ ಬಳಿಕ ರಜಿನಿ ಮತ್ತು ಕಮಲ್ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇದು ಉಭಯ ನಟರ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿಯಾಗಿದೆ.
ಆರಂಭದಲ್ಲಿ 'ತಲೈವರ್ 173' ಸಿನಿಮಾವನ್ನು ಖ್ಯಾತ ನಿರ್ದೇಶಕ ಹಾಗೂ ನಟ ಸುಂದರ್.ಸಿ ಅವರು ನಿರ್ದೇಶಿಸುತ್ತಿದ್ದಾರೆಂದು ಹೇಳಲಾಗಿತ್ತು. ಅದಕ್ಕೆ ಸಂಬಂಧಿಸಿದ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಏನಾಯ್ತೋ ಕಾಣೆ ಈ ಬಿಗ್ ಸಿನಿಮಾದಿಂದ ಹಿಂದೆ ಸರಿಯುತ್ತಿರುವುದಾಗಿ ಸ್ವತಃ ಸುಂದರ್. ಸಿ ಅವರೇ ಘೋಷಣೆ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಸುಂದರ್ ಸಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಪತ್ರಿಕಾ ಪ್ರಕಟಣೆ
ರಜಿನಿ-ಕಮಲ್ ಸಿನಿಮಾವನ್ನು ಸುಂದರ್. ಸಿ ಅವರು ನಿರ್ದೇಶಿಸಲಿದ್ದಾರೆ ಎಂದು ಒಂದು ವಾರದ ಹಿಂದಷ್ಟೇ ಘೋಷಿಸಲಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಹಿಂದೆ ಸರಿದಿರುವುದಾಗಿ ಸುಂದರ್ ಸಿ ಅವರು ಪ್ರತಿಕಾ ಪ್ರಕಟಣೆ ಹೊರಡಿಸಿದ್ದಾರೆ. ಭಾರವಾದ ಹೃದಯದಿಂದ ನಾನು ನಿಮ್ಮೊಂದಿಗೆ ಕೆಲವು ಪ್ರಮುಖ ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಅನಿರೀಕ್ಷಿತ ಮತ್ತು ಅನಿವಾರ್ಯ ಸಂದರ್ಭಗಳಿಂದಾಗಿ, ಪ್ರತಿಷ್ಠಿತ ಯೋಜನೆ ತಲೈವರ್ 173 ನಿಂದ ಹಿಂದೆ ಸರಿಯುವ ಕಠಿಣ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ. ಸಿನಿಮಾ ದಂತಕಥೆ ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯಲ್ಲಿ ಮತ್ತು ಉಳಘನಾಯಗನ್ ಕಮಲ್ ಹಾಸನ್ ಅವರ ನಿರ್ಮಾಣದಲ್ಲಿ ಒಂದು ಸಿನಿಮಾ ಮಾಡುವುದು ನನ್ನ ಒಂದು ಕನಸಾಗಿತ್ತು. ಅದು ನನಸಾಗುವ ಹಂತದಲ್ಲಿತ್ತು. ಆದರೆ, ಜೀವನದಲ್ಲಿ, ನಮ್ಮ ಕನಸುಗಳು ಭಿನ್ನವಾಗಿದ್ದರೂ ಸಹ, ನಮಗಾಗಿ ದೇವರು ನಿಗದಿಪಡಿಸಿದ ಮಾರ್ಗವನ್ನು ನಾವು ಅನುಸರಿಸಬೇಕಾದ ಸಂದರ್ಭಗಳಿವೆ. ಈ ಇಬ್ಬರು ಐಕಾನ್‌ಗಳೊಂದಿಗಿನ ನನ್ನ ಒಡನಾಟವು ಬಹಳ ಹಿಂದಿನಿಂದಲೂ ಇದೆ ಮತ್ತು ನಾನು ಅವರನ್ನು ಯಾವಾಗಲೂ ಅತ್ಯುನ್ನತ ಗೌರವದಿಂದಲೇ ಕಾಣುತ್ತೇನೆ. ಕಳೆದ ಕೆಲವು ದಿನಗಳಿಂದ ನಾವು ಹಂಚಿಕೊಂಡ ವಿಶೇಷ ಕ್ಷಣಗಳು ಶಾಶ್ವತವಾಗಿ ನನ್ನಲ್ಲಿ ಉಳಿಯುತ್ತದೆ. ಇಬ್ಬರು ದಿಗ್ಗಜರು ನನಗೆ ಅಮೂಲ್ಯವಾದ ಪಾಠಗಳನ್ನು ಕಲಿಸಿದ್ದಾರೆ. ಅದನ್ನು ನಾನು ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೆ. ನಾನು ಈ ಅವಕಾಶದಿಂದ ಹಿಂದೆ ಸರಿಯುತ್ತಿದ್ದರು ಕೂಡ ಅವರಿಂದ ಮಾರ್ಗದರ್ಶನವನ್ನು ಪಡೆಯುತ್ತಲೇ ಇರುತ್ತೇನೆ. ಈ ಮಹೋನ್ನತ ಸಿನಿಮಾಗಾಗಿ ನನ್ನನ್ನು ಪರಿಗಣಿಸಿದ್ದಕ್ಕಾಗಿ ನನ್ನ ಹೃದಯ ತುಂಬಿ ಅವರಿಬ್ಬರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಸುದ್ದಿ ನಿಮ್ಮನ್ನು ನಿರಾಶೆಗೊಳಿಸಿದ್ದರೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಅದೇ ರೀತಿ ನಿಮ್ಮ ಉತ್ಸಾಹವನ್ನು ಹೆಚ್ಚಿಸುವ ಮನರಂಜನೆಯನ್ನು ನಿಮಗೆ ಹೊತ್ತು ತರುವುದನ್ನು ಮುಂದುವರಿಸುವುದಾಗಿ ನಾನು ಭರವಸೆ ನೀಡುತ್ತೇನೆ. ನನ್ನನ್ನು ಅರ್ಥ ಮಾಡಿಕೊಂಡು ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮೆಲ್ಲರ ಜತೆ ಇನ್ನಷ್ಟು ನೆನಪುಗಳನ್ನು ಸೃಷ್ಟಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಸುಂದರ್ ಸಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಬರೆದುಕೊಂಡಿದ್ದಾರೆ.
ಟ್ರೋಲ್
ಪ್ರತಿಕಾ ಪ್ರಕಟಣೆ ವೈರಲ್ ಆಗುತ್ತಿದ್ದಂತೆ ಸುಂದರ್ ಅವರು ಈ ಸಿನಿಮಾದಿಂದ ಹಿಂದೆ ಸರಿಯಲು ಕಾರಣ ಏನಿರಬಹುದು ಎಂದು ಅನೇಕರು ಉತ್ತರ ಹುಡುಕುತ್ತಿದ್ದಾರೆ. ಇದರ ನಡುವೆ ಲೆಜೆಂಡ್ಗಳ ಸಿನಿಮಾದಿಂದ ಹಿಂದೆ ಸರಿದಿದ್ದಕ್ಕೆ ಸುಂದರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ತಮ್ಮ ಗಂಡನನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರಿಗೆ ಪತ್ನಿ ಖುಷ್ಬೂ ಅವರು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಎಂತಹ ದುರಂತ ನಿಮ್ಮದು
"ತಲೈವರ್ 173" ಸಿನಿಮಾ ಹೆಚ್ಚಿನ ನಿರೀಕ್ಷೆಯೊಂದಿಗೆ ಪ್ರಾರಂಭವಾಯಿತು. ಆದರೆ, ಸರಿಯಾದ ಕತೆ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅದು ಏನೇ ಇರಲಿ, ಸುಂದರ್ ಸಿ ಅವರು ನಿರ್ಮಾಣ ಸಂಸ್ಥೆಯೊಂದಿಗೆ ಮಾತನಾಡಬೇಕಿತ್ತು. ಅದರ ಬದಲಾಗಿ, ಸುಂದರ್ ಅವರು ಅಗೌರವ ಮತ್ತು ದುರಹಂಕಾರವನ್ನು ಪ್ರತಿಬಿಂಬಿಸುವ ಪತ್ರವನ್ನು ಪ್ರಕಟಿಸಿದ್ದಾರೆ ಎಂದು ಖುಷ್ಬೂ ಅವರನ್ನು ಟ್ಯಾಗ್ ಮಾಡಿ ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಖಡಕ್ ಉತ್ತರ ನೀಡಿರುವ ಖುಷ್ಬೂ, ನೀವು ಗಾಳಿ ಸುದ್ದಿಯನ್ನು ಆಧರಿಸಿ ಪ್ರಶ್ನೆಗಳನ್ನು ಕೇಳುತ್ತಿದ್ದೀರಾ? ಎಂತಹ ದುರಂತ ನಿಮ್ಮದು ಎಂದು ಖುಷ್ಬೂ ಕುಹಕವಾಡಿದ್ದಾರೆ.
