ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯಾ ಮಾರನ್ ಮತ್ತು ದಕ್ಷಿಣ ಭಾರತ ಸಿನಿರಂಗದ ಖ್ಯಾತ ಮ್ಯೂಸಿಕ್​ ಡೈರೆಕ್ಟರ್​ ಅನಿರುದ್ಧ್ ರವಿಚಂದರ್  
ಕಾಲಿವುಡ್

ಕಾವ್ಯಾ-ಅನಿರುದ್ಧ್ ಅದ್ಧೂರಿ ವಿವಾಹ: ಗ್ರೀಸ್‌ನಲ್ಲಿ ನಡೆದ ಈ ರಾಯಲ್ ವೆಡ್ಡಿಂಗ್‌ಗೆ ಖರ್ಚಾಗಿದ್ದೆಷ್ಟು? ಮದುವೆ ವಿಶೇಷತೆಗಳೇನು? Kavya Maran-Anirudh Ravichander wedding

ನವೆಂಬರ್ 11 ರಂದು ಗ್ರೀಸ್‌ನ ಅತ್ಯಂತ ಸುಂದರ ದ್ವೀಪವಾದ ಸ್ಯಾಂಟೋರಿನಿ (Santorini) ಬಳಿ ಈ ಅದ್ಧೂರಿ ವಿವಾಹ ಮಹೋತ್ಸವ ನೆರವೇರಿದ್ದು, ನವದಂಪತಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಚೆನ್ನೈ: ಇಂಡಿಯನ್​ ಪ್ರೀಮಿಯರ್​ ಲೀಗ್​ನ ( IPL ) ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯಾ ಮಾರನ್ ಮತ್ತು ದಕ್ಷಿಣ ಭಾರತ ಸಿನಿರಂಗದ ಖ್ಯಾತ ಮ್ಯೂಸಿಕ್​ ಡೈರೆಕ್ಟರ್​ ಅನಿರುದ್ಧ್ ರವಿಚಂದರ್ ( Kavya Maran-Anirudh Ravichander wedding ) ಅವರು ಗ್ರೀಸ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ವಿವಾಹ ಇದೀಗ ಸಿನಿಮಾ ಮತ್ತು ಕ್ರಿಕೆಟ್ ಲೋಕದಲ್ಲಿ ಹಾಟ್ ಟಾಪಿಕ್ ಆಗಿದೆ.

ನವೆಂಬರ್ 11 ರಂದು ಗ್ರೀಸ್‌ನ ಅತ್ಯಂತ ಸುಂದರ ದ್ವೀಪವಾದ ಸ್ಯಾಂಟೋರಿನಿ (Santorini) ಬಳಿ ಈ ಅದ್ಧೂರಿ ವಿವಾಹ ಮಹೋತ್ಸವ ನೆರವೇರಿದ್ದು, ನವದಂಪತಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ರಾಯಲ್ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್ ಸೇರಿದಂತೆ ರಾಜಕೀಯ, ಸಿನಿಮಾ ಮತ್ತು ಕ್ರೀಡಾ ಕ್ಷೇತ್ರದ ಗಣ್ಯರ ದಂಡೇ ಹರಿದುಬಂದಿತ್ತು. ಇಷ್ಟೊಂದು ಭವ್ಯವಾಗಿ ನೆರವೇರಿದ ಈ ವಿವಾಹಕ್ಕೆ ಒಟ್ಟು ಎಷ್ಟು ಕೋಟಿ ರೂಪಾಯಿ ಖರ್ಚಾಗಿರಬಹುದು? ಮತ್ತು ಮದುವೆಯ ವಿಶೇಷತೆಗಳು ಏನು? ಎಂಬ ಪ್ರಶ್ನೆಗಳು ಹಲವರ ಬಳಿ ಇದೆ. ಆ ಕುತೂಹಲಕ್ಕೆ ಉತ್ತರ ಇಲ್ಲಿದೆ.

ರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ, ಗ್ರೀಸ್‌ಗೆ ಆಗಮಿಸಿದ ಗಣ್ಯ ಅತಿಥಿಗಳ ಪ್ರಯಾಣ ಮತ್ತು ವಾಸ್ತವ್ಯಕ್ಕಾಗಿ ಮಾರನ್ ಕುಟುಂಬವು ಅತ್ಯಂತ ಐಷಾರಾಮಿ ವ್ಯವಸ್ಥೆಗಳನ್ನು ಮಾಡಿತ್ತು. ಅತಿಥಿಗಳನ್ನು ಕರೆದೊಯ್ಯಲು ಬರೋಬ್ಬರಿ ನಾಲ್ಕು ವಿಶೇಷ ಖಾಸಗಿ ವಿಮಾನಗಳು, ಪಂಚತಾರಾ ಹೋಟೆಲ್‌ಗಳಲ್ಲಿ ಐಷಾರಾಮಿ ವಾಸ್ತವ್ಯ ಹಾಗೂ ಸ್ಥಳೀಯ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಮದುವೆಗೆ ಆಗಮಿಸಿದ್ದ ರಾಜಕೀಯ ನಾಯಕರು, ಸಿನಿಮಾ ತಾರೆಯರು ಮತ್ತು ಕ್ರಿಕೆಟ್ ದಿಗ್ಗಜರಿಗೆ ಯಾವುದೇ ಕೊರತೆಯಾಗದಂತೆ ರಾಜಾತಿಥ್ಯ ನೀಡಲಾಗಿದ್ದು, ಇದಕ್ಕಾಗಿಯೇ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಲಾಗಿದೆ ಎಂದು ಅಂದಾಜಿಸಲಾಗಿದೆ.

ಯಾವುದೇ ಅದ್ಧೂರಿ ಮದುವೆಯಲ್ಲಿ ಭೋಜನವೇ ಪ್ರಮುಖ ಆಕರ್ಷಣೆಯಾಗಿರುತ್ತದೆ. ಅದರಂತೆ ಕಾವ್ಯಾ ಮತ್ತು ಅನಿರುದ್ಧ್ ವಿವಾಹದಲ್ಲೂ ಗ್ರೀಕ್ ಶೈಲಿಯ ಭರ್ಜರಿ ಔತಣಕೂಟವನ್ನು ಆಯೋಜಿಸಲಾಗಿತ್ತು. ತಾಜಾ ತರಕಾರಿಗಳು, ಸಮುದ್ರಾಹಾರ (Seafood), ಉತ್ತಮ ಗುಣಮಟ್ಟದ ಮಾಂಸಾಹಾರದ ಜೊತೆಗೆ ಸಸ್ಯಾಹಾರಿ ಮತ್ತು ವೀಗನ್ (Vegan) ಪ್ರಿಯರಿಗಾಗಿ ವಿಶೇಷ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಲಾಗಿತ್ತು.

ಇದರೊಂದಿಗೆ ವಿಡಿಯಾನೊ (Vidiano) ಮತ್ತು ಮೊಸ್ಚಾಟೊ ಸ್ಪಿನಾಸ್ (Moschato Spinas) ನಂತಹ ಸ್ಥಳೀಯ ವೈನ್‌ಗಳು ಹಾಗೂ ಔಜೊ (Ouzo), ಮಸ್ತಿಹಾ (Mastiha) ನಂತಹ ಸಾಂಪ್ರದಾಯಿಕ ಪಾನೀಯಗಳು ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದ್ದವು. ವರದಿಗಳ ಪ್ರಕಾರ, ಈ ಮದುವೆಯಲ್ಲಿ ಒಬ್ಬ ವ್ಯಕ್ತಿಯ ಒಂದು ಪ್ಲೇಟ್ ಊಟದ ವೆಚ್ಚವೇ ಸುಮಾರು 15,000 ರೂಪಾಯಿಯಿಂದ 35,000 ರೂಪಾಯಿಗಳವರೆಗೆ ಇತ್ತು ಎನ್ನಲಾಗಿದ್ದು, ಕೇವಲ ಊಟದ ಮೆನುಗಾಗಿಯೇ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಕೆಲವು ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮಗಳ ಊಹಾಪೋಹಗಳ ಪ್ರಕಾರ ಗ್ರೀಸ್‌ನಲ್ಲಿ ನಡೆದೆ ಈ ಅದ್ದೂರಿ ವಿವಾಹಕ್ಕೆ ಸುಮಾರು 150 ಕೋಟಿ ರೂ. ಖರ್ಚಾಗಿದೆ ಎನ್ನಲಾಗಿದೆ.

ಅಂದಹಾಗೆ, ಸೆಲೆಬ್ರಿಟಿಗಳು ಮತ್ತು ಶ್ರೀಮಂತರು ತಮ್ಮ ಜೀವನದ ಪ್ರಮುಖ ಸಮಾರಂಭಗಳಿಗೆ ಗ್ರೀಸ್ ದೇಶವನ್ನೇ ಏಕೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಹಲವು ವಿಶೇಷ ಕಾರಣಗಳಿವೆ. ಗ್ರೀಸ್‌ನಲ್ಲಿ ವರ್ಷದ ಸುಮಾರು 300 ದಿನಗಳ ಕಾಲ ಆಹ್ಲಾದಕರವಾದ ಬಿಸಿಲು ಮತ್ತು ಶುಭ್ರವಾದ ನೀಲಿ ಆಕಾಶವಿರುತ್ತದೆ. ಈ ಮೆಡಿಟರೇನಿಯನ್ ಹವಾಮಾನವು ಹೊರಾಂಗಣ ವಿವಾಹಗಳನ್ನು ಆಯೋಜಿಸಲು ಅತ್ಯಂತ ಪೂರಕವಾಗಿದೆ. ಸಮುದ್ರ ತೀರವಾಗಲಿ, ಬೆಟ್ಟದ ತುದಿಯಾಗಲಿ ಅಥವಾ ಹಚ್ಚಹಸಿರಿನ ಪರಿಸರವಾಗಲಿ, ಗ್ರೀಸ್ ಆರತಕ್ಷತೆಗೆ ಹೇಳಿಮಾಡಿಸಿದ ತಾಣವಾಗಿದೆ.

ಮದುವೆಯ ಫೋಟೋಗ್ರಫಿ ವಿಚಾರಕ್ಕೆ ಬಂದರೆ, ಗ್ರೀಸ್ ಕೇವಲ ನವಜೋಡಿಗಳಿಗೆ ಮಾತ್ರವಲ್ಲದೆ ಛಾಯಾಗ್ರಾಹಕರಿಗೂ ಒಂದು ಕನಸಿನ ಲೋಕವಾಗಿದೆ. ಪುರಾತನ ಕಟ್ಟಡಗಳು, ಬಿಳಿ ಬಣ್ಣದ ಸುಂದರ ಮನೆಗಳು ಮತ್ತು ಮನಮೋಹಕ ಕಡಲತೀರಗಳ ಹಿನ್ನೆಲೆಯಲ್ಲಿ ತೆಗೆಯುವ ಫೋಟೋಗಳು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತವೆ. ವಿಶೇಷವಾಗಿ ಸಂಜೆಯ ಸೂರ್ಯಾಸ್ತದ 'ಗೋಲ್ಡನ್ ಅವರ್' ಬೆಳಕಿನಲ್ಲಿ ತೆಗೆಯುವ ಫೋಟೋಗಳು ಮಾಂತ್ರಿಕ ಅನುಭವ ನೀಡುತ್ತವೆ. ಒಟ್ಟಾರೆಯಾಗಿ, ನೈಸರ್ಗಿಕ ಸೌಂದರ್ಯ, ಶ್ರೀಮಂತ ಸಂಸ್ಕೃತಿ ಮತ್ತು ರಾಜಾತಿಥ್ಯದ ನಡುವೆ ನಡೆದ ಕಾವ್ಯಾ ಮಾರನ್ ಮತ್ತು ಅನಿರುದ್ಧ್ ಅವರ ಈ ವಿವಾಹಕ್ಕೆ ಹಲವು ಕೋಟಿ ರೂಪಾಯಿಗಳು ಖರ್ಚಾಗಿದ್ದು, ವರ್ಷದ ಅತ್ಯಂತ ದುಬಾರಿ ಮತ್ತು ಸ್ಮರಣೀಯ ವಿವಾಹಗಳಲ್ಲಿ ಒಂದಾಗಿ ದಾಖಲಾಗಿದೆ, (ಏಜೆನ್ಸೀಸ್​).