

Janhvi Kapoor and Neha Sharma : ಸಾಮಾಜಿಕ ಜಾಲತಾಣ ಎಂಬ ಅತಿವೇಗದ ಪ್ರಪಂಚದಲ್ಲಿ ದಿನಕ್ಕೊಂದು ಹೊಸ ತಂತ್ರಜ್ಞಾನ ಹುಟ್ಟಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಅದೇ ತಂತ್ರಜ್ಞಾನವು ಸೆಲೆಬ್ರಿಟಿಗಳಿಗೆ ದೊಡ್ಡ ಶಾಪವಾಗಿ ಪರಿಣಮಿಸುತ್ತಿದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಡೀಪ್ಫೇಕ್ (Deepfake) ಎಂಬ ಕೃತಕ ಬುದ್ಧಿಮತ್ತೆಯ (AI) ವಿಕೃತ ರೂಪವು ಇಡೀ ಸಿನಿರಂಗವನ್ನು ಬೆಚ್ಚಿಬೀಳಿಸುತ್ತಿದೆ. ತಂತ್ರಜ್ಞಾನದ ದುರ್ಬಳಕೆ ಮಾಡಿಕೊಳ್ಳುವ ಸೈಬರ್ ಕಳ್ಳರು ನಟಿಯರ ಮುಖವನ್ನು ಮಾರ್ಫ್ ಮಾಡಿ ಅಸಭ್ಯ ವಿಡಿಯೋಗಳನ್ನು ಸೃಷ್ಟಿಸುತ್ತಿದ್ದು, ಇದು ಚಿತ್ರರಂಗದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ.
ನಿನ್ನೆಷ್ಟೇ ಬಾಲಿವುಡ್ನ ಯುವ ನಟಿ ಜಾಹ್ನವಿ ಕಪೂರ್ ಅವರ ನಕಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ದೊಡ್ಡ ವಿವಾದ ಸೃಷ್ಟಿಸಿತ್ತು. ಆ ವಿವಾದದ ಬೆಂಕಿ ಆರುವುದರೊಳಗೆ, ಮತ್ತೊಬ್ಬ ಪ್ರತಿಭಾವಂತ ನಟಿ ನೇಹಾ ಶರ್ಮಾ ಕೂಡ ಈ ಸೈಬರ್ ಗ್ಯಾಂಗ್ಗಳ ಕರಾಳ ನೆರಳಿಗೆ ಬಲಿಯಾಗಿದ್ದಾರೆ. ದಿನದಿಂದ ದಿನಕ್ಕೆ ಸಿನಿಮಾ ನಟಿಯರನ್ನು ಟಾರ್ಗೆಟ್ ಮಾಡುತ್ತಿರುವ ಈ ಡೀಪ್ಫೇಕ್ ದಂಧೆಯು ಕೇವಲ ಮನರಂಜನಾ ಲೋಕವಷ್ಟೇ ಅಲ್ಲದೆ, ಇಡೀ ಸಮಾಜ ತಲೆತಗ್ಗಿಸುವಂತಹ ವಾತಾವರಣವನ್ನು ನಿರ್ಮಿಸುತ್ತಿದೆ.
ತನ್ನ ಮುಖವನ್ನು ಅನುಮತಿಯಿಲ್ಲದೆ ಬಳಸಿ, ಲೈಕ್ಸ್ ಮತ್ತು ಶೇರ್ಗಳಿಗಾಗಿ ಇಂತಹ ವಿಕೃತ ಕಂಟೆಂಟ್ ಸೃಷ್ಟಿಸುತ್ತಿರುವವರ ವಿರುದ್ಧ ನಟಿ ನೇಹಾ ಶರ್ಮಾ ಸಿಡಿದೆದ್ದಿದ್ದಾರೆ. ಸೈಬರ್ ಅಪರಾಧಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅನಾಮಧೇಯ ಅಥವಾ ನಕಲಿ ಅಕೌಂಟ್ಗಳ ಹಿಂದೆ ಕುಳಿತುಕೊಂಡು ಕೃತ್ಯ ಎಸಗಿದರೂ, ಕಾನೂನಿನ ಮೂಲಕ ಅವರನ್ನು ಸುಲಭವಾಗಿ ಪತ್ತೆಹಚ್ಚಿ ಜೈಲಿಗೆ ಕಳುಹಿಸುವುದಾಗಿ ಅವರು ನೇರ ಎಚ್ಚರಿಕೆ ಸಂದೇಶ ರವಾಯಿಸಿದ್ದಾರೆ.
ಇಂಟರ್ನೆಟ್ನಲ್ಲಿ ಹರಿದಾಡುತ್ತಿರುವ ಆ ಆಕ್ಷೇಪಾರ್ಹ ಹಾಗೂ ಅಶ್ಲೀಲ ವಿಡಿಯೋಗಳನ್ನು ತಕ್ಷಣವೇ ಡಿಲೀಟ್ ಮಾಡುವಂತೆ ಅವರು ಕಟ್ಟುನಿಟ್ಟಾಗಿ ಆಗ್ರಹಿಸಿದ್ದಾರೆ. ನಟಿಯರ ವೈಯಕ್ತಿಕ ಗೌರವಕ್ಕೆ ಚ್ಯುತಿ ತರುವ ಈ ರೀತಿಯ ಡೀಪ್ಫೇಕ್ ಅರಾಜಕತೆಯನ್ನು ಹೇಗೆ ಮಟ್ಟಹಾಕುವುದು ಎಂಬ ಬಗ್ಗೆ ಈಗ ಸಿನಿರಂಗದಲ್ಲಿ ಮತ್ತು ಸೈಬರ್ ತಜ್ಞರ ನಡುವೆ ಗಂಭೀರ ಚರ್ಚೆಗಳು ಆರಂಭವಾಗಿವೆ. ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲದೆ ಸಾಮಾನ್ಯ ಹೆಣ್ಣುಮಕ್ಕಳ ಸುರಕ್ಷತೆಯೂ ಕೂಡ ಪ್ರಶ್ನೆ ಚಿಹ್ನೆಯಾಗಿ ಉಳಿದಿದೆ.
ಸೈಬರ್ ಅಪರಾಧಗಳ ಈ ಹೊಸ ಭೂತಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ, ಸಾಮಾಜಿಕ ಜಾಲತಾಣಗಳ ದೋಷಪೂರಿತ ಅಲ್ಗಾರಿದಮ್ಗಳು ಇದಕ್ಕೆ ಕುಮ್ಮಕ್ಕು ನೀಡುತ್ತಿವೆ. ಸೆಲೆಬ್ರಿಟಿಗಳ ಮೇಲಿನ ಇಂತಹ ಸೈಬರ್ ದಾಳಿಗಳನ್ನು ತಡೆಯಲು ಸರ್ಕಾರ, ಕಾನೂನು ಜಾರಿ ಸಂಸ್ಥೆಗಳು ಮತ್ತು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ಒಟ್ಟಾಗಿ ಕಠಿಣ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಡೀಪ್ಫೇಕ್ ವೈರಸ್ ಯಾರನ್ನು ಬಲಿಪಡೆಯಲಿದೆ ಎಂಬ ಆತಂಕ ಎಲ್ಲೆಡೆ ಆವರಿಸಿದೆ, (ಏಜೆನ್ಸೀಸ್).