ಜನನಾಯಗನ್ ಸಿನಿಮಾ ತಂಡ ಕೋರ್ಟ್ ಮೆಟ್ಟಿಲೇರಬಾರದಿತ್ತು...ವಿಜಯ್ಗೆ ಪವನ್ ಕಲ್ಯಾಣ್ ಕೊಟ್ಟ ಸಲಹೆ ಏನು? Pawan kalyan
- ಜ.09ರಂದು ರಿಲೀಸ್ ಆಗಬೇಕಿದ್ದ ಜನನಾಯಗನ್ ಸಿನಿಮಾಗೆ ನೂರೆಂಟು ತೊಡಕು
- ಯಾವುದೇ ಸಿನಿಮಾದಲ್ಲಿ ಹಿಂಸಾತ್ಮಕ ದೃಶ್ಯವಿದ್ದರೆ ಪರಿಷ್ಕರಣೆ ಮಾಡಲೇ ಬೇಕು
- ಜನನಾಯಗನ್ ಸಿನಿಮಾ ತಂಡ ಕೋರ್ಟ್ ಮೆಟ್ಟಿಲೇರಬಾರದಿತ್ತು ಎಂದ ಪವನ್ ಕಲ್ಯಾಣ್
ಅಮರಾವತಿ: ನಟ ವಿಜಯ್ ಅವರು ಸಿನಿಮಾ ತೊರೆದು ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. 2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ಭರಪೂರ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ಅವರ ಕೊನೆಯ ಸಿನಿಮಾ ಜನನಾಯಗನ್ ರಿಲೀಸ್(Jananayagan Cinema) ಆಗದೆ ಇರುವುದು ಅವರನ್ನು ಕಾಡುತ್ತಿರುವ ಗೊಂದಲವಾಗಿದೆ. ಈ ಬಗ್ಗೆ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಮಾತನಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ಜನನಾಯಗನ್ ಚಿತ್ರದಲ್ಲಿ ಕೆಲವೊಂದು ಕೋಮು ಅಂಶಗಳು ಮತ್ತು ಹಿಂಸಾತ್ಮಕ ದೃಶ್ಯಗಳು ಇರುವ ಹಿನ್ನೆಲೆ ಅವುಗಳನ್ನು ಪರಿಷ್ಕರಿಸುವ ಬಗ್ಗೆ, ಸೆನ್ಸಾರ್ ಮಂಡಳಿ ಮತ್ತು ಚಿತ್ರತಂಡದ ನಡುವೆ ಹಗ್ಗಜಗ್ಗಾಟ ಮುಂದುವರೆದಿದೆ. ಕೋರ್ಟ್ ಮೆಟ್ಟಿಲೇರಿದರೂ ಸಹ ಪ್ರಮಾಣ ಪತ್ರ ಸಿಕ್ಕಿಲ್ಲ. ಇದರಿಂದ ಜನವರಿ09ರಂದು ರಿಲೀಸ್ ಆಗಬೇಕಿದ್ದ ಸಿನಿಮಾವನ್ನು ಹಲವಾರು ಬಾರಿ ಮುಂದೂಡುಲಾಗುತ್ತಿದೆ. ಸದ್ಯ ಈ ಪ್ರಕರಣವು ಮದ್ರಾಸ್ ಹೈಕೋರ್ಟ್ನಲ್ಲಿದೆ.
ಪವನ್ ಕಲ್ಯಾಣ್ ಹೇಳಿದ್ದಿಷ್ಟು..
`ಜನನಾಯಗನ್ ಸಿನಿಮಾ ರಿಲೀಸ್ ಬಗ್ಗೆ ಇದ್ದ ಸಮಸ್ಯೆಯನ್ನು ಸೆನ್ಸಾರ್ ಮಂಡಳಿ ಮಟ್ಟದಲ್ಲಿ ನಿವಾರಿಸಬಹುದಿತ್ತು. ಆದರೆ, ಚಿತ್ರತಂಡ ಹಾಗೆ ಮಾಡಲಿಲ್ಲ. ಕೋರ್ಟ್ ಮೆಟ್ಟಿಲೇರಿದರು. ತಾವು ಮಾಡಿಕೊಂಡಿರುವ ತಪ್ಪಿಗೆ ಎನ್ಡಿಎ ಸರ್ಕಾರವನ್ನು ದೂಷಿಸುವುದು ಎಷ್ಟು ಸರಿ ಎಂದು ಉಸ್ತಾದ್ ಭಗತ್ ಸಿಂಗ್ (Ustad Bhagath Singh)ಸಿನಿಮಾ ಪ್ರೀ ರಿಲೀಸ್ ಇವೆಂಟ್ನಲ್ಲಿ ನಟ ಮತ್ತು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹೇಳಿದರು.