ನನ್ನ ಶೂ ಗಾತ್ರ 41
ಕಳಪೆ ಸಿನಿಮಾ ಕತೆ ಹೇಳಿದ್ದರಿಂದ ರಜನಿಕಾಂತ್ ಮತ್ತು ಕಮಲ್ ಅವರು ನಿಮ್ಮ ಪತಿಯನ್ನು ತಮ್ಮ ಚಿತ್ರದಿಂದ ಹೊರಗೆ ಹಾಕಿದ್ದಾರೆಂದು ನಾನು ಕೇಳಲ್ಪಟ್ಟೆ. ಭಾರತೀಯ ಚಲನಚಿತ್ರೋದ್ಯಮವು ನಿಮ್ಮ ಪತಿ ಸುಂದರ್ ಸಿ ಅವರನ್ನು ಕಸದ ಬುಟ್ಟಿಗೆ ಎಸೆಯುವ ಸಮಯ ಬಂದಿದೆಯೇ? ಎಂದು ಮತ್ತೊಬ್ಬ ನೆಟ್ಟಿಗ ಖುಷ್ಬೂ ಅವರನ್ನು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಖಾರವಾಗಿ ಉತ್ತರ ನೀಡಿರುವ ಖುಷ್ಬೂ, ನನ್ನ ಶೂ ಗಾತ್ರ 41, ಹೊಡೆತ ತಿನ್ನಲು ನೀವು ಸಿದ್ಧರಿದ್ದೀರಾ? ಎಂದಿದ್ದಾರೆ.
ಅಂದಹಾಗೆ, ಖುಷ್ಬೂ ಅವರು ಉತ್ತರ ನೀಡಿದ ರೀತಿ ಹಲವರ ಗಮನ ಸೆಳೆದಿದೆ. ರಜನಿಕಾಂತ್ ಅವರಿಗೆ ಚಿತ್ರ ನಿರ್ದೇಶಿಸಲು ಮುಂದಾದಾಗ ತಮ್ಮ ಪತಿಯನ್ನು ಬೆಂಬಲಿಸಿದಂತೆಯೇ, ಅವರು ಚಿತ್ರದಿಂದ ಹೊರಬಂದ ನಂತರವೂ ಅದೇ ಪ್ರಮಾಣದಲ್ಲಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ತಮ್ಮ ಮುಖಗಳನ್ನು ಬಹಿರಂಗಪಡಿಸದೇ ಸಾಮಾಜಿಕ ಜಾಲತಾಣದಲ್ಲಿ ವಿನಾಕಾರಣ ಟ್ರೋಲ್ ಮಾಡುತ್ತಿರುವ ಕೆಲ ಕಿಡಿಗೇಡಿಗಳಿಗೆ ಖುಷ್ಬೂ ಅವರು ಸೂಕ್ತ ಉತ್ತರ ನೀಡಿದ್ದಾರೆ ಎಂದು ಅನೇಕರು ಅವರನ್ನು ಬೆಂಬಲಿಸಿದ್ದಾರೆ.
ನಿರ್ದೇಶಕರು ಯಾರು?
ತಲೈವರ್ 173 ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ ಎಂಬ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಇದರ ನಡುವೆ ಸುಂದರ್.ಸಿ ನಿರ್ದೇಶನ ಮಾಡಲಿದ್ದಾರೆ ಎಂದು ಘೋಷಿಸಲಾಯಿತು. ಈ ವೇಳೆ ಕೆಲವು ಅಭಿಮಾನಿಗಳು, ಈ ವ್ಯಕ್ತಿ ತಲೈವರ್‌ಗೆ ಸೂಕ್ತನಾ? ಎಂದು ಪ್ರಶ್ನೆ ಮಾಡಿದ್ದರು. ಈಗ ಅವರು ನಿರ್ದೇಶನ ಮಾಡುವುದಿಲ್ಲ ಎಂದು ತಿಳಿದಿರುವುದರಿಂದ, ಮುಂದಿನ ನಿರ್ದೇಶಕ ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ರಜನಿಕಾಂತ್ ಅಭಿನಯದ 'ಪೆಟ್ಟಾ' ಚಿತ್ರವನ್ನು ನಿರ್ದೇಶಿಸಿದ ಕಾರ್ತಿಕ್ ಸುಬ್ಬರಾಜ್ ಉತ್ತಮ ಎಂದು ಕೆಲವರು ಹೇಳುತ್ತಿದ್ದಾರೆ. ಮುಂದೆ ಏನಾಗುತ್ತದೆ ಎಂದು ಸದ್ಯಕ್ಕೆ ಕಾದು ನೋಡಬೇಕಿದೆ, (ಏಜೆನ್ಸೀಸ್).