ಇನ್ನು ಕೆಲವೇ ದಿನ... 1000 ಕೋಟಿ ಕ್ಲಬ್​ ಸೇರಬೇಕಿದ್ದ 'ಜೈಲರ್​ 2' ಕನಸು ನುಚ್ಚುನೂರು ಮಾಡಿದ್ದೇ ಚಿತ್ರತಂಡ! | Jailer 2  
ಕಾಲಿವುಡ್

ಇನ್ನು ಕೆಲವೇ ದಿನ... 1000 ಕೋಟಿ ಕ್ಲಬ್​ ಸೇರಬೇಕಿದ್ದ 'ಜೈಲರ್​ 2' ಕನಸು ನುಚ್ಚುನೂರು ಮಾಡಿದ್ದೇ ಚಿತ್ರತಂಡ! | Jailer 2

ಚೆನ್ನೈ: ತಮಿಳಿನ ಸೂಪರ್​ಸ್ಟಾರ್​, ಅಭಿಮಾನಿಗಳ ನೆಚ್ಚಿನ 'ತಲೈವಾ' ರಜಿನಿಕಾಂತ್​ ಅಭಿನಯದ ಹಾಗೂ ನೆಲ್ಸನ್​ ದಿಲೀಪ್​ಕುಮಾರ್​ ನಿರ್ದೇಶನದ 'ಜೈಲರ್ 2' (Jailer 2 ) ಸಿನಿಮಾ ಸದ್ಯ ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ 800 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಕಂಡಿದ್ದು, ತಮಿಳು ಮತ್ತು ಭಾರತೀಯ ಚಿತ್ರೋದ್ಯಮದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಜೈಲರ್​ ಭಾಗ 1ಕ್ಕಿಂತ ಅಧಿಕ ಕಲೆಕ್ಷನ್​ ಅನ್ನು ಬಹಳ ಕಡಿಮೆ ಸಮಯದಲ್ಲಿ ಹಿಂದಿಕ್ಕಿದ ಈ ಚಿತ್ರದ ಸಾವಿರ ಕೋಟಿ ಕ್ಲಬ್​ ಕನಸು ಇದೀಗ ನುಚ್ಚುನೂರಾಗಿದೆ.

ಕಾಲಿವುಡ್ ಚಿತ್ರರಂಗವನ್ನು ಹಲವು ವರ್ಷಗಳಿಂದ ಕಾಡುತ್ತಿರುವ 1000 ಕೋಟಿ ರೂ. ಬಾಕ್ಸ್ ಆಫೀಸ್ ಟಾರ್ಗೆಟ್​ ಅನ್ನು ಜೈಲರ್ 2 ಸುಲಭವಾಗಿ ತಲುಪಲಿದೆ ಎಂದು ತಮಿಳು ಚಿತ್ರಪ್ರೇಮಿಗಳು ನಿರೀಕ್ಷಿಸಿದ್ದರು. ದಸರಾ ರಜೆಗಳಿರುವ ಸಮಯದಲ್ಲೇ ರಿಲೀಸ್ ಮಾಡುವ ಮೂಲಕ ಭರ್ಜರಿ ಓಪನಿಂಗ್​, ಸಖತ್‌ ವೀಕೆಂಡ್‌ ಕಲೆಕ್ಷನ್‌ಗಳೊಂದಿಗೆ ಹೊಸ ಭರವಸೆ ಮೂಡಿಸಿತು. ಬಿಡುಗಡೆಗೊಂಡ 8 ದಿನಕ್ಕೆ ಚಿತ್ರವು ಸುಲಭವಾಗಿ 600 ಕೋಟಿ ರೂ. ಗಳಿಸಿತು. ಶೀಘ್ರವೇ 1000 ಕೋಟಿ ಕ್ಲಬ್​ ಸೇರಲಿದೆ ಎಂದು ಕಾಯುತ್ತಿದ್ದ ಅಭಿಮಾನಿಗಳ ಆಸೆಗೆ ಇದೀಗ ಚಿತ್ರತಂಡವೇ ತಣ್ಣೀರೆರಚಿದೆ.

ಈ ಹಿಂದೆ 'ರೋಬೋ 2.0' ಗಳಿಸಿದ್ದ ಸಾರ್ವಕಾಲಿಕ ಅತ್ಯಧಿಕ ಕಲೆಕ್ಷನ್ಸ್ ದಾಖಲೆಯನ್ನು ಹಿಂದಿಕ್ಕಿ ರಜಿನಿಕಾಂತ್ ತಮ್ಮ ಹಳೆಯ ದಾಖಲೆಗಳನ್ನು ಮತ್ತೆ ಪುಡಿಗಟ್ಟಿದ್ದಾರೆ. ಇದರೊಟ್ಟಿಗೆ 'ಜೈಲರ್ 1' ಚಿತ್ರದ ಲೈಫ್​​ಟೈಮ್​ ಕಲೆಕ್ಷನ್​ ಆದ 604 ಕೋಟಿ ರೂ. ಅನ್ನು ಭಾಗ 2 ಮುರಿದು ಹಾಕಿದೆ. ಇಷ್ಟೆಲ್ಲ ದಾಖಲೆಯನ್ನು ಹಿಂದಿಕ್ಕಿ, ಕಾಲಿವುಡ್​ನಲ್ಲಿ ಸಾವಿರ ಕೋಟಿ ಕ್ಲಬ್ ಸೇರುವ ಅವಕಾಶ ಸಿಕ್ಕಿದ್ದರೂ ಚಿತ್ರತಂಡ ಒಟಿಟಿ ಡೀಲ್​ಗೆ ಆಸೆಪಟ್ಟು ಇದೀಗ ಆ ಮೈಲಿಗಲ್ಲಿಗೆ ಫುಲ್​ಸ್ಟಾಪ್​ ಹಾಕಿದೆ. ​ ​

ತಮಿಳು ಚಿತ್ರರಂಗದ 1000 ಕೋಟಿ ಕನಸಿನ ಹಾದಿಗೆ ಪ್ರೈಮ್​ ವಿಡಿಯೋಗೆ ನೀಡಿದ ಒಟಿಟಿ ಡೀಲ್​ ಪ್ರಮುಖ ಕಾರಣ. ಅಕ್ಟೋಬರ್ 15ರಂದು ರಿಲೀಸ್​ ಆದ ಚಿತ್ರವನ್ನು ಒಂದು ತಿಂಗಳೊಳಗೆ ಡಿಜಿಟಲ್ ಪ್ಲಾಟ್​ಫಾರ್ಮ್​ಗೆ ಕೊಟ್ಟಿರುವುದು ಸದ್ಯ ರಜಿನಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇದೇ ನವೆಂಬರ್ 12ರಿಂದ ಪ್ರೈಮ್​ನಲ್ಲಿ ಚಿತ್ರವು ಸ್ಟ್ರೀಮ್ ಆಗಲಿದೆ. ಈ ವಿಷಯವನ್ನು ಒಂದು ವಾರ ಮುಂಚಿತವಾಗಿಯೇ ಅಧಿಕೃತವಾಗಿ ಘೋಷಿಸಿದ ಹಿನ್ನೆಲೆ ಚಿತ್ರಮಂದಿರಗಳಿಗೆ ಹೋಗಬೇಕಿದ್ದ ಪ್ರೇಕ್ಷಕರ ಸಂಖ್ಯೆ ಇದೀಗ ದಿಢೀರ್ ಕಡಿಮೆಯಾಗಿದೆ. ಇದು ಇನ್ನೂ 200 ಕೋಟಿ ರೂ. ಗಳಿಸಲು ಸಾಧ್ಯವಾಗದಂತೆ ಮಾಡಿಟ್ಟಿದೆ ಎಂಬುದರಲ್ಲಿ ಅನುಮಾನವೇ ಇಲ್ಲ,(ಏಜೆನ್ಸೀಸ್).