ನಿಯಮ ಎಲ್ಲರಿಗೂ ಒಂದೇ
2025ರ ಸೆಪ್ಟೆಂಬರ್ನಲ್ಲಿ ಓಜಿ ಸಿನಿಮಾ ರಿಲೀಸ್ ಆಗಿತ್ತು. ನನ್ನ ಈ ಚಿತ್ರ ರಿಲೀಸ್ ಆಗುವ ಮುನ್ನ ನಿರ್ದೇಶಕರು ಮತ್ತು ನಿರ್ಮಾಪಕರು ನನ್ನ ಬಳಿಗೆ ಬಂದು. ನೀವು ಎನ್ಡಿಎ ಸರ್ಕಾರದ ಭಾಗವಾಗಿದ್ದೀರಿ. ಹೀಗಾಗಿ ಸೆನ್ಸಾರ್ ಮಂಡಳಿಯಿಂದ `ಎ' ಪ್ರಮಾಣ ಪತ್ರ ಪಡೆಯೋದು ಸುಲಭ ಎಂದು ಹೇಳಿದರು. ಆಗ ನಾನು ಅದು ಹೇಗೆ ಸಾಧ್ಯ? ಚಿತ್ರದಲ್ಲಿ ಹಿಂಸಾತ್ಮಕ ದೃಶ್ಯ ತಂದು ಪ್ರಮಾಣ ಪತ್ರ ಸಿಗೋ ಬಗ್ಗೆ ಹೇಗೆ ಭರವಸೆ ಇಟ್ಟುಕೊಳ್ಳುತ್ತೀರಿ. ನಿಯಮ ಎಂದರೆ ಎಲ್ಲರಿಗೂ ಒಂದೆನೇ ಎಂದು ಹೇಳಿದೆ.
`ಸಿನಿಮಾ ರಿಲೀಸ್ಗಾಗಿ ಎ ಪ್ರಮಾಣ ಪತ್ರ ಪಡೆಯಲು ನಾನು ನನ್ನ ಪ್ರಭಾವ ಬೀರಿದರೂ ಸಹ ಆಡಳಿತ ಮತ್ತು ಸೆನ್ಸಾರ್ ಶಿಪ್ ಸಂಪರ್ಕಿಸಲು ಸಾಧ್ಯವಾಗೋದಿಲ್ಲ. ಉಸ್ತಾದ್ ಭಗತ್ ಸಿಂಗ್ ಸಿನಿಮಾದಲ್ಲಿಯೂ ಹಾಡೊಂದನ್ನು ಬದಲಾಯಿಸಲು ಸೂಚನೆ ಕೊಟ್ಟಾಗ ಅದರ ಪಾಲನೆ ಮಾಡಲೇ ಬೇಕಾಯಿತು' ಎಂದು ಹೇಳಿದರು.
`ಏನೇ ಆಗಲಿ ಜನನಾಯಗನ್ ಸಿನಿಮಾ ಪರಿಷ್ಕರಣೆ ಬಗ್ಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(CBFC) ಸೂಚನೆ ಕೊಟ್ಟರೆ, ಅದನ್ನು ಪಾಲಿಸುವುದು ಬಿಟ್ಟು ಬೇರೆ ಮಾರ್ಗವಿಲ್ಲ. ಇವರು ಕೋರ್ಟ್ಗೆ ಹೋಗಬಾರದಿತ್ತು. ಇಲ್ಲದಿದ್ದರೇ ಅದು ಬೇರೆಯೇ ಕತೆಯಾಗಿರುತ್ತಿತ್ತು' ಎಂದು ಡಿಸಿಎಂ ಪವನ್ ಕಲ್ಯಾಣ್ ಹೇಳಿದರು.
ಸಿನಿಮಾದಲ್ಲಿ ಯಾರೆಲ್ಲ ಇದ್ದಾರೆ
ಎಚ್ ವಿನೋದ್ ಅವರು ನಿರ್ದೇಶಿರುವ ಜನನಾಯಗನ್ ಸಿನಿಮಾದಲ್ಲಿ ವಿಜಯ್ ಅವರು ನಟಿಸಿದ್ದಾರೆ. ಇದು ಅವರ 69ನೇ ಸಿನಿಮಾ ಅಲ್ಲದೇ, ಕೊನೆಯ ಸಿನಿಮಾವಾಗಿದೆ. ಕೆವಿಎನ್ ಪ್ರೊಡಕ್ಷನ್ ಅಡಿ ನಿರ್ಮಾಣವಾಗಿರುವ ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ, ಮಮಿತಾ ಬೈಜು, ಬಾಬಿ ಡಿಯೋಲ್, ಪ್ರಕಾಶ್ ರಾಜ್, ಪ್ರಿಯಾಮಣಿ ಸೇರಿದಂತೆ ಘಟಾನುಘಟಿ ನಾಯಕ-ನಟಿಯರಿದ್ದಾರೆ. ಇನ್ನು ಅನಿರುದ್ಧ್ ರವಿಚಂದರ್ ಅವರ ಸಂಗೀತ ಈ ಸಿನಿಮಾದಲ್ಲಿ ಮೂಡಿಬಂದಿದೆ, (ಏಜನ್ಸೀಸ್).