ಅವನೊಬ್ಬ ಮದ್ರಾಸಿನ ಎಫ್ಟ್ಸೀನ್ ಎಂದ ಗಾಯಕಿ ಸ್ವಾಗತ ಕೃಷ್ಣನ್!
- ತಮಿಳು ಸಂಗೀತ ನಿರ್ದೇಶಕನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ
- ಅವನೊಬ್ಬ ಮದ್ರಾಸಿನ ಎಫ್ಟ್ಸೀನ್ ಎಂದ ಗಾಯಕಿ ಸ್ವಾಗತ ಕೃಷ್ಣನ್!
- ಆದಿನ ಸ್ಟುಡಿಯೋನಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದ ಗಾಯಕಿ
ಚೆನ್ನೈ: ಸಿನಿಮಾ ರಂಗದ ಗ್ಲಾಮರ್ ಲೋಕದ ಹಿಂದೆ ಕರಾಳ ಮುಖವೊಂದು ಅಡಗಿರುತ್ತದೆ ಎನ್ನುವುದು ಪದೇ ಪದೇ ಸಾಬೀತಾಗುತ್ತಾ ಇರುತ್ತದೆ. ಇದೀಗ ತಮಿಳು ಹಾಗೂ ತೆಲುಗಿನ ಖ್ಯಾತ ಗಾಯಕಿ ಸ್ವಾಗತ ಕೃಷ್ಣನ್ (Swagatha Krishnan) ತಾವು ಎದುರಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗವಾಗಿ ಮಾತನಾಡುವ ಮೂಲಕ ತಮಿಳು ಚಿತ್ರರಂಗದಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಆತ ಮದ್ರಾಸ್‌ನ ಎಫ್ಟ್ಸೀನ್!
ಆರೋಪಿ ಸಂಗೀತ ನಿರ್ದೇಶಕನನ್ನು ಸ್ವಾಗತ ಮದ್ರಾಸ್‌ನ ಎಫ್ಟ್ಸೀನ್ ಎಂದು ಕರೆದಿದ್ದು, ಆತ ಈ ನಿಜ ಕೃತ್ಯವನ್ನು ಎಷ್ಟು ವ್ಯವಸ್ಥಿತವಾಗಿ ಮಾಡುತ್ತಿದ್ದ ಎಂದು ವಿವರಿಸಿದ್ದಾರೆ. ಸ್ವಾಗತ ಕೃಷ್ಣನ್ ಅವರು 'ಬ್ಯಾಚುಲರ್' ಮತ್ತು 'ಇಸ್ಪಡೆ ರಾಜವುಮ್ ಇರುಧಯ ರಾಣಿಯುಮ್' ಅಂತಹ ಹಿಟ್ ಚಿತ್ರಗಳ ಹಾಡುಗಳ ಮೂಲಕ ಮನೆಮಾತಾದವರು.
ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಕಣ್ಣೀರಿಡುತ್ತಾ ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ. ಆ ಸಂಗೀತ ನಿರ್ದೇಶಕ ಮೊದಲು ತನ್ನನ್ನು ಮಾರ್ಗದರ್ಶಕ ಎಂದು ಬಿಂಬಿಸಿಕೊಂಡು ನಂಬಿಕೆ ಗಳಿಸಿದ್ದನಂತೆ. ನಂತರ ಆರ್ಥಿಕ ಸಹಾಯ ಮಾಡುವ ನೆಪದಲ್ಲಿ ಹತ್ತಿರವಾಗಿ, ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದ ಎಂದು ಅವರು ಆರೋಪಿಸಿದ್ದಾರೆ.
ಸೌಂಡ್ ಪ್ರೂಫ್ ಸ್ಟುಡಿಯೋದಲ್ಲಿ ನಡೆದಿದ್ದೇನು?
ಅದೊಂದು ಸೌಂಡ್ ಪ್ರೂಫ್ ಸ್ಟುಡಿಯೋ. ನಾನು ಅಲ್ಲಿ ಸುರಕ್ಷಿತವಾಗಿರುತ್ತೇನೆ ಎಂದು ನಂಬಿದ್ದೆ. ಆದರೆ ಅದು ಲಾಕ್ ಆಗಿತ್ತು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅಲ್ಲಿ ಗುಪ್ತ ಕ್ಯಾಮೆರಾಗಳು ಕೂಡ ಇದ್ದವು. ದೌರ್ಜನ್ಯ ನಡೆದಾಗ ನಾನು ಕಿರುಚಿದರೂ ನನ್ನ ಧ್ವನಿ ಯಾರಿಗೂ ಕೇಳಿಸಲಿಲ್ಲ, ಎಂದು ಸ್ವಾಗತ ಆ ಭಯಾನಕ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಆ ಕೃತ್ಯವನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಂಡಿದ್ದ ಆ ವ್ಯಕ್ತಿ, ನಂತರ ಅದನ್ನು ಬಳಸಿ ಬೆದರಿಕೆ ಹಾಕುತ್ತಿದ್ದ ಎಂದು ಆರೋಪ ಮಾಡಿದ್ದಾರೆ.
ಅವನು ಮುಟ್ಟಿದ ಚರ್ಮವೇ ಬೇಡವೆನಿಸಿತು
ಅವನು ಮುಟ್ಟಿದ ನನ್ನ ದೇಹದ ಭಾಗಗಳು ಅಸ್ತಿತ್ವದಲ್ಲೇ ಇರಬಾರದು ಎನಿಸಿತ್ತು. ಆ ನೆನಪುಗಳನ್ನು ಅಳಿಸಿಹಾಕಲು ನಾನು ಚರ್ಮದ ಚಿಕಿತ್ಸೆಗೂ ಒಳಗಾಗಬೇಕಾಯಿತು ಎಂದು ಅವರು ಹೇಳಿದ್ದಾರೆ. ದಿನಗಟ್ಟಲೆ ತನ್ನನ್ನು ತಾನು ಕೋಣೆಯಲ್ಲಿ ಕೂಡಿ ಹಾಕಿಕೊಂಡಿದ್ದೆ ಎಂದು ಸ್ವಾಗತಾ ಹೇಳಿದ್ದಾರೆ.
ಕಾನೂನು ಹೋರಾಟಕ್ಕೆ ಸಿದ್ಧತೆ
ಸಂದರ್ಶನದಲ್ಲಿ ಅವರು ಸಂಗೀತ ನಿರ್ದೇಶಕನ ಹೆಸರನ್ನು ನೇರವಾಗಿ ಹೇಳದಿದ್ದರೂ, ಅವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ಇದು ಸೇಡಿಗಾಗಿ ಅಲ್ಲ, ಬದಲಾಗಿ ಬೇರೆ ಯಾವುದೇ ಮಹಿಳೆ ಅಥವಾ ಮಕ್ಕಳಿಗೆ ಈ ಪರಿಸ್ಥಿತಿ ಬರಬಾರದು ಎಂಬ ಕಾರಣಕ್ಕೆ ನಾನು ಈ ಹೋರಾಟ ಮಾಡುತ್ತಿದ್ದೇನೆ ಎಂದು ಅವರು ಧೃಢವಾಗಿ ಹೇಳಿದ್ದಾರೆ. ಇದೇ ವ್ಯಕ್ತಿಯಿಂದ ತೊಂದರೆ ಅನುಭವಿಸಿದ ಹಲವು ಮಹಿಳೆಯರು ಈಗ ತನಗೆ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ, (ಏಜನ್ಸೀಸ್).