ಚೆನ್ನೈ: ತಮಿಳು ಸಿನಿಮಾ ರಂಗದ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ( Anirudh Ravichander ) ಹಾಗೂ ಪ್ರಸಿದ್ಧ ನಿರ್ಮಾಪಕ ಕಲಾನಿಧಿ ಮಾರನ್ ಅವರ ಪುತ್ರಿ ಹಾಗೂ ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ತಂಡದ ಒಡತಿ ಕಾವ್ಯಾ ಮಾರನ್ ಅವರ ಮದುವೆ ಸುದ್ದಿಯು ಸದ್ಯ ದಕ್ಷಿಣ ಭಾರತದಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ಈ ನವ ಜೋಡಿಯ ಮದುವೆ ದಿನಾಂಕ ಹೊರ ಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ 13 ವರ್ಷಗಳ ಹಿಂದಿನ ಹಳೆಯ ಸಂದರ್ಶನವೊಂದರ ವಿಡಿಯೋ ತುಣುಕು ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಅಭಿಮಾನಿಗಳನ್ನೂ ಅಚ್ಚರಿಗೊಳಿಸಿದೆ.
ಹದಿಮೂರು ವರ್ಷಗಳ ಹಿಂದೆ 'ತಂತಿ ಟಿವಿ' (Thanthi TV) ವಾಹಿನಿಯಲ್ಲಿ ಪ್ರಸಾರವಾದ ಸಂದರ್ಶನದಲ್ಲಿ, ನಟಿ ನಮಿತಾ ಜತೆ ಅನಿರುದ್ಧ್ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಟ್ಯಾರೋ ಕಾರ್ಡ್ (Tarot Cards) ಮೂಲಕ ಭವಿಷ್ಯ ನುಡಿಯುವ ಜಯಶ್ರೀ ಎಂಬ ಮಹಿಳೆ ಕೂಡ ಭಾಗವಹಿಸಿದ್ದರು. ಈ ವೇಳೆ ಅನಿರುದ್ಧ್ ಅವರ ಮುಂದಿನ ಮದುವೆ ಮತ್ತು ಜೀವನ ಸಂಗಾತಿಯ ಬಗ್ಗೆ ಜಯಶ್ರೀ ಅವರು ಅಂದೇ ಕೆಲವು ಕುತೂಹಲಕಾರಿ ಭವಿಷ್ಯ ನುಡಿದಿದ್ದರು. ಪ್ರೇಮ ವಿವಾಹವಾದರೂ ಅಂತಿಮವಾಗಿ ತಮ್ಮ ತಂದೆ ಒಪ್ಪಿದ ಹೆಣ್ಣನ್ನೇ ಅನಿರುದ್ಧ್ ವರಿಸಲಿದ್ದಾರೆ ಎಂದು ತಿಳಿಸಿದ್ದರು.
ಆ ಭವಿಷ್ಯವಾಣಿಯ ಪ್ರಕಾರ, ಅನಿರುದ್ಧ್ ಅವರ ಭವಿಷ್ಯದ ವಧು ಸಿನಿಮಾ ರಂಗಕ್ಕೆ ಸೇರಿದವರಲ್ಲ, ಬದಲಿಗೆ ಅತ್ಯಂತ ಉನ್ನತ ಶಿಕ್ಷಣ ಪಡೆದ ಹಾಗೂ ತಾರ್ಕಕಿವಾಗಿ (Logically) ಯೋಚಿಸುವ ಮಹಿಳೆಯಾಗಿರುತ್ತಾರೆ ಎಂದು ಹೇಳಿದ್ದರು. ವಧು ಯಾವ ಕ್ಷೇತ್ರಕ್ಕೆ ಸೇರಿದವರು ಎಂದು ಸ್ವತಃ ಅನಿರುದ್ಧ್ ಪ್ರಶ್ನಿಸಿದಾಗ, ಅವರು 'ಟೆಲಿಕಮ್ಯುನಿಕೇಷನ್ ಬ್ರಾಡ್ಕಾಸ್ಟಿಂಗ್' (Broadcasting Sector) ಕ್ಷೇತ್ರಕ್ಕೆ ಸಂಬಂಧಿಸಿದವರಾಗಿರುತ್ತಾರೆ ಎಂದು ಜಯಶ್ರೀ ಭವಿಷ್ಯ ನುಡಿದಿದ್ದರು. ಅಲ್ಲದೆ ಚೆನ್ನೈ ಮೂಲದವರಾದ ಇವರು ಮೊದಲ ಬಾರಿಗೆ ಪಾರ್ಟಿಯೊಂದರಲ್ಲಿ ಭೇಟಿಯಾಗಲಿದ್ದಾರೆ ಎಂದೂ ಹೇಳಲಾಗಿತ್ತು.
ಸದ್ಯ ಈ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಂದಿನ ಆ ಭವಿಷ್ಯವಾಣಿಯು ಕಾವ್ಯಾ ಮಾರನ್ ಅವರಿಗೇ ಹೇಳಲಾಗಿದೆ ಎಂದು ಅಭಿಮಾನಿಗಳು ಈಗ ಹೋಲಿಸಿ ಮಾತನಾಡಿಕೊಳ್ಳುತ್ತಿದ್ದಾರೆ. ಕಲಾನಿಧಿ ಮಾರನ್ ಅವರು ಪ್ರಸಾರ ಮತ್ತು ಮಾಧ್ಯಮ ರಂಗದ (Broadcasting sector) ದಿಗ್ಗಜರಾಗಿರುವುದರಿಂದ, 13 ವರ್ಷಗಳ ಹಿಂದೆ ನುಡಿದ ಈ ಭವಿಷ್ಯವು ಅಚ್ಚರಿ ಎಂಬಂತೆ ಈಗ ನಿಜವಾಗಿದೆ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.
ಮತ್ತೊಂದೆಡೆ, ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಅವರ ವಿವಾಹವು ಮುಂಬರುವ ನವೆಂಬರ್ 11 ರಂದು ಗ್ರೀಸ್ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಇದಾದ ಬಳಿಕ ನವೆಂಬರ್ 21 ರಂದು ಚೆನ್ನೈನಲ್ಲಿ ಅದ್ಧೂರಿ ಮದುವೆ ರಿಸೆಪ್ಷನ್ ಜರುಗಲಿದೆ ಎನ್ನಲಾಗಿದ್ದು, ಈ ಮದುವೆಗೆ ತಮಿಳುನಾಡು ಸೇರಿದಂತೆ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯರನ್ನು ಆಹ್ವಾನಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ, (ಏಜೆನ್ಸೀಸ್